ಪೂರ್ನಿಯಾ (ಬಿಹಾರ) : ಆತ ಎರಡು ಮದುವೆಯಾದ ಪತಿ. 25 ವರ್ಷಗಳ ಹಿಂದೆ ಮೊದಲ ಮದುವೆಯಾಗಿದ್ದ ಈ ವ್ಯಕ್ತಿ ಕಳೆದ 7 ವರ್ಷದ ಹಿಂದೆ ಮೊದಲ ಪತ್ನಿಗೆ ಗೊತ್ತಾಗದಂತೆ ಗುಟ್ಟಾಗಿ ಎರಡನೇ ಮದುವೆ ಸಹ ಆಗಿದ್ದ. ಇದಾದ ಬಳಿಕ ಮೊದಲ ಹೆಂಡತಿ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಇಕ್ಕಟ್ಟಿಗೆ ಸಿಲುಕಿದ್ದ.
ಹೌದು, ಬಿಹಾರದಲ್ಲಿ ಬೆಳಕಿಗೆ ಬಂದಿರುವ ಈ ವಿಚಿತ್ರ ಪ್ರಕರಣವೀಗ ದೇಶದ ಗಮನ ಸೆಳೆದಿದೆ. ಇದು ಗಂಡನನ್ನು ಇಬ್ಬರು ಪತ್ನಿಯರು ಹಂಚಿಕೊಂಡಿರುವ ಅಪರೂಪದ ಪ್ರಸಂಗವಾಗಿದೆ. ಇಲ್ಲಿ ಪೊಲೀಸ್ ಕೌಟುಂಬಿಕ ಸಾಂತ್ವನ ಕೇಂದ್ರ ನೀಡಿರುವ ಒಪ್ಪಂದದ ಆದೇಶದಂತೆ ಪತಿಯು ಮೊದಲ ಹೆಂಡತಿ ಬಳಿ ವಾರದಲ್ಲಿ ನಾಲ್ಕು ದಿನ ಮತ್ತು ಎರಡನೇ ಹೆಂಡತಿ ಬಳಿ ಮೂರು ದಿನಗಳ ಕಾಲ ಸಂಸಾರ ನಡೆಸಬೇಕಾಗಿದೆ.
ಪ್ರಕರಣ ಹಿನ್ನೆಲೆ : ಮೊದಲ ಪತ್ನಿ ಪೂರ್ಣಿಮಾ ಗಂಡನ ನಡೆಯಿಂದ ಬೇಸತ್ತು ಪೂರ್ನಿಯಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕೇಯಾ ಶರ್ಮಾ ಅವರ ಕಚೇರಿಗೆ ತೆರಳಿ, ರೂಪೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನಿವಾಸಿಯಾಗಿರುವ ತನ್ನ ಪತಿ ಶಂಕರ್ ಸಾಹ ವಿರುದ್ಧ ದೂರು ನೀಡಿದ್ದರು. ತಾವಿಬ್ಬರು 2000ನೇ ಇಸ್ವಿಯಲ್ಲಿ ಮದುವೆಯಾಗಿದ್ದು, ಇಬ್ಬರು ಮಕ್ಕಳು ಸಹ ಇದ್ದಾರೆ. ನನಗೆ ಗೊತ್ತಾಗದಂತೆ ನನ್ನ ಗಂಡ ಉಷಾ ದೇವಿ ಎಂಬುವರನ್ನು ಎರಡನೇ ಮದುವೆಯಾಗಿದ್ದಾನೆ ಎಂದು ಎಸ್ಪಿ ಎದುರು ಅಳಲು ತೋಡಿಕೊಂಡಿದ್ದರು.
ಸಾಂತ್ವನ ಕೇಂದ್ರಕ್ಕೆ ಕಳಿಸಿದ ಎಸ್ಪಿ : ಶಂಕರ್ ಅವರ ಮೊದಲ ಪತ್ನಿ ಪೂರ್ಣಿಮಾ ಅವರು, ತನ್ನ ಪತಿಯು ಕುಟುಂಬದ ನಿರ್ವಹಣೆಗೆ ಹಣ ನೀಡುತ್ತಿಲ್ಲ. ಮಕ್ಕಳ ಶಿಕ್ಷಣವನ್ನು ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು. ಅವರ ದೂರ ಆಲಿಸಲಾಗಿದ್ದು, ಈ ಕುರಿತಂತೆ ಪೊಲೀಸ್ ಕೌಟುಂಬಿಕ ಸಾಂತ್ವನ ಕೇಂದ್ರದಲ್ಲಿ ದೂರು ನೀಡುವಂತೆ ಸೂಚಿಸಿ, ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಾಗಿತ್ತು ಎಂದು ಎಸ್ಪಿ ಕಾರ್ತಿಕೇಯಾ ಶರ್ಮಾ ಮಾಹಿತಿ ನೀಡಿದ್ದಾರೆ.
ಪೊಲೀಸ್ ಕೌಟುಂಬಿಕ ಸಾಂತ್ವನ ಕೇಂದ್ರಕ್ಕೆ ಬಂದ ಮೊದಲ ಪತ್ನಿ ತನ್ನ ಸಂಕಷ್ಟಗಳನ್ನು ಇಲ್ಲಿ ತೋಡಿಕೊಂಡು ದೂರು ನೀಡಿದರು. ಬಳಿಕ ಆಕೆಯ ಪತಿಯನ್ನು ಈ ಕೇಂದ್ರಕ್ಕೆ ಕರೆಯಿಸಲಾಯಿತು. ಈ ಮಹಿಳೆಯ ಮೊದಲ ಮಗನಿಗೆ 22 ವರ್ಷ ಮತ್ತು ಕಿರಿಯ ಮಗನಿಗೆ 18 ವರ್ಷ ವಯಸ್ಸು. ಇಬ್ಬರೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಮಧ್ಯೆ ಪತಿ ಶಂಕರ್ 7 ವರ್ಷಗಳ ಹಿಂದೆ ಮತ್ತೋರ್ವ ಮಹಿಳೆಯನ್ನು ಗುಟ್ಟಾಗಿ ಮದುವೆ ಆಗಿದ್ದಾರೆ. ಅಲ್ಲದೆ, ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಮೊದಲ ಪತ್ನಿ ಆರೋಪಿಸಿದ್ದರು. ಎಸ್ಪಿಯವರು ಈ ದೂರನ್ನು ಪೊಲೀಸ್ ಕೌಟುಂಬಿಕ ಸಾಂತ್ವನ ಕೇಂದ್ರಕ್ಕೆ ವರ್ಗಾಯಿಸಿದ್ದು, ಸಮಸ್ಯೆಯನ್ನು ಇತ್ಯರ್ಥಪಡಿಸಿ ಅವರನ್ನು ಒಂದು ಮಾಡಲಾಗಿದೆ ಕೇಂದ್ರದ ಸದಸ್ಯ ದಿಲೀಪ್ ಕುಮಾರ್ ದೀಪಕ್ ತಿಳಿಸಿದರು.
ಸುಖಾಂತ್ಯ ಕಂಡ ಪ್ರಕರಣ : ಮೊದಲ ಪತ್ನಿ ಬಳಿ ಪತಿ ಶಂಕರ್ ವಾರದಲ್ಲಿ ನಾಲ್ಕು ದಿನ ಮತ್ತು ಎರಡನೇ ಪತ್ನಿ ಬಳಿ ಮೂರು ದಿನ ಕಳೆಯಬೇಕು. ಅಲ್ಲದೆ, ಮಕ್ಕಳ ಶೈಕ್ಷಣಿಕ ವೆಚ್ಚವಾಗಿ ಪ್ರತಿ ತಿಂಗಳು ಮೊದಲ ಪತ್ನಿಗೆ 4 ಸಾವಿರ ರೂಪಾಯಿ ಮತ್ತು ಎರಡನೇ ಪತ್ನಿಗೂ ಅಷ್ಟೇ ಮೊತ್ತದ ಹಣವನ್ನು ನೀಡಬೇಕೆಂದು ಶಂಕರ್ಗೆ ಆದೇಶಿಸಲಾಗಿದೆ. ಅಲ್ಲದೆ ಅವರಿಂದ ಒಪ್ಪಿಗೆ ಪತ್ರಕ್ಕೆ ಸಹಿ ಸಹ ಮಾಡಿಸಲಾಗಿದೆ. ಇದಾದ ಬಳಿಕ ಕುಟುಂಬಸ್ಥರೆಲ್ಲರೂ ಸಂತೋಷದಿಂದಲೇ ಮನೆಗೆ ಹಿಂತಿರುಗಿದ್ದಾರೆ ಎಂದು ದಿಲೀಪ್ ಕುಮಾರ್ ದೀಪಕ್ ಮಾಹಿತಿ ನೀಡಿದರು.
ಇದನ್ನೂ ಓದಿ : ಮೃತ ಮಾವನಿಗೆ ಹೆಣ್ಣುಮಕ್ಕಳಿದ್ದರೂ ತನ್ನನ್ನು 'ಮನೆ ಅಳಿಯ'ನೆಂದು ಘೋಷಿಸಲು ಕೋರಿದ್ದ ಅರ್ಜಿ ವಜಾ