ಧರ್ಮಪುರಿ (ತಮಿಳುನಾಡು): ತಮಿಳು ಹೊಸ ಸಂವತ್ಸರ ಆಚರಣೆಯ ಸಂಭ್ರಮದಲ್ಲಿ ದುರಂತವೊಂದು ನಡೆದಿದೆ. ಕುಟುಂಬದೊಂದಿಗೆ ಬಂದಿದ್ದ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸೋಮವಾರ ವರದಿಯಾಗಿದ್ದು, ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬೆನ್ನಾಗರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಒಕೆನಕ್ಕಲ್ ಗೆ ಕುಟುಂಬ ಸಮೇತ ಪ್ರವಾಸಕ್ಕೆ ಬಂದಿದ್ದ ಬಾಲಕಿಯರು ದುರಂತ ಅಂತ್ಯ ಕಂಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಏಪ್ರಿಲ್ 14 ತಮಿಳು ನೂತನ ಸಂವತ್ಸರ ಆಗಿದ್ದರಿಂದ ರಾಜ್ಯದ ಎಲ್ಲಾ ಭಾಗಗಗಳಿಂದ ಪ್ರವಾಸಿಗರು ಧರ್ಮಪುರಿ ಜಿಲ್ಲೆಯಲ್ಲಿರುವ ಒಕೆನಕ್ಕಲ್ ಕಾವೇರಿ ನದಿಗೆ ಕೃಷ್ಣಗಿರಿ ಜಿಲ್ಲೆಯ ತೆಂಗನಕೊಟ್ಟೈನ ರಾಮನಗರ ನಿವಾಸಿ ಮುತ್ತಪ್ಪ ಅವರು ತಮ್ಮ ಸಂಬಂಧಿಕರಾದ ಬೆಂಗಳೂರಿನ ಸರ್ಜಾಪುರದ ನಿವಾಸಿ ಸೆಂಬಾ ಮುತ್ತು ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದರು.
ಇಲ್ಲಿನ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಬಳಿಕ ಒಕೆನಕ್ಕಲ್ ಬಳಿಯ ಅಲಂಬಾಡಿಯಲ್ಲಿರುವ ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಕುಟುಂಬಸ್ಥರು ತೆರಳಿದ್ದರು. ಈ ವೇಳೆ ಮುತ್ತಪ್ಪ ಅವರ 10 ವರ್ಷದ ಮಗಳು ಪಕ್ಯಾಲಕ್ಷ್ಮಿ ಮತ್ತು ಚಿನ್ನಪ್ಪ ಎಂಬುವರ 16 ವರ್ಷದ ಪುತ್ರಿ ಕಾವ್ಯ ನದಿಯ ಆಳಕ್ಕಿಳಿದು ಸ್ನಾನ ಮಾಡುತ್ತಿದ್ದರು. ಆಗ ಅವರಿಗೆ ಈಜು ಬಾರದೆ ಏನು ಮಾಡಬೇಕೆಂಬುದು ತಿಳಿಯದೆ ನೀರಿನಲ್ಲಿ ಮುಳುಗಿದ್ದಾರೆ.
ಬಳಿಕ ಸಂಬಂಧಿಕರೆಲ್ಲ ಸೇರಿ ಹುಡುಕಾಡಿದರೂ ಸಹ ಬಾಲಕಿಯರು ಪತ್ತೆ ಆಗಿಲ್ಲ. ಆಗ ಒಕೆನಕ್ಕಲ್ ಪೊಲೀಸರಿಗೆ ಈ ವಿಷಯ ಮುಟ್ಟಿಸಿದರು. ಈ ಕುರಿತು ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ತಂಡದಿಂದ ನದಿಯಲ್ಲಿ ಹುಡುಕಿದಾಗ ಬಾಲಕಿಯರು ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಪೊಲೀಸರು ರವಾನಿಸಿದರು.
ಇದನ್ನೂ ಓದಿ : ತೆಲಂಗಾಣ: ಕಾರಿನಲ್ಲಿ ಉಸಿರುಗಟ್ಟಿ ಇಬ್ಬರು ಮಕ್ಕಳು ಸಾವು, ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಆಘಾತ!