ಅಂಬಾಲ (ಹರಿಯಾಣ) : ಕುಬ್ಜ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಗಮನ ಸೆಳೆದಿದೆ. ಹರಿಯಾಣದ ಅಂಬಾಲದಲ್ಲಿ ಈ ಅಪರೂಪ ಜೋಡಿಯ ಕಲ್ಯಾಣ ನೆರವೇರಿಸಲಾಗಿದೆ. 3 ಅಡಿ 8 ಇಂಚು ಎತ್ತರದ ಹರಿಯಾಣದ ವರ ನಿತಿನ್ ಎಂಬುವರು 3 ಅಡಿ 6 ಇಂಚು ಎತ್ತರದ ಪಂಜಾಬ್‌ನ ವಧು ಆರುಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇವರನ್ನ ಥಟ್ಟನೇ ನೋಡಿದ್ರೆ ಇದೊಂದು ಬಾಲ್ಯ ವಿವಾಹ ಅನ್ನಿಸುತ್ತದೆಯಾದರೂ ಅಸಲಿಗೆ ಇದು ಬಾಲ್ಯವಿವಾಹವಂತೂ ಅಲ್ವೇ ಅಲ್ಲ. ಇಬ್ಬರು ಪರಸ್ಪರ ಒಪ್ಪಿಕೊಂಡ ಬಳಿಕವೇ ಸಪ್ತಪದಿ ತುಳಿದಿದ್ದು ಈ ಜೋಡಿಯ ವಿಶೇಷ.

ಎಲ್ಲೆಡೆ ಮೆಚ್ಚುಗೆ: ಈ ಅಪರೂಪ ಜೋಡಿಯ ಮದುವೆಗೆ ಇಡೀ ಗ್ರಾಮಸ್ಥರೇ ಸಾಕ್ಷಿಯಾದರು. ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಸಪ್ತಪದಿ ತುಳಿದ ಈ ಕುಬ್ಜ ಜೋಡಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿವೆ. ನೆಟ್ಟಿಗರೂ ಕೂಡ ಇವರ ಫೋಟೋ ಕಂಡು ಅಚ್ಚರಿಯ ಜೊತೆಗೆ ಆಶೀರ್ವಾದ ಮಾಡತೊಡಗಿದ್ದಾರೆ. ನಾವು ಹುಟ್ಟುವ ಮೊದಲೇ ದೇವರು ನಮ್ಮ ಜೀವನದ ಹಣೆಬರಹವನ್ನು ಬರೆದು ಕಳಿಸಿರುತ್ತಾನೆ, ಮದುವೆ ಎನ್ನುವ ಬಂಧನ ಸ್ವರ್ಗದಲ್ಲಿಯೇ ನಿಶ್ಚಯವಾಗುತ್ತದೆ ಎನ್ನುವ ಆಸ್ತಿಕರ ಮಾತಿನಂತೆ ಈ ಪರ್ಫೆಕ್ಟ್ ಜೋಡಿಯ ವಿವಾಹಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇಂತಹ ಮದುವೆ ಆಗುವುದು ತುಂಬಾ ವಿರಳ. ಈ ಜೋಡಿಯನ್ನು ದೇವರು ನಿಜವಾಗಿಯೂ ಸ್ವರ್ಗದಲ್ಲಿ ಸೃಷ್ಟಿಸಿ ಕಳಿಸಿದ್ದಾನೆ. ಅದೇ ವಯಸ್ಸು, ಅಷ್ಟೇ ಎತ್ತರದ ಹುಡುಗಿಯೊಬ್ಬಳು ನನ್ನ ಪುತ್ರನಿಗೆ ಸಿಕ್ಕಿದ್ದು ತುಂಬಾ ಸಂತೋಷ ಅನ್ನಿಸುತ್ತದೆ ಎಂದು ನಿತಿನ್ ವರ್ಮಾ ಅವರ ತಾಯಿ ಮೋನಿಕಾ ಹರ್ಷ ವ್ಯಕ್ತಪಡಿಸಿದ್ದಾರೆ.
ವರದಕ್ಷಿಣೆ ಇಲ್ಲದೆ ಮದುವೆಯಾದ ಅಪರೂಪ ಜೋಡಿ: ಥಟ್ಟನೆ ನೋಡಿದರೆ ಇದೊಂದು ಮಕ್ಕಳ ಮದುವೆ ಅಂತ ಅನ್ನಿಸಿದರೂ ವರನಿಗೆ ಭರ್ತಿ 25 ವರ್ಷ ಆಗಿದ್ದರೆ, ವಧುವಿಗೆ 23 ವರ್ಷ ವಯಸ್ಸು. ವರದಕ್ಷಿಣೆ-ವಧುದಕ್ಷಿಣೆ ಇಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈ ಜೋಡಿಯ ಮತ್ತೊಂದು ವಿಶೇಷ. ನಿತಿನ್ ವರ್ಮಾ 3 ಅಡಿ 8 ಇಂಚು ಎತ್ತರ ಮತ್ತು ಆರುಷಿಯ 3 ಅಡಿ 6 ಇಂಚು ಎತ್ತರ ಮದುವೆಗೆ ಆಗಮಿಸಿದ್ದ ಎಲ್ಲರ ಹುಬ್ಬೇರಿಸಿತು.

ನಾನು ಮದುವೆಯ ಪ್ರಸ್ತಾಪದೊಂದಿಗೆ ಆರುಷಿಯ ಮನೆಗೆ ಬಂದಾಗ, ಅವರ ಕುಟುಂಬದ ಆರ್ಥಿಕ ಸ್ಥಿತಿಯ ಬಗ್ಗೆ ನನಗೆ ತಿಳಿದುಬಂದಿತು. ವರದಕ್ಷಿಣೆ ಇಲ್ಲದೆ ಮದುವೆ ಆಗುವುದಾಗಿ ಹೇಳಿದ ಬಳಿಕ, ಆರುಷಿಯ ಮನೆಯವರಿಗೆ ತುಂಬಾ ಇಷ್ಟವಾಯಿತು. ಉಭಯ ಕುಟುಂಬಗಳಿಗೂ ಒಬ್ಬರಿಗೊಬ್ಬರ ಮಾಹಿತಿ ಲಭ್ಯವಾಯಿತು. ಯಾವುದೇ ಚರ್ಚೆ, ಮಾತುಕಥೆ ಇಲ್ಲದೇ ಮದುವೆಗೆ ಒಪ್ಪಿಕೊಂಡರು. ಆರುಷಿ ನಾಲ್ವರು ಒಡಹುಟ್ಟಿದವರಲ್ಲಿ ಹಿರಿಯವಳಾಗಿದ್ದು, ಕುಟುಂಬಕ್ಕೆ ಆಕೆಯೇ ಆಧಾರ. ಬಿಎ ವರೆಗೆ ಓದಿದ್ದಾಳೆ. ವಿದ್ಯಾವಂತ ಸೊಸೆ ಸಿಕ್ಕಿದ್ದಕ್ಕೆ ನನ್ನ ತಾಯಿಗೂ ತುಂಬಾ ಖುಷಿಯಾಗುತ್ತಿದೆ ಎಂದು ಮಧುಮಗ ನಿತಿನ್ ವರ್ಮಾ ಸಂತಸ ಹಂಚಿಕೊಂಡಿದ್ದಾರೆ.
ಏ.10ರಂದು ಈ ಮದುವೆ ನಡೆದಿದ್ದು, ಇವರ ದಾಂಪತ್ಯ ಜೀವನ ಸುಖಮಯವಾಗಿ, ಮಾದರಿಯಾಗಿರಲಿ ಎಂದು ಈ ಮುದ್ದಾದ ಜೋಡಿಗೆ ಹಲವರು ಶುಭಾಶಯ ಕೋರಿದ್ದಾರೆ.