ಪೂರ್ವ ಗೋದಾವರಿ, ಆಂಧ್ರಪ್ರದೇಶ: ಕಡಿಯಂ ನರ್ಸರಿಗಳು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿವೆ. ಈ ನರ್ಸರಿಗಳಲ್ಲಿ ಸಾವಿರಾರು ವಿಧದ ಸಸ್ಯಗಳು ಮತ್ತು ಮರಗಳು ನಿಮ್ಮನ್ನೆಲ್ಲ ಅಚ್ಚರಿಗೆ ದೂಡುವುದರಲ್ಲಿ ಸಂಶಯವಿಲ್ಲ. ಇವು ಹಲವು ವರ್ಷಗಳಿಂದ ನಿಸರ್ಗ ಪ್ರೇಮಿಗಳಿಗೆ ಖುಷಿ ನೀಡುತ್ತಿವೆ. ಅಂತಹ ಕಡಿಯಂ ನರ್ಸರಿಗಳಲ್ಲಿ ಇರುವ ವಿದೇಶಿ ಸಸ್ಯಗಳ ಬಗ್ಗೆ ಹೇಳದೇ ಇರಲು ಸಾಧ್ಯವೇ ಇಲ್ಲ. ಎಲ್ಲೋ ಏಳು ಸಾಗರಗಳನ್ನು ದಾಟಿ, ಹುಟ್ಟಿ ಬೆಳೆದ ಸಸ್ಯಗಳು ಮತ್ತು ಮರಗಳು ಕಡಿಯಂ ನರ್ಸರಿಗಳಲ್ಲಿ ಕಂಡು ಬರುತ್ತಿರುವುದು ಇಲ್ಲಿನ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ. ದೇಶದ ಮೂಲೆಮೂಲೆಗಳಿಂದ ಖರೀದಿದಾರರು ತಮ್ಮ ಮನೆ ಮತ್ತು ಕಚೇರಿಗಳನ್ನು ಅಲಂಕರಿಸಲು ಕಡಿಯಂ ನರ್ಸರಿಗಳಿಂದ ಸಸ್ಯಗಳು ಮತ್ತು ಮರಗಳನ್ನು ಕೊಂಡು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ನಡೆಯಲಿರುವ ವನ ಸ್ಪರ್ಧೆಗಳಲ್ಲಿ ಮಿಂಚಲು ಹಾಗೂ ಇಲ್ಲಿನ ನರ್ಸರಿಗಳ ಹೆಸರನ್ನು ಜನಪ್ರಿಯಗೊಳಿಸಲು ಪೂರ್ವ ಗೋದಾವರಿ ಜಿಲ್ಲೆಯ ರೈತರು ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. ಕಡಿಯಂ ಮಂಡಲದ ಕಡಿಯಾಪುಲಂಕದ ಶಿವಾಂಜನೇಯ ನರ್ಸರಿಯಲ್ಲಿ ತಲಾ 35 ಲಕ್ಷ ರೂಪಾಯಿ ಮೌಲ್ಯದ 135 ವರ್ಷದ ಎರಡು ಮರಗಳನ್ನು ವಿದೇಶದಿಂದ ತರಿಸಿ ನೆಡಲಾಗಿದೆ.
ಈ ಮರಗಳ ವಿಶೇಷತೆಗಳ ಬಗ್ಗೆ ನರ್ಸರಿ ಮುಖ್ಯಸ್ಥರು ಹೇಳುವುದಿಷ್ಟು: ಈ ಮರಗಳನ್ನು ವಿದೇಶದಿಂದ ವಿಶೇಷ ಕಂಟೈನರ್‌ನಲ್ಲಿ ಸಮುದ್ರ ಮಾರ್ಗದ ಮೂಲಕ ತರಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ವಿದೇಶದಿಂದ ಈ ಎರಡು ಮರಗಳನ್ನು ತರಿಸಲಾಗಿದೆ ಎಂದು ನರ್ಸರಿ ಮುಖ್ಯಸ್ಥ ಮಲ್ಲು ಪೋಲರಾಜು ತಿಳಿಸಿದ್ದಾರೆ. ಈ ಮರದ ಹೆಸರು ಸಿಲ್ಕ್ಪ್ರೋಸ್. ಇದರ ವೈಜ್ಞಾನಿಕ ಹೆಸರು ಚೋರಿಸಿಯಾ ಸ್ಪೆಸಿಯೋಸಾ ಎಂದಿದೆ. ಪ್ರತಿ ಮರದ ಸಾಗಣೆ ವೆಚ್ಚ ಸುಮಾರು 10 ಲಕ್ಷ ರೂಪಾಯಿಗಳಾಗಿದೆ. ಸಾಗಣೆಗೆ ಸುಮಾರು 75 ದಿನಗಳನ್ನು ವ್ಯಯಿಸಲಾಗಿದೆ ಎಂದ ಪೋಲರಾಜು, ಈ ಎರಡು ಗಿಡಗಳನ್ನು ವಿದೇಶದಿಂದ ತರಿಸಿದ ಬಗ್ಗೆ ವಿವರಣೆ ನೀಡಿದರು. ಸ್ಟಾರ್ ಹೋಟೆಲ್, ವಿಲ್ಲಾ, ಬೃಹತ್ ಕಟ್ಟಡಗಳಲ್ಲಿ ಅಲಂಕಾರಕ್ಕಾಗಿ ಈ ಮರಗಳನ್ನು ಇರಿಸಲಾಗುತ್ತಿದೆ. ಹೀಗಾಗಿ ಇಂತಹ ಮರಗಳಿಗೆ ಭಾರಿ ಬೇಡಿಕೆ ಇದೆ.
ಮತ್ತೆ ಚಿಗುರಿದ ಮರ: ಮತ್ತೊಂದು ಕಡೆ ಶ್ರೀಕಾಕುಳಂ ಜಿಲ್ಲೆಯಲ್ಲಿ ಮರವೊಂದು ನಿಸರ್ಗ ಪ್ರೇಮಿಗಳ ಆಕರ್ಷಣೆಯ ಕೇಂದ್ರವಾಗಿದೆ. ಗರ ಮಂಡಲ ಸಿಎಸ್ ಪಿ ರಸ್ತೆಯ ಚಿಕ್ಕ ಉಪ್ಪರಿಪೇಟೆ ಜಂಕ್ಷನ್ ಬಳಿ ಇರುವ ಬೃಹತ್ ಅಶೋಕ ಮರ ಇದಾಗಿದೆ. ಆದರೆ ಕೆಲ ದಿನಗಳ ಹಿಂದಿನವರೆಗೂ ಸಂಪೂರ್ಣವಾಗಿ ಒಣಗಿದ್ದ ಮರ ಕುಸಿದು ಬೀಳಲು ಸಿದ್ಧವಾಗಿತ್ತು.
ಇದರಿಂದ ನಿಸರ್ಗ ಪ್ರೇಮಿಗಳು ಕಂಗಾಲಾಗಿದ್ದರು. ಆದರೆ, ಈಗ ಮರ ಚಿಗುರೊಡೆದು ಹಸಿರಿನಿಂದ ಕಂಗೊಳಿಸುತ್ತಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ನಾನು ಇನ್ನೂ ಬದುಕಿದ್ದೇನೆ ಎಂದು ಈ ಮರ ಹೇಳುತ್ತಿರುವುದು ಎಲ್ಲರನ್ನು ಚಕಿತಗೊಳಿಸಿದೆ.
ಇದನ್ನು ಓದಿ: ಮತ್ಸ್ಯ 6000: ಸಮುದ್ರ ಜಲಾಂತರ್ಗಾಮಿ ನೌಕೆಯ ಪರೀಕ್ಷೆ ಯಶಸ್ವಿ