ಜಾಜ್ಪುರ್(ಒಡಿಶಾ): "ನಾನು ಬೆಳಿಗ್ಗೆದ್ದ ನಂತರ ಆಹಾರ ಸೇವಿಸುತ್ತೇನೆ. ಕೆಲಸ ಮಾಡದ ದಿನಗಳಲ್ಲಿ ನನಗೆ ಆಹಾರವಿಲ್ಲ". ಇದು ದಿನಗೂಲಿ ಮಾಡುವ ಗುಂಥಿರಾಮ್ ಜೆನ ಅವರ ನಿತ್ಯದ ಕಥೆ. ಆದರೆ, ಮನೆಯ ಮೂವರ ಹೊಟ್ಟೆಪಾಡಿಗಾಗಿ ದುಡಿದು ಬದುಕುತ್ತಿರುವ ಗುಂಥಿರಾಮ್, ತನ್ನ ಅರ್ಧ ಜೀವತಾವಧಿಯನ್ನೇ ಮರಗಳನ್ನು ಬೆಳೆಸುವುದರಲ್ಲೇ ಕಳೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, "ಮರಗಳೇ ನನ್ನ ಪ್ರಾಣ. ಎಷ್ಟೇ ಕಷ್ಟ ಬಂದರೂ ಅವುಗಳ ರಕ್ಷಣೆಯಿಂದ ಹಿಂದೆ ಸರಿಯಲಾರೆ. ವಿವಿಧೆಡೆ ದೊಡ್ಡ ಮರಗಳನ್ನು ಕಡಿಯುವುದರಿಂದ ಪರಿಸರ ನಾಶವಾಗುತ್ತಿದೆ ಎಂದು ರೇಡಿಯೊದಲ್ಲಿ ಕೇಳಿದ್ದೆ. ಅದನ್ನು ಕೇಳಿ ಬೇರೆ ಬೇರೆ ಕಡೆ ಗಿಡ ನೆಡಲು ಆರಂಭಿಸಿದೆ. ನಾನು ನನ್ನ ಸ್ವಂತ ಹಣದಿಂದ ಕೆಲವು ಗಿಡಗಳನ್ನು ಖರೀದಿಸುತ್ತೇನೆ ಮತ್ತು ಕೆಲವು ಹಳ್ಳಿಯ ಜನರಿಂದ ಸಂಗ್ರಹಿಸುತ್ತೇನೆ. ಯಾರೂ ನನಗೆ ಸಹಾಯ ಮಾಡುವುದಿಲ್ಲ. ದೇವರ ಸಹಾಯದಿಂದ ಮಾತ್ರ ನಾನು ಮರಗಳನ್ನು ನೆಡಲು ಪ್ರಯತ್ನಿಸುತ್ತೇನೆ. ಮರಗಳನ್ನು ನೆಡುವುದರಲ್ಲಿಯೇ ನನ್ನ ಬದುಕನ್ನು ಕಳೆದಿದ್ದೇನೆ" ಎಂದು ಹೇಳಿದರು.
ಇದು ಗುಂಥಿರಾಮ್ ಅವರ ಮರಗಳ ಮೇಲಿನ ಅನಿಯಮಿತ ಪ್ರೀತಿಯ ಕಥೆ. ಜಾಜ್‌ಪುರ ಜಿಲ್ಲೆಯ ಬಾಸುದೇವಪುರ ಪಂಚಾಯತ್‌ನ ಉಸಾಹಿ ಗ್ರಾಮದ ನಿವಾಸಿಯಾಗಿರುವ ಗುಂಥಿರಾಮ್ ಜೆನ, ತಮ್ಮ 20ನೇ ವಯಸ್ಸಿನಲ್ಲಿಯೇ ವಿವಿಧ ಸರ್ಕಾರಿ ಜಮೀನುಗಳಲ್ಲಿ ಮರಗಳನ್ನು ನೆಡಲು ಪ್ರಾರಂಭಿಸಿದ್ದಾರೆ.

ಗುಂಥಿರಾಮ್‌ರಿಗೆ ಈಗ ಸುಮಾರು 60 ವರ್ಷ. ಪರಿಸರವನ್ನು ಮಲಿನಮುಕ್ತವಾಗಿಸುವ ಉದ್ದೇಶದಿಂದ 40 ವರ್ಷಗಳಿಂದ ವಿವಿಧ ರೀತಿಯ ಗಿಡಗಳನ್ನು ನೆಡುತ್ತಿದ್ದಾರೆ. ಈ 40 ವರ್ಷಗಳಲ್ಲಿ ಸುಮಾರು 1 ಲಕ್ಷ ಗಿಡಗಳನ್ನು ನೆಟ್ಟು ಸರ್ಕಾರ ಹಾಗೂ ನಾನಾ ಪಂಚಾಯತ್ಗಳ ಹಕ್ಕುಬಾಧ್ಯತೆಯಿಲ್ಲದ ಜಮೀನುಗಳನ್ನು ಹಸಿರಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ವಂತ ಖರ್ಚಲ್ಲೇ ಗಿಡಗಳನ್ನು ನೆಟ್ಟು ಬೆಳೆಸಿದ ಟ್ರೀ ಮ್ಯಾನ್: ಲಕ್ಷಾಂತರ ಮರಗಳನ್ನು ನೆಟ್ಟಿರುವ ಗುಂಥಿರಾಮ್ ಅವರನ್ನು ಜಿಲ್ಲೆಯಲ್ಲಿ 'ಮರದ ಮನುಷ್ಯ' ಎಂದು ಕರೆಯುತ್ತಾರೆ. ಒಂದೆಡೆ ಗುಂಥಿರಾಮ್ ಬಡತನ ರೇಖೆಯಲ್ಲಿ ಬದುಕುತ್ತಿದ್ದರೆ, ಇನ್ನೊಂದೆಡೆ ಸರ್ಕಾರದ ಯಾವುದೇ ನೆರವು ಸಿಗದಿದ್ದರೂ ಸ್ವಂತ ಖರ್ಚಿನಲ್ಲಿಯೇ ಗಿಡಗಳನ್ನು ನೆಟ್ಟು ಬೆಳೆಸಿ ಇದೀಗ ಮಾದರಿಯಾಗಿದ್ದಾರೆ.

ಜಾಜ್‌ಪುರ ಜಿಲ್ಲೆಯ ಬಾಸುದೇವಪುರ ಪಂಚಾಯತ್‌ನ ಉಸಾಹಿ ಗ್ರಾಮದಲ್ಲಿ ಗುಂಥಿರಾಮ್ ಜೆನ ಅವರ ಮಣ್ಣಿನ ಮನೆ ಇದೆ. ಈ ಮನೆಯಲ್ಲಿ ಬಹಳ ದಿನಗಳಿಂದ ಗುಂಥೀರಾಂ ಅವರು ತಮ್ಮ ಮಗಳು ಮತ್ತು ಪತ್ನಿಯೊಂದಿಗೆ ವಾಸವಾಗಿದ್ದಾರೆ. ದಿನಗೂಲಿ ಮಾಡುವ ಗುಂಥಿರಾಮ್ ತಮ್ಮ ಕುಟುಂಬದ ನಿರ್ವಹಣೆಗೆ ಕೈಲಾದಷ್ಟು ಹಣ ಸಂಪಾದಿಸಿ, ಅದರಲ್ಲಿ ಒಂದಿಷ್ಟು ಗಿಡಗಳನ್ನು ನೆಡಲು ಖರ್ಚು ಮಾಡುತ್ತಿದ್ದಾರೆ.

ಮರ ನೆಡುವುದು ತನ್ನ ಕೆಲಸ ಎಂದು ಭಾವಿಸುವ ಗುಂಥಿರಾಮ್ ಅವರು ನಿತ್ಯವೂ ತನ್ನ ಸಂಬಳವನ್ನು ಸಂಗ್ರಹಿಸುವುದಕ್ಕೆ ಹೋಗುವ ಮೊದಲು, ಪ್ರತಿದಿನ ಬೇಗನೆ ಎದ್ದು, ಗೊಬ್ಬರ, ಮರಗಳು ಮತ್ತು ಗುದ್ದಲಿಯನ್ನು ಹೊತ್ತುಕೊಂಡು ಸರ್ಕಾರದಿಂದ ಗೊತ್ತುಪಡಿಸಿದ ಜಮೀನಿನಲ್ಲಿ ಮರಗಳನ್ನು ನೆಡಲು ತೆರಳುತ್ತಾರೆ.

ಸಾವಿರಾರು ಗಿಡಗಳನ್ನು ನೆಟ್ಟು ಕಾಡು ಸೃಷ್ಟಿ : ಗುಂಥಿರಾಮ್ ನಾಲ್ಕು ದಶಕಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ. ಸರ್ಕಾರದ ಯಾವುದೇ ನೆರವಿಲ್ಲದೆ ಪರಿಸರವನ್ನು ಮಾಲಿನ್ಯ ಮುಕ್ತವಾಗಿಡಲು ತನ್ನ ಸ್ವಂತ ಖರ್ಚಿನಲ್ಲಿಯೇ ಗಿಡಗಳನ್ನು ನೆಡುತ್ತಿರುವುದು ಮಹತ್ತರವಾದ ವಿಷಯ. ತನ್ನದೇ ಪಂಚಾಯಿತಿಯಾದ ಬಾಸುದೇವಪುರದಲ್ಲಿ ಮಾತ್ರವಲ್ಲದೆ, ಜಿಲ್ಲೆಯ ಮಾರ್ಕಂಡಪುರ, ಶಿಮಿಲಿಯಾ, ಬಿಚಿರಪುರ ಪಂಚಾಯಿತಿಗಳಲ್ಲೂ ಗುಂಥಿರಾಮ್ ಸಾವಿರಾರು ಗಿಡಗಳನ್ನು ನೆಟ್ಟು ಕಾಡು ಸೃಷ್ಟಿಸಿದ್ದಾರೆ.

"1 ಕಿ.ಮೀ ನೀರು ಸಾಗಿಸಿ ಮರಗಳನ್ನು ಉಳಿಸಿದ್ದೇನೆ. ನಾನು ಹೋಗಲಾಗದ ಗದ್ದೆಗಳಲ್ಲಿ ಮರದ ಬೀಜಗಳನ್ನು ಬಿತ್ತಿ ಕಾಡು ಸೃಷ್ಟಿಸಲು ಪ್ರಯತ್ನಿಸುತ್ತೇನೆ. ಪ್ರಸ್ತುತ ಪರಿಸರದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಮರಗಳನ್ನು ನೆಡಿ" ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ನೈನಿತಾಲ್ ಅರಣ್ಯದಲ್ಲೊಂದು ಅಚ್ಚರಿ: ಇದು ಮುಟ್ಟಿದ್ರೆ ನಗುವ ಮರ - LAUGHING TREE NAINITAL FOREST