ವಿಶಾಖಪಟ್ಟಣಂ (ಆಂಧ್ರಪ್ರದೇಶ) : 'GEN Z' ಪೀಳಿಗೆಯ ಯುವಕರು ಬುದ್ಧಿಮತ್ತೆಯಲ್ಲಿ ಅತಿ ತೀಕ್ಷ್ಣಮತಿಗಳು. ಇದರಿಂದಲೇ ಅವರು ವಿಶ್ವದ ಮಹೋನ್ನತ ಸಂಸ್ಥೆಗಳಲ್ಲಿ ಹುದ್ದೆಗೇರುತ್ತಿದ್ದಾರೆ. ಇದಕ್ಕೆ ಉದಾಹರಣೆಯಾಗಿ, ಆಂಧ್ರಪ್ರದೇಶದ 22 ವರ್ಷದ ಯುವಕ ಇ-ಕಾಮರ್ಸ್ ದೈತ್ಯ ಅಮೆಜಾನ್ನಲ್ಲಿ ವಾರ್ಷಿಕ 50 ಲಕ್ಷ ರೂಪಾಯಿ ಸಂಬಳದ ಉದ್ಯೋಗ ಸಂಪಾದಿಸಿಕೊಂಡಿದ್ದಾನೆ.
ಈ ಸಾಧಕನ ಹೆಸರು ಬಲ್ಸಾ ಹರ್ಷ. ವಿಶಾಖಪಟ್ಟಣದ ನಿವಾಸಿಯಾಗಿರುವ ಈತ ಬಿ.ಟೆಕ್ ಪದವೀಧರ. ಕೋಡ್ಚೆಫ್ (CodeChef) ನಲ್ಲಿ ಪಳಗಿರುವ ಈತನಿಗೆ ಅಮೆಜಾನ್ ಸಂಸ್ಥೆಯು ವಾರ್ಷಿಕವಾಗಿ ಅರ್ಧಕೋಟಿ ರೂಪಾಯಿ ಸಂಬಳ ನೀಡಲು ಸಜ್ಜಾಗಿದೆ.
ಸಾಧನೆಯ ಬಗ್ಗೆ ಹರ್ಷನ ಮಾತುಗಳು: ನಾನು ಪಿಯುಸಿವರೆಗೆ ರಾಜ್ಯ ಪಠ್ಯಕ್ರಮದಲ್ಲಿ ಓದಿದ್ದೆ. ಎಂಜಿನಿಯರಿಂಗ್ ಸೇರಿದಾಗ ನನಗೆ ಕೋಡಿಂಗ್ ಬಗ್ಗೆ ಯಾವುದೇ ಜ್ಞಾನವಿರಲಿಲ್ಲ. ಆದರೆ, ನಮ್ಮ ಪ್ರಾಂಶುಪಾಲರು ಈ ಬಗ್ಗೆ ತಿಳಿಸುತ್ತಿದ್ದರು. 'ಹ್ಯಾಕರ್‌ಅರ್ಥ್'ನಿಂದ ನಮಗೆ ಕ್ಲಿಷ್ಟಕರ ಸಮಸ್ಯೆಗಳನ್ನು ನೀಡುತ್ತಿದ್ದರು. ಪ್ರತಿ ವಾರ ಅವುಗಳಿಗೆ ಉತ್ತರ ಹುಡುಕುವ ಸವಾಲು ನೀಡುತ್ತಿದ್ದರು. ಗೂಗಲ್ನಲ್ಲಿ ಕೂಡ ಲಭ್ಯವಿರಲಿಲ್ಲ. ನಾವೇ ಕೋಡ್ ರಚಿಸಬೇಕಿತ್ತು. ಇದೇ ನನಗೆ ದೊಡ್ಡ ಅಡಿಪಾಯ ಹಾಕಿಕೊಟ್ಟಿತು ಎಂದಿದ್ದಾರೆ.
ಕೋವಿಡ್ ಲಾಕ್ಡೌನ್ನಲ್ಲಿ ಕೋಡಿಂಗ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಎಂಜಿನಿಯರಿಂಗ್ನ ಎರಡನೇ ವರ್ಷದಲ್ಲಿ ಕೋಡ್‌ಚೆಫ್‌ನಲ್ಲಿ ಪ್ರೋಗ್ರಾಮಿಂಗ್ ಆರಂಭಿಸಿದೆ. ಚೆನ್ನೈ ಮೂಲದ ಕಂಪನಿಯಿಂದ ನನಗೆ ವಾರ್ಷಿಕ 12 ಲಕ್ಷ ರೂಪಾಯಿ ಸಂಬಳದ ಆಫರ್ ಬಂದಿತು. ಅಂತಿಮ ವರ್ಷದಲ್ಲಿ, ಬೆಂಗಳೂರಿನ ಸ್ಟಾರ್ಟ್ಅಪ್ ಆದ ಎಫ್‌ಐ ಮನಿಯಿಂದ ವಾರ್ಷಿಕ ₹20 ಲಕ್ಷ ಪ್ಯಾಕೇಜ್ ಆಫರ್ ಬಂದಿತು. ನಾನು ಅದರಲ್ಲಿ ಸೇರಿಕೊಂಡು ಆರು ತಿಂಗಳು ಆಂಡ್ರಾಯ್ಡ್ ಅಭಿವೃದ್ಧಿಯಲ್ಲಿ ಇಂಟರ್ನ್‌ಶಿಪ್ ಮುಗಿಸಿ, 10 ತಿಂಗಳು ಪೂರ್ಣ ಸಮಯದ ಕೆಲಸ ಮಾಡಿದೆ ಎಂದು ತಿಳಿಸಿದ್ದಾರೆ.
ಒಲಿದ ಅಮೆಜಾನ್ ಆಫರ್: FI Money ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಎಂಜಿನಿಯರ್ (ಎಸ್‌ಡಿಇ) ಹುದ್ದೆಗೆ ಅಮೆಜಾನ್‌ನಿಂದ ನನಗೆ ಆಫರ್ ಬಂತು. ಪರೀಕ್ಷೆಗಳನ್ನು ಅತ್ಯುತ್ತಮವಾಗಿ ಎದುರಿಸಿದೆ. ಬಳಿಕ ನೇಮಕಾತಿ ಪತ್ರ ಪಡೆದುಕೊಂಡೆ. ಈಗ ಅಮೆಜಾನ್‌ನ ಹೈದರಾಬಾದ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಯೂಟ್ಯೂಬ್ನಲ್ಲಿ ಕೋಡಿಂಗ್ನಲ್ಲಿ ಸಾಧನೆ ಮಾಡಿದವರ ವಿಡಿಯೋಗಳನ್ನು ಗಮನಿಸಿದೆ. ಲೀಟ್‌ಕೋಡ್ ಅನ್ನು ನಿಯಮಿತವಾಗಿ ಅನುಸರಿಸಿದೆ. ಆಪರೇಟಿಂಗ್ ಸಿಸ್ಟಮ್ಸ್ ಮತ್ತು ಡೇಟಾ ರಚನೆಗಳ ಕುರಿತ ಪುಸ್ತಕಗಳನ್ನು ಅಧ್ಯಯನ ಮಾಡಿದ್ದೇನೆ ಎಂದು ಹರ್ಷ ತಿಳಿಸಿದ್ದಾರೆ.
ಇದನ್ನೂ ಓದಿ: ಸುಖಕರ ದಾಂಪತ್ಯ ಜೀವನಕ್ಕೆ ಇದು ಸಹಾಯಕವಂತೆ: ಈ ಒಂದು ಪಾನ್ಗೆ ₹5 ಸಾವಿರ ರೂ: ಚಿನ್ನ ಲೇಪಿತ ಸಾಜನ್, ಏನಿದರ ವಿಶೇಷತೆ?