ಸಂಬಲ್ಪುರ(ಒಡಿಶಾ): ಕಲಿಕೆಗೆ ವಯಸ್ಸಿನ ಮಿತಿ ಇಲ್ಲ. ಮನಸ್ಸಿದ್ದರೆ ಯಾವ ವಯಸ್ಸಿನಲ್ಲಿ ಏನನ್ನಾದರೂ ಕಲಿಯಬಹುದು ಎಂಬುದಕ್ಕೆ ಇವರು ಉತ್ತಮ ನಿದರ್ಶನ. ಹೌದು, 84ನೇ ವಯಸ್ಸಿನಲ್ಲಿ ಈ ವ್ಯಕ್ತಿ ಎಂಬಿಎ ಪದವಿ ಪಡೆದಿದ್ದಾರೆ.
ಹೆಸರು ಗಿರೀಶ್ ಮೋಹನ್ ಗುಪ್ತಾ. ವಯಸ್ಸು 84. ವೃತ್ತಿಯಲ್ಲಿ ಪರಮಾಣು ವಿಜ್ಞಾನಿ. ಆದರೆ ಕಲಿಯುವ ಹಂಬಲದಿಂದ 84ನೇ ವಯಸ್ಸಿನಲ್ಲಿ ಯಶಸ್ವಿಯಾಗಿ ಎಂಬಿಎ ಪದವೀಧರರಾಗಿದ್ದಾರೆ. ಶನಿವಾರದ ನಡೆದ ಸಂಬಾಲ್ಪುರ್ ಐಐಎಂನ 9ನೇ ಘಟಿಕೋತ್ಸವದಲ್ಲಿ ಗಿರೀಶ್ ಅವರಿಗೆ ಪದವಿ ಪ್ರದಾನ ಮಾಡಲಾಯಿತು. ಇವರು ಐಐಎಂ ಸಂಬಲ್‌ಪುರದ ದೆಹಲಿ ಕ್ಯಾಂಪಸ್‌ನಿಂದ ಈ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ.
ವಿಜ್ಞಾನಿಯಾದರೂ ಎಂಬಿಎ ಪದವಿ: "ನಾನು ಪರಮಾಣು ವಿಜ್ಞಾನಿ. ಜೊತೆಗೆ ಸ್ವತಃ ನಾನೇ ಒಂದು ಸಂಸ್ಥೆಯನ್ನೂ ಕಟ್ಟಿರುವೆ. ಈ ಕಂಪನಿಯು ಪರಮಾಣು ಶಕ್ತಿ ಮತ್ತು ದೇಶದ ರಕ್ಷಣಾ ಸಚಿವಾಲಯಕ್ಕಾಗಿ ಕೆಲಸ ಮಾಡುತ್ತದೆ. ಸದ್ಯ ನನಗೆ 84 ವರ್ಷ. ಈ ವಯಸ್ಸಿನಲ್ಲೂ ನಾನು ದಿನಕ್ಕೆ 8 ಗಂಟೆ ಕೆಲಸ ಮಾಡುತ್ತೇನೆ" ಎಂದು ಗುಪ್ತಾ ತಿಳಿಸಿದ್ದಾರೆ.
"ಈ ವಯಸ್ಸಿನಲ್ಲೂಎಂಬಿಎ ಓದಬಹುದು. ಕಲಿಕೆ ಎಂದಿಗೂ ಮುಗಿಯುವುದಿಲ್ಲ, ಅದು ನಿರಂತರ ಪ್ರಕ್ರಿಯೆ. ಜೀವನದ ಕೊನೆಯ ಉಸಿರು ಇರುವವರೆಗೂ ಕಲಿಯಬೇಕು" ಅಂತಾರೆ ಇವರು.
"ಐಐಎಂ ಸಂಬಲ್‌ಪುರ ದೆಹಲಿಯಲ್ಲಿ ಕ್ಯಾಂಪಸ್ ತೆರೆಯಿತು. ಅದರ ಬಗ್ಗೆ ನನಗೆ ಮಾಹಿತಿ ಬಂದಿತ್ತು. ಕ್ಯಾಂಪಸ್ ನನ್ನ ಮನೆಯಿಂದ ಹತ್ತಿರದಲ್ಲಿದ್ದ ಕಾರಣ ನಾನು ಅಲ್ಲಿಗೆ ಸೇರುವ ಬಯಕೆಯನ್ನು ವ್ಯಕ್ತಪಡಿಸಿದೆ. ನಾನು ದೆಹಲಿಯಲ್ಲಿರುವ ನನ್ನ ಫಾರ್ಮ್ ಹೌಸ್‌ನಲ್ಲಿ ವಾಸಿಸುತ್ತಿದ್ದೇನೆ. ಅದು ವಿಮಾನ ನಿಲ್ದಾಣದ ಸಮೀಪದಲ್ಲಿದೆ ಮತ್ತು IIM ಕ್ಯಾಂಪಸ್ ನನ್ನ ಫಾರ್ಮ್ ಹೌಸ್‌ನಿಂದ ಕೇವಲ 10 ಕಿಮೀ ದೂರದಲ್ಲಿದೆ. ಹಾಗಾಗಿ ಪ್ರಯಾಣಿಸಲು ಅನುಕೂಲ ಎಂದು ಈ ಕೋರ್ಸ್ಗೆ ಸೇರಿಕೊಂಡೆ" ಅಂತಾರೆ ಹಿರಿಯ ವಿಜ್ಞಾನಿ.

"IIM ಸಂಬಲ್ಪುರ ಕ್ಯಾಂಪಸ್‌ನಿಂದ ತುಂಬಾ ಪ್ರಭಾವಿತನಾಗಿದ್ದೇನೆ. ನಾನು ಅನೇಕ IIMಗಳನ್ನು ನೋಡಿದ್ದೇನೆ. ಆದರೆ ಇದು ಅತ್ಯುತ್ತಮವಾಗಿದೆ. ನನಗೆ ಸರ್ಟಿಫಿಕೇಟ್ ಮುಖ್ಯವಲ್ಲ, ಕಳೆದ ಎರಡು ವರ್ಷಗಳಲ್ಲಿ ಕಲಿತಿರುವುದು ಬಹಳ ಮುಖ್ಯ ನನಗೆ. ನಾನು ಇಲ್ಲಿಂದ ಹೊಸ ನಿರ್ವಹಣಾ ಕಲೆಯನ್ನು ಕಲಿತಿದ್ದೇನೆ. ನಾವು ಹಳೆಯ ಶೈಲಿಯಲ್ಲಿ ನಿರ್ವಹಣೆ ಮಾಡುತ್ತಿದ್ದೆವು. ಈಗ ನಾನು ನನ್ನ ಕಂಪನಿಯಲ್ಲಿ ಇತ್ತೀಚಿನ ತಂತ್ರಜ್ಞಾನ ಬಳಸುತ್ತಿದ್ದೇನೆ. ಇದರಿಂದ ಬಹಳಷ್ಟು ಅನುಕೂಲವಾಗಿದೆ" ಅಂತಾರೆ 84 ವರ್ಷದ ಗುಪ್ತಾ.
50 ವರ್ಷದ ಡಾಕ್ಟರ್ಗೂ ಎಂಬಿಎ ಪದವಿ: ಅಷ್ಟೇ ಅಲ್ಲ, ನಿನ್ನೆ ನಡೆದ ಘಟಿಕೋತ್ಸವದಲ್ಲಿ 50 ವರ್ಷದ ಡಾ.ಅಲೋಕ್ ಕುಮಾರ್ ಮಿಶ್ರಾ ಎಂಬವರು ಕೂಡ ಎಂಬಿಎ ಪದವಿ ಪಡೆದಿದ್ದಾರೆ. ಇವರು ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಜಂಟಿ ಕಾರ್ಯದರ್ಶಿಯಾಗಿದ್ದು, ಸದ್ಯ ಎಂಬಿಎ ಪದವಿಯನ್ನೂ ಪಡೆದಿದ್ದಾರೆ.
"ಸಂಬಲ್‌ಪುರ ಐಐಎಂ ದೆಹಲಿಯ ಕ್ಯಾಂಪಸ್‌ನಲ್ಲಿ ನಾನು ಎಂಬಿಎ ವರ್ಕಿಂಗ್ ಪ್ರೊಫೆಷನಲ್ಸ್ ಕೋರ್ಸ್‌ನ ಮೊದಲ ಬ್ಯಾಚ್ ವಿದ್ಯಾರ್ಥಿಯಾಗಿದ್ದೇನೆ. ಈ ಕೋರ್ಸ್ ಕೆಲಸ ಮಾಡುವ ವೃತ್ತಿಪರರಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಈ ಕೋರ್ಸ್‌ಗಾಗಿ ನಾವು 18 ಗಂಟೆಗಳ ಕಾಲ ಕ್ಯಾಂಪಸ್‌ನಲ್ಲಿ ಇರಬೇಕಾಗಿತ್ತು. ಪ್ರತಿ ಭಾನುವಾರ ತರಗತಿಗಳಿದ್ದವು. ಇಲ್ಲಿನ ಬೋಧನಾ ತಂತ್ರಗಳು ಅತ್ಯುತ್ತಮ ಗುಣಮಟ್ಟದಿಂದ ಕೂಡಿವೆ. ಇತ್ತೀಚಿನ ಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಪಾಠಗಳನ್ನು ಕಲಿಸಲಾಗುತ್ತದೆ. ನನಗೆ ಈಗ 50 ವರ್ಷ, ನಾನು ದೆಹಲಿಯ AIIMS ನಿಂದ ಮನೋವಿಜ್ಞಾನ ಕೋರ್ಸ್ ಪಡೆದಿದ್ದೇನೆ. ಜೊತೆಗೆ ನಾನು ಡಾಕ್ಟರ್ ಕೂಡ. ಅಷ್ಟೇ ಅಲ್ಲ ಲಂಡನ್‌ನಿಂದ ಎಲ್‌ಎಲ್‌ಎಂ ಪದವಿ ಕೂಡ ಪಡೆದಿರುವೆ. ಆದರೆ ಮ್ಯಾನೇಜ್‌ಮೆಂಟ್ ಕೋರ್ಸ್ ನಮಗೆ ದೈನಂದಿನ ಜೀವನದಲ್ಲಿ ಅತ್ಯವಶ್ಯಕ. ಆದ್ದರಿಂದ ನಾವು ನಿರ್ವಹಣೆಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ" ಅಂತಾರೆ ಡಾ.ಅಲೋಕ್ ಕುಮಾರ್ ಮಿಶ್ರಾ.
ಇದನ್ನೂ ಓದಿ: ಇವರ ಒಂದು ಕರೆಗೆ ಓಡಿಬರುತ್ತವೆ 200ಕ್ಕೂ ಹೆಚ್ಚು ನವಿಲುಗಳು ; ಅಜ್ಜನಿಗೆ ಕೊಟ್ಟ ಮಾತು ಉಳಿಸಿಕೊಂಡ ಮೊಮ್ಮಗ!