ಕೋಲ್ಕತ್ತಾ: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಗುಂಡೇಟು ತಗುಲಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಸ್ಲಿಂ ಬಾಹುಳ್ಯದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಶುಕ್ರವಾರ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿ ಇದುವರೆಗೆ ಪೊಲೀಸರು 125ಕ್ಕೂ ಅಧಿನ ಜನರನ್ನು ಬಂಧಿಸಿದ್ದಾರೆ. ಮೃತರಲ್ಲಿ ಇಬ್ಬರು ಘರ್ಷಣೆಯಲ್ಲಿ ಸಾವನ್ನಪ್ಪಿದರೆ, ಒಬ್ಬರು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ಶುಕ್ರವಾರ ಸುತಿರ್ ಸಾಜೂರ್ನಲ್ಲಿ ಗುಂಡೇಟು ತಗುಲಿ ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ಮೊಶರಫ್ ಹುಸೇನ್ ಎನ್ನುವಾತ ಇಂದು ಸಾವನ್ನಪ್ಪಿದ್ದಾನೆ. ಮತ್ತೊಂದೆಡೆ ಶಂಶೇರ್‌ಗಂಜ್ ಬ್ಲಾಕ್‌ನ ಧುಲಿಯನ್ ಪುರಸಭೆ ಪ್ರದೇಶದ ಜಾಫ್ರಾಬಾದ್‌ನಲ್ಲಿ ದುಷ್ಕರ್ಮಿಯೊಬ್ಬ ತಂದೆ ಮತ್ತು ಮಗನನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿದ್ದಾನೆ. ಮೃತರನ್ನು ಗಜಲ್ ದಾಸ್ (45) ಮತ್ತು ಚಂದನ್ ದಾಸ್ (20) ಎಂದು ಗುರುತಿಸಲಾಗಿದೆ. ಬಹಳ ಸಮಯದಿಂದ ಇಬ್ಬರು ಮೃತದೇಹಗಳು ಮನೆಯಲ್ಲೇ ಇದ್ದವು. ನಂತರ, ಗಮನಿಸಿದ ಪೊಲೀಸರು ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಜಂಗಿಪುರ ಉಪಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಮುರ್ಷಿದಾಬಾದ್‌ನ ಹಲವಾರು ಪ್ರದೇಶಗಳಲ್ಲಿ ಶುಕ್ರವಾರ ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದವು. ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ಸಂಸರ್‌ಗಂಜ್‌ನ ಸುತಿಯಲ್ಲಿ ಸರ್ಕಾರಿ ವಾಹನ ಸೇರಿದಂತೆ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಯಿತು.

ಸುತಿ, ಸಂಸೇರ್‌ಗಂಜ್‌ನಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಶನಿವಾರ ಬೆಳಗ್ಗೆಯಿಂದ ಸಂಸೇರ್‌ಗಂಜ್‌ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಚಾಂದ್‌ಪುರ, ಡಾಕ್ ಬಾಂಗ್ಲಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಿಂಸಾತ್ಮಕ ಘಟನೆಗಳು ವರದಿಯಾಗುತ್ತಿವೆ. ಜಲಂಗಿ ಬಿಡಿಒ ಕಚೇರಿಯನ್ನು ಧ್ವಂಸ ಮಾಡಲಾಗಿದೆ. ಬಿಎಸ್‌ಎಫ್ ಸಿಬ್ಬಂದಿ ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದಾರೆ.
ಸಂಸೇರ್‌ಗಂಜ್‌ನಲ್ಲಿ ಸೆಕ್ಷನ್ 163 ವಿಧಿಸಲಾಗಿದೆ. ಎಲ್ಲಾ ರೀತಿಯ ಸಭೆ ನಡೆಸುವುದನ್ನು ಸಹ ನಿಷೇಧಿಸಲಾಗಿದೆ. ಬಿಎಸ್‌ಎಫ್ ಸಿಬ್ಬಂದಿ ಹಿಂಸಾಚಾರ ಭುಗಿಲೆದ್ದ ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದಾರೆ. ಕೇಂದ್ರ ಪಡೆಗಳು ವಿವಿಧ ಪ್ರದೇಶಗಳಲ್ಲಿ ರೂಟ್ ಮಾರ್ಚ್ ನಡೆಸುತ್ತಿವೆ. ಹಿಂಸಾಚಾರದ ವೇಳೆ ಸುಟ್ಟುಹೋದ ಹಲವಾರು ವಾಹನಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿದ್ದಿವೆ. ಇಲ್ಲಿಯವರೆಗೆ ಘಟನೆಯಲ್ಲಿ ಭಾಗಿಯಾಗಿರುವ 122ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.
সবার কাছে আবেদন
— Mamata Banerjee (@MamataOfficial) April 12, 2025
সব ধর্মের সকল মানুষের কাছে আমার একান্ত আবেদন, আপনারা দয়া করে শান্ত থাকুন, সংযত থাকুন। ধর্মের নামে কোনো অ-ধার্মিক আচরণ করবেন না। প্রত্যেক মানুষের প্রাণই মূল্যবান, রাজনীতির স্বার্থে দাঙ্গা লাগাবেন না। দাঙ্গা যারা করছেন তারা সমাজের ক্ষতি করছেন।
মনে রাখবেন, যে…
ಶಾಂತಿ, ಸಾಮರಸ್ಯಕ್ಕಾಗಿ ಸಿಎಂ ಮನವಿ: ಈ ನಡುವೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡು, ಶಾಂತಿ ಹಾಗೂ ಸಾಮರಸ್ಯ ಕಾಪಾಡುವಂತೆ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ. ಪೋಸ್ಟ್ನಲ್ಲಿ "ಎಲ್ಲ ಧರ್ಮದ ಜನರಿಗೆ ನಾನು ಪ್ರಾಮಾಣಿಕವಾಗಿ ಮನವಿ ಮಾಡುತ್ತೇನೆ. ದಯವಿಟ್ಟು ಶಾಂತವಾಗಿರಿ, ಸಂಯಮದಿಂದಿರಿ. ಧರ್ಮದ ಹೆಸರಿನಲ್ಲಿ ಯಾವುದೇ ಅನ್ಯಾಯದ ಕಾರ್ಯದಲ್ಲಿ ತೊಡಗಬೇಡಿ. ಪ್ರತಿಯೊಬ್ಬ ಮಾನವ ಜೀವವೂ ಅಮೂಲ್ಯ. ರಾಜಕೀಯಕ್ಕಾಗಿ ಗಲಭೆಗಳನ್ನು ಪ್ರಚೋದಿಸಬೇಡಿ. ಗಲಭೆಯನ್ನು ಪ್ರಚೋದಿಸುತ್ತಿರುವವರು ಸಮಾಜಕ್ಕೆ ಹಾನಿ ಉಂಟುಮಾಡದಂತೆ" ಎಂದು ಮಾನವಿ ಮಾಡಿದ್ದಾರೆ.
"ಅನೇಕರು ವಿರೋಧಿಸುತ್ತಿರುವ ಕಾನೂನನ್ನು ನಾವು ಮಾಡಿಲ್ಲ. ಕಾನೂನನ್ನು ಕೇಂದ್ರ ಸರ್ಕಾರ ಮಾಡಿದೆ. ಹಾಗಾಗಿ ನಿಮಗೆ ಬೇಕಿರುವ ಉತ್ತರವನ್ನು ನೀವು ಕೇಂದ್ರ ಸರ್ಕಾರದ ಜೊತೆಗೆ ಕೇಳಬೇಕು. ಈ ಬಗ್ಗೆ ನಮ್ಮ ನಿಲುವನ್ನು ನಾವು ಸ್ಪಷ್ಟಪಡಿಸಿದ್ದೇವೆ. ನಾವು ಈ ಕಾನೂನಿಗೆ ಬೆಂಬಲ ನೀಡುತ್ತಿಲ್ಲ. ವಕ್ಫ್ ಕಾನೂನು ನಮ್ಮ ರಾಜ್ಯದಲ್ಲಿ ಜಾರಿಯಾಗುವುದಿಲ್ಲ. ಹಾಗಿರುವಾಗ ಯಾಕಾಗಿ ಈ ಗಲಭೆ?" ಎಂದು ಪ್ರಶ್ನಿಸಿದ್ದಾರೆ.
"ಅಲ್ಲದೇ, ಗಲಭೆಯನ್ನು ಪ್ರಚೋದಿಸುವವರ ವಿರುದ್ಧ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂಬುದನ್ನು ನೆನಪಿಡಿ. ನಾವು ಯಾವುದೇ ಹಿಂಸಾತ್ಮಕ ಚಟುವಟಿಕೆಯನ್ನು ಕ್ಷಮಿಸುವುದಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ವಕ್ಫ್ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಹಿಂಸಾಚಾರ: ಪಶ್ಚಿಮ ಬಂಗಾಳದಲ್ಲಿ 110ಕ್ಕೂ ಅಧಿಕ ಜನರ ಬಂಧನ