ಬಾಲಸೋರ್: ಇಲ್ಲಿನ ಡಿಆರ್‌ಡಿಒ ಉಡಾವಣಾ ಕೇಂದ್ರದಿಂದ ಕ್ಷಿಪಣಿ ಪರೀಕ್ಷೆಗಾಗಿ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ಸಮೀಪವಿರುವ ಆರು ಗ್ರಾಮಗಳ ಜನರನ್ನು ಸ್ಥಳಾಂತರಿಸಲು ಬಾಲಸೋರ್ ಜಿಲ್ಲಾಡಳಿತ ಮುಂದಾಗಿದೆ.
ಡಿಆರ್‌ಡಿಒ ಸಲಹೆಯ ಮೇರೆಗೆ ಬಾಲಸೋರ್ ಜಿಲ್ಲಾಡಳಿತವು ಐಟಿಆರ್‌ನ ಕ್ಷಿಪಣಿ ಉಡಾವಣಾ ಪ್ಯಾಡ್‌ಗೆ ಹೊಂದಿಕೊಂಡಿರುವ ಆರು ಗ್ರಾಮಗಳ 3,100 ಜನರನ್ನು ತಾತ್ಕಾಲಿಕವಾಗಿ ಹತ್ತಿರದ ಮೂರು ಶೆಲ್ಟರ್‌ಗಳಿಗೆ ಸ್ಥಳಾಂತರಿಸಲು ಎಲ್ಲ ವ್ಯವಸ್ಥೆಯನ್ನು ಮಾಡಿದೆ. ಗ್ರಾಮಸ್ಥರು ನಾಳೆ ಬೆಳಗ್ಗೆ ತಮ್ಮ ಮನೆಗಳನ್ನು ತೊರೆದು ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆಯಲಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಆಡಳಿತ ಕ್ರಮ ಕೈಗೊಂಡಿದೆ.
ಚಂಡಿಪುರದ ಐಟಿಆರ್ ಎಲ್ಸಿ-3 ಲಾಂಚ್ ಪ್ಯಾಡ್‌ನಿಂದ ಈ ಉಡಾವಣೆ ನಡೆಯಲಿದೆ. ಹೀಗಾಗಿ ಜೈದೇವಕಸಬಾ ಪಾಹಿ ಮತ್ತು ಸಹಜನಗರ ಪಾಹಿ ಗ್ರಾಮಗಳ 1,093 ಜನರು, ಭೀಮಪುರ ಪಾಹಿ ಮತ್ತು ತುಂಡ್ರಾ ಪಾಹಿ ಗ್ರಾಮಗಳ 895 ಜನರು ಮತ್ತು ಖಡುಪಾಹಿ ಮತ್ತು ಕುಸುಮುಳಿಯಿಂದ 1,112 ಜನರು ಸೇರಿದಂತೆ ಒಟ್ಟು 3,100 ಜನರನ್ನು ಸ್ಥಳಾಂತರಿಸಲು ಸಕಲ ವ್ಯವಸ್ಥೆ ಮಾಡಲಾಗಿದೆ. ಈ ಉದ್ದೇಶಕ್ಕಾಗಿ ಎಲ್ಲಾ ಸೌಲಭ್ಯಗಳೊಂದಿಗೆ ತಾತ್ಕಾಲಿಕ ಶಿಬಿರದ ಸಿದ್ಧತೆ ಪೂರ್ಣಗೊಂಡಿದೆ.