ಇದು ಅಜ್ಜಿಯ ಸಕ್ಸಸ್ ಸ್ಟೋರಿ.. ವಯಸ್ಸು ಜಸ್ಟ್ 78; ಎರಡರಿಂದ ಆರಂಭಿಸಿ ಈಗ 70 ಎಮ್ಮೆಗಳ ಸಾಕಣೆದಾರೆ; ದಿನಕ್ಕೆ 1 ಲಕ್ಷ ರೂ. ಆದಾಯ!
ಪ್ರತಿದಿನ 500 ಲೀಟರ್ ಹಾಲು ಉತ್ಪಾದನೆ. ಲೀಟರ್‌ಗೆ 70 ರೂಪಾಯಿಗಳಂತೆ ದಿನಕ್ಕೆ 35,000 ರೂಪಾಯಿಗಳಷ್ಟು ಹಾಲಿನ ಮಾರಾಟವಾಗುತ್ತದೆ. ಡೈರಿಯ ಇತರ ಉತ್ಪನ್ನಗಳನ್ನು ಸೇರಿಸಿದರೆ ದಿನಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚಿನ ಆದಾಯ ಬರುತ್ತಿದೆ.

Published : October 13, 2025 at 7:44 PM IST
ನಾಂದೇಡ್, ಮಹಾರಾಷ್ಟ್ರ: ನಾಂದೇಡ್ ಜಿಲ್ಲೆಯ ಅರ್ಧಾಪುರ ತಾಲೂಕಿನ ಲಹಾನ ಎಂಬ ಸಣ್ಣ ಗ್ರಾಮ ಎಮ್ಮೆ ಫಾರ್ಮ್‌ನೊಂದಿಗೆ ರಾಜ್ಯಾದ್ಯಂತ ಮನೆ ಮಾತಾಗಿದೆ. ಆಲಂಖಾನೆ ಕುಟುಂಬದ 78ರ ವೃದ್ಧೆಯ ಈ ಯಶಸ್ಸಿನ ಕಥೆ ಎಲ್ಲರನ್ನು ಬೆರಗುಗೊಳ್ಳುವಂತೆ ಮಾಡಿದೆ.
ಚಂದ್ರಕಲಾಬಾಯಿ ಮತ್ತು ಪ್ರಭು ಆಪ್ಪಾ ಆಲಂಖಾನೆ ಕಠಿಣ ಪರಿಶ್ರಮ ಮತ್ತು ಅಚಲ ಶ್ರದ್ಧೆಯಿಂದ ಒಂದು ಸಾಮ್ರಾಜ್ಯವನ್ನೇ ಕಟ್ಟಿಕೊಂಡಿದ್ದಾರೆ. ಇದು ಕೇವಲ ಒಂದು ವ್ಯಾಪಾರದ ಯಶೋಗಾಥೆಯಲ್ಲ, ಬದಲಾಗಿ ಜೀವನದ ಸಂಘರ್ಷದಿಂದ ಉನ್ನತಿಯ ಕಡೆಗಿನ ಪಯಣದ ಒಂದು ಪ್ರೇರಣಾದಾಯಕ ಕಾವ್ಯವಾಗಿದೆ.
ಒಂದು ಕಾಲದಲ್ಲಿ ಚಂದ್ರಕಲಾಬಾಯಿ ಮನೆ ಮನೆಗೆ ತಿರುಗಾಡಿ, ತಲೆಯ ಮೇಲೆ ಹಾಲಿನ ತಂಬಿಗೆ, ಮೊಸರು, ಲೋಣಿ, ತುಪ್ಪ ಮತ್ತು ಬೆರಣಿಯನ್ನು ಹೊತ್ತುಕೊಂಡು ಮಾರಾಟ ಮಾಡುತ್ತಿದ್ದರು. ಪ್ರತಿದಿನ ಗಳಿಕೆ ಮಾಡಿ ಜೀವನ ನಿರ್ವಹಣೆ ಮಾಡುವುದು ಅವರ ದೈನಂದಿನ ಕಾಯಕವಾಗಿತ್ತು.
ಎರಡು ಎಮ್ಮೆಗಳಿಂದ ಆರಂಭವಾಗಿ 70 ಎಮ್ಮೆಗಳ ಮಾಲೀಕರು: ಎಂತಹ ಕಷ್ಟಕಾಲದಲ್ಲೂ ಅವರು ಎದೆಗುಂದಲಿಲ್ಲ. ಹಾಲಿನ ವ್ಯಾಪಾರವು ಅವರ ಕುಟುಂಬದ ಸಾಂಪ್ರದಾಯಿಕ ಕಸುಬಾಗಿತ್ತು. ಕೇವಲ ಎರಡು ಎಮ್ಮೆಗಳೊಂದಿಗೆ ಆರಂಭವಾದ ಈ ಪಯಣವು ಈಗ 70 ಎಮ್ಮೆಗಳಿಗೆ ವಿಸ್ತರಿಸಿದೆ. ಅವರ ಪರಿಶ್ರಮ, ಪ್ರಾಮಾಣಿಕತೆ ಮತ್ತು ಗುಣಮಟ್ಟದ ಮೇಲಿನ ನಿಷ್ಠೆಯಿಂದ ಕ್ರಮೇಣ ಒಂದು ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಮನೆ ಮನೆಯಿಂದ ಹಾಲು ಸಂಗ್ರಹಿಸಿಯೂ ದುಡಿಮೆ: ಎರಡು ಎಮ್ಮೆಗಳಿಂದ ಹಾಲಿನ ಒಂದು ಭಾಗವನ್ನು ಮಾರಾಟ ಮಾಡುತ್ತಿದ್ದರೆ, ಇನ್ನೊಂದು ಭಾಗವನ್ನು ಮೊಸರು, ಲೋಣಿ ಮತ್ತು ತುಪ್ಪವಾಗಿ ಪರಿವರ್ತಿಸಿ ಗ್ರಾಹಕರಿಗೆ ಒದಗಿಸುತ್ತಿದ್ದರು . ಇದರ ಜೊತೆಗೆ ಧೈರ್ಯದ ಹೆಜ್ಜೆ ಇಟ್ಟು, ಇತರ ರೈತರಿಂದ ಹಾಲನ್ನು ಸಂಗ್ರಹಿಸಿ ಮಾರಾಟ ಮಾಡುವ ಕಾರ್ಯವನ್ನೂ ಆರಂಭಿಸಿದರು. ಎಮ್ಮೆಯ ಸಗಣಿಯಿಂದ ಬೆರಣಿ(ಕುಳ್ಳು - ಗೊಂಗುರ) ತಯಾರಿಸಿ, ಗಲ್ಲಿ ಗಲ್ಲಿಗೆ ತೆರಳಿ ಮಾರಾಟ ಮಾಡುತ್ತಿದ್ದರು. ಈ ಗಳಿಕೆಯನ್ನು ಜತನವಾಗಿ ಉಳಿಸಿ, ವ್ಯಾಪಾರದ ವಿಸ್ತರಣೆಗಾಗಿಯೇ ಬಳಸುತ್ತಿದ್ದರು.

ಸಣ್ಣ ಶಡ್ನಲ್ಲಿ ಆರಂಭವಾಗಿ ಈಗ ಖ್ಯಾತನಾಮ ಸಂಸ್ಥೆ: ಹತ್ತು ವರ್ಷಗಳ ಕಾಲ ಮನೆ ಮನೆಗೆ ಹಾಲು ಮಾರಾಟ ಮಾಡಿದ ನಂತರ 1985 ರಲ್ಲಿ ಚಂದ್ರಕಲಾಬಾಯಿಯವರು 'ಪ್ರಭು ದೂದ್ ಡೈರಿ' ಎಂಬ ಒಂದು ಸಣ್ಣ ಅಂಗಡಿಯನ್ನು ಆರಂಭಿಸಿದರು. ಆ ಸಣ್ಣ ಮಳಿಗೆ ಇಂದು ನಾಂದೇಡ್‌ನಲ್ಲಿ ಒಂದು ಖ್ಯಾತನಾಮ ಸಂಸ್ಥೆಯಾಗಿ ಮಾರ್ಪಟ್ಟಿದೆ. ಐವತ್ತು ವರ್ಷಗಳ ಹಿಂದೆ ಎರಡು ಎಮ್ಮೆಗಳೊಂದಿಗೆ ಆರಂಭವಾದ ಈ ವ್ಯಾಪಾರವು ಇಂದು 70 ಕ್ಕೂ ಹೆಚ್ಚಿನ ಎಮ್ಮೆಗಳೊಂದಿಗೆ ಒಂದು ದೊಡ್ಡ ಫಾರ್ಮ್ ಆಗಿ ವಿಕಸಿತವಾಗಿದೆ.
78ನೇ ವಯಸ್ಸಿನಲ್ಲೂ ವಿಶ್ರಾಂತಿ ಇಲ್ಲದ ದುಡಿಮೆ: 78 ವರ್ಷ ವಯಸ್ಸಿನ ಚಂದ್ರಕಲಾಬಾಯಿ ಇಂದಿಗೂ ವಿಶ್ರಾಂತಿಯ ಯೋಚನೆಯನ್ನು ಮನಸಿನಿಂದ ದೂರವೇ ಇಟ್ಟಿದ್ದಾರೆ. ಅಂಗಡಿಯಲ್ಲಿ ಕುಳಿತು ಗ್ರಾಹಕರೊಂದಿಗೆ ವ್ಯವಹರಿಸುತ್ತಾರೆ. ಬಳಿಕ ಅವರು ಎಮ್ಮೆಗಳ ಆರೈಕೆ ಮಾಡುತ್ತಾರೆ. ಅದಾದ ಮೇಲೆ ವ್ಯಾಪಾರದ ಕಾರ್ಯವನ್ನು ಮುಂದುವರೆಸುವುದು ಅವರ ದೈನಂದಿನ ಜೀವನದ ಭಾಗವಾಗಿದೆ. ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮವಿದ್ದರೆ ಯಶಸ್ಸು ಕೈಗೆಟಕದೇ ಇರುವುದಿಲ್ಲ ಎನ್ನುವುದನ್ನು ಇವರು ತಮ್ಮ ಪರಿಶ್ರಮದಿಂದ ಮಾಡಿ ತೋರಿಸಿದ್ದಾರೆ.
ಕಡ್ಡಿ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದ ಪತಿ ಪ್ರಭು: ಚಂದ್ರಕಲಾಬಾಯಿ ಅವರ ಪತಿ ಪ್ರಭು ಅಪ್ಪಾ ಆಲಂಖಾನೆ, ಕಡ್ಡಿಗಳ ಸಂಗ್ರಹಣೆ ಮತ್ತು ಮಾರಾಟದ ಜವಾಬ್ದಾರಿಯನ್ನು ತಮ್ಮ ಭುಜದ ಮೇಲೆ ಹೊತ್ತಿದ್ದರು. ಸೈಕಲ್‌ನಲ್ಲಿ ರೈತರ ಬಳಿಗೆ ತೆರಳಿ ಮುಂಗಡ ಹಣ ನೀಡಿ ಕಡ್ಡಿಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಮರುದಿನ ರೈತರಿಗೆ ಹಣವನ್ನು ಮರಳಿಸುವ ಅವರ ಪ್ರಾಮಾಣಿಕತೆಯಿಂದಾಗಿ ಪ್ರಭು ಅಪ್ಪಾ ಆಲಂಖಾನೆ ಎಂಬ ಹೆಸರು ಗೌರವ ಪಡೆದುಕೊಂಡರು. ಅವರ ಶ್ರದ್ಧೆ ಮತ್ತು ವಿಶ್ವಾಸಾರ್ಹತೆಯಿಂದಾಗಿ ಕೆಲವೇ ಕಾಲದಲ್ಲಿ ಅವರ ಹೆಸರು ಎಲ್ಲೆಡೆ ಪ್ರಸಿದ್ಧವಾಯಿತು.
ಅಂದು ಸ್ಥಾಪನೆಯಾದ ಸಂಸ್ಥೆ ಇಂದು ಮೂರನೇ ತಲೆಮಾರಿನಿಂದ ನಡೆಸಲ್ಪಡುತ್ತಿದೆ; ಕೇವಲ ಒಂದು ಹಾಲಿನ ಕ್ಯಾನ್‌ನೊಂದಿಗೆ ರಸ್ತೆ ಬದಿಯಲ್ಲಿ ಆರಂಭವಾದ ಈ ವ್ಯಾಪಾರವು, ಗುಣಮಟ್ಟ ಮತ್ತು ಗ್ರಾಹಕರ ವಿಶ್ವಾಸದಿಂದಾಗಿ ಕೆಲವೇ ಕಾಲದಲ್ಲಿ ಜನಪ್ರಿಯವಾಯಿತು. 'ಪ್ರಭು ಡೈರಿ' ಶೀಘ್ರದಲ್ಲಿಯೇ ನಾಂದೇಡ್‌ನ ಒಂದು ಖ್ಯಾತನಾಮ ಸಂಸ್ಥೆಯಾಯಿತು. ಇಂದು ಈ ವ್ಯಾಪಾರವನ್ನು ಅವರ ಮೂರನೇ ತಲೆಮಾರಿನವರು ಮುಂದುವರೆಸುತ್ತಿದ್ದಾರೆ. ಕೇವಲ ಹಾಲು ಮತ್ತು ಮೊಸರಿನಿಂದ ಆರಂಭವಾದ ಈ ವ್ಯಾಪಾರವು ಇಂದು ಡೇರಿ ಉತ್ಪನ್ನಗಳ ಜತೆ ಮಿಠಾಯಿಗಳು ಮತ್ತು ಖಾರದ ವಸ್ತುಗಳ ಮಾರಾಟದವರೆಗೆ ವಿಸ್ತರಿಸಿದೆ.
ಇವರ ಬಳಿ ಇವೆ ಈ ಎಲ್ಲ ತಳಿಯ ಎಮ್ಮೆಗಳು: ಚಂದ್ರಕಲಾಬಾಯಿಯವರ ಬಳಿ ಮುರ್ರಾ , ಜಾಫರ್, ಪಂಢರಪುರಿ, ಮತ್ತು ಸೊಲಾಪುರಿ ಜಾತಿಯ ಎಮ್ಮೆಗಳಿವೆ. ಒಂಬತ್ತು ಎಕರೆ ಫಾರ್ಮ್‌ನಲ್ಲಿ ಒಣಹುಲ್ಲಿನ ವ್ಯವಸ್ಥೆಗಾಗಿ ಒಂಬತ್ತು ಎಕರೆಯಲ್ಲಿ ಮೇವನ್ನು ಬೆಳೆಯಲಾಗುತ್ತದೆ. ಸುತ್ತಮುತ್ತಲಿನ ರೈತರಿಂದ ಗೋಧಿಯ ಒಣಹುಲ್ಲು, ಕಬ್ಬಿನ ಕಾಂಡಗಳನ್ನ ಸಂಗ್ರಹಿಸಲಾಗುತ್ತದೆ. 66/110 ಜಾಗೆಯಲ್ಲಿ ಆಧುನಿಕ ಶೆಡ್ ನಿರ್ಮಿಸಲಾಗಿದೆ.
ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ದಿನಕ್ಕೆ ಲಕ್ಷ ರೂ ದುಡಿಮೆ: ಪ್ರತಿದಿನ 500 ಲೀಟರ್ ಹಾಲನ್ನು ಉತ್ಪಾದಿಸಲಾಗುತ್ತಿದೆ. ಲೀಟರ್‌ಗೆ 70 ರೂಪಾಯಿಗಳಂತೆ ದಿನಕ್ಕೆ 35,000 ರೂಪಾಯಿಗಳಷ್ಟು ಹಾಲಿನ ಮಾರಾಟವಾಗುತ್ತದೆ. ಪನೀರ್ ಕಿಲೋಗೆ 360 ಹಾಗೂ ಖೋವಾ ಕಿಲೋಗೆ 280 ರೂಪಾಯಿಯಂತೆ ದಿನ ಒಂದಕ್ಕೆ ಒಂದೂವರೆಯಿಂದ ಎರಡು ಕ್ವಿಂಟಲ್‌ವರೆಗೆ ಮಾರಾಟವಾಗುತ್ತದೆ.
ಖೋವಾದಿಂದ 50,000 ರೂಪಾಯಿ, ಪನೀರ್‌ನಿಂದ 40,000 ರಿಂದ 50,000 ರೂಪಾಯಿಗಳ ಆದಾಯ ಬರುತ್ತದೆ. ಡೈರಿಯ ಇತರ ಉತ್ಪನ್ನಗಳನ್ನು ಸೇರಿಸಿದರೆ ದಿನಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸಲಾಗುತ್ತದೆ.
ಚಂದ್ರಕಲಾಬಾಯಿ ಮತ್ತು ಪ್ರಭು ಅಪ್ಪಾ ಆಲಂಖಾನೆ ಅವರ ಕಥೆಯು ಕೇವಲ ಒಂದು ವ್ಯಾಪಾರದ ಯಶೋಗಾಥೆಯಲ್ಲ, ಬದಲಾಗಿ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಕನಸನ್ನು ಸಾಕಾರಗೊಂಡ ಎಂಬುದಕ್ಕೆ ಒಂದು ಜೀವಂತ ಸಾಕ್ಷಿಯಾಗಿದೆ. ಅವರ ಈ ಪಯಣವು ಎಲ್ಲರಿಗೂ ಒಂದು ಮಾದರಿಯಾಗಿದೆ. ಯಶಸ್ಸಿನ ಹಾದಿಯಲ್ಲಿ ಕಷ್ಟಗಳನ್ನು ಎದುರಿಸಿದರೂ ಶ್ರದ್ಧೆಯಿಂದ ಮುನ್ನಡೆದರೆ ಯಾವ ಗುರಿಯೂ ಅಸಾಧ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಿದೆ.
- ಇವುಗಳನ್ನೂ ಓದಿ:8 ಲಕ್ಷಕ್ಕೂ ಹೆಚ್ಚು ಮರ ಬೆಳೆಸಿದ ಪರಿಸರಪ್ರೇಮಿಗೆ ಕೆಬಿಸಿ ವೇದಿಕೆಯಲ್ಲಿ ಅಮಿತಾಬ್ ಬಚ್ಚನ್ ಸನ್ಮಾನ
- ಸರ್ಕಾರದ ಹಣದಿಂದ ಸಣ್ಣ ಉದ್ಯಮ ಸ್ಥಾಪನೆ: ಮೈಯಾ ಸಮ್ಮಾನ್ ಯೋಜನೆಯಿಂದ ಬದುಕು ಬಂಗಾರ: ಇದು ಮಹಿಳೆಯರ ಸ್ವಾವಲಂಬನೆ ಕಥೆ
- ಇವರು ಭಾರತದ ಮೊದಲ ಮಹಿಳಾ ಫಾರ್ಮುಲಾ 4 ರೇಸರ್: ಕೇವಲ 17ನೇ ವಯಸ್ಸಲ್ಲೇ ಅದ್ಭುತ ಸಾಧನೆ!
- ಒಂದೇ ಶಾಲೆಯಲ್ಲಿ ತಂದೆ ಹಾಗೂ ಮಗನಿಂದ ಇಂಗ್ಲಿಷ್ ಬೋಧನೆ!; ಪುತ್ರ ಸಹೋದ್ಯೋಗಿಯಾಗಿದ್ದಕ್ಕೆ ಅಪ್ಪನಿಗೆ ಖುಷಿ!

