ಪಾಟ್ನಾ, ಬಿಹಾರ: 1917ರಲ್ಲಿ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಬಿಹಾರದ ಚಂಪಾರಣ್ಯ ಜಿಲ್ಲೆಯಲ್ಲಿ ನಡೆದ ಸತ್ಯಾಗ್ರಹಕ್ಕೆ ಇದೀಗ 107 ವರ್ಷಗಳು. ದೇಶದ ಇತಿಹಾಸದ ಪುಟಗಳಲ್ಲಿ ಯಾರೂ ಎಂದಿಗೂ ಮರೆಯಲಾಗದ ಸುದಿನ ಇದು ಎಂದೇ ಹೇಳಲಾಗುತ್ತದೆ.
ಚಂಪಾರಣ್ಯ ಜಿಲ್ಲೆಯಲ್ಲಿ ಆಂಗ್ಲರಿಂದ ರೈತರಿಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಲೇ ರೈತರನ್ನೂ ಮತ್ತು ಸುತ್ತಲಿನ ಜನರನ್ನೂ ಸಬಲೀಕರಣಗೊಳಿಸುತ್ತ, ಎಲ್ಲರನ್ನೂ ಸುಧಾರಣೆಯತ್ತ ಒಯ್ಯುವ ಕೆಲಸವನ್ನು ಮಾಡದ ದಿನಕ್ಕೆ ಭರ್ತಿ 107 ವರ್ಷಗಳು. 1917ರ ಏ.10ರಂದು ಗುಂಡು ಹಾರಿಸದೇ, ಲಾಠಿ ಚಾರ್ಜ್, ಮೆರವಣಿಗೆ, ಸಭೆ ನಡೆಸದೇ ಆರಂಭಗೊಂಡ ಈ ಚಳವಳಿ ದೇಶ ಕಟ್ಟುವಿಕೆಯಲ್ಲಿ ಮಾದರಿಯಾಗಿದ್ದು ಈಗ ಇತಿಹಾಸ. ಗಾಂಧೀಜಿ ಅವರ ಅಹಿಂಸಾ ಚಳವಳಿ ಮತ್ತು ಸತ್ಯಾಗ್ರಹದಿಂದ ವಿಚಲಿತರಾದ ಆಂಗ್ಲರು, ಎಷ್ಟೋ ಜನ ಹೋರಾಟಗಾರರನ್ನು ಬಂಧಿಸಿ ಜೈಲಿಗೆ ಹಾಕಿದ್ದರು. ಅದರಲ್ಲಿ ಗಾಂಧೀಜಿ ಕೂಡ ಒಬ್ಬರಾಗಿದ್ದರು. ಬಂಧನದಿಂದ ಹೊರಬರುವಂತೆ ಜಾಮೀನು ನೀಡಿದರೂ ಗಾಂಧೀಜಿ ಹೊರಬರದೇ ಹೋರಾಟಕ್ಕೆ ಧುಮುಕಿದ್ದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ.

135 ವರ್ಷಗಳ ಸಂಪ್ರದಾಯಕ್ಕೆ ಕೊನೆ: ಗಾಂಧೀಜಿಯ ನೇತೃತ್ವದಲ್ಲಿ 1917ರಲ್ಲಿ ಬಿಹಾರದ ಚಂಪಾರಣ್ಯ ಜಿಲ್ಲೆಯಲ್ಲಿ ಈ ಸತ್ಯಾಗ್ರಹ ನಡೆಯಿತು. ಇತಿಹಾಸ ಪುಟಗಳಲ್ಲಿ ಇದನ್ನು ಚಂಪಾರಣ್ಯ ಸತ್ಯಾಗ್ರಹ ಎಂದು ಉಲ್ಲೇಖಿಸಲಾಗುತ್ತದೆ. ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಭಾರತದ ಮೊದಲ ಸತ್ಯಾಗ್ರಹ ಕೂಡ ಹೌದು. ಭಾರತದ ರೈತರ ಬಳಿ ಅತಿಹೆಚ್ಚು ತೆರಿಗೆ ವಸೂಲಿ ಮಾಡುವುದರ ಜೊತೆಗೆ ಬ್ರಿಟಿಷರು ಹೇಳಿರುವ ಬೆಳೆಯನ್ನೇ ಭಾರತದ ಕೃಷಿಕರು ಬೆಳೆಯಬೇಕಿತ್ತು. ಇಂಡಿಗೋ ಬೆಳೆ ಬೆಳೆಯಲು ಒತ್ತಡ ಹೇರುತ್ತಿದ್ದರಿಂದ ಚಂಪಾರಣ್ಯ ಜಿಲ್ಲೆಯ ರೈತರು ಬೇಸತ್ತು ಹೋಗಿದ್ದರು. ಈ ಅನ್ಯಾಯದ ವಿರುದ್ಧ 1917ರಲ್ಲಿ ಗಾಂಧೀಜಿ ಹೋರಾಟಕ್ಕೆ ಧುಮುಖಿದರು. ಯಾವಾಗ ಗಾಂಧೀಜಿ ಹೋರಾಟಕ್ಕೆ ಕಾಲಿಟ್ಟರೋ ಆಗ ಪರಿಸ್ಥಿತಿ ಪೂರ್ತಿ ಬದಲಾಗಿ ಹೋಗಿತ್ತು. 135 ವರ್ಷಗಳ ಸಂಪ್ರದಾಯಕ್ಕೆ ತೆರೆ ಕೂಡ ಬಿದ್ದಿತು. ವಾಣಿಜ್ಯ ಬೆಳೆಯಾದ ಇಂಡಿಗೋ ಬೆಳೆ ಬೆಳೆಯುವಂತೆ ಹೇರಲಾಗುತ್ತಿದ್ದ ಒತ್ತಡ ನಿಂತಿತು. ಗಾಂಧೀಜಿ ಅವರ ಅಹಿಂಸಾ ಚಳವಳಿ, ಸತ್ಯಾಗ್ರಹ ಹಾದಿ ಭಯ ಅವರಲ್ಲಿ ಹುಟ್ಟಿಸಿತ್ತು. ಹೀಗಾಗಿ ಕೊನೆಗೆ ರೈತರಿಗೆ ಇಂಡಿಗೋ ಬೆಳೆಯಿಂದ ಬ್ರಿಟಿಷರು ರಿಯಾಯಿತಿ ನೀಡಿದ್ದು ಇತಿಹಾಸ.

ಚಂಪಾರಣ್ಯ ಸತ್ಯಾಗ್ರಹದ ಇತಿಹಾಸ: ಈ ಮೊದಲೇ ಹೇಳಿದಂತೆ ಇದು ಭಾರತದಲ್ಲಿ ಗಾಂಧೀಜಿ ನೇತೃತ್ವದ ಮೊದಲ ಸತ್ಯಾಗ್ರಹ ಚಳವಳಿಯಾಗಿತ್ತು. ಭಾರತದಲ್ಲಿ ಗಾಂಧೀಜಿಯವರು ಮೊದಲು ತಮ್ಮ ಪರೀಕ್ಷಿತ ಸತ್ಯಾಗ್ರಹ ಮತ್ತು ಅಹಿಂಸೆಯ ಅಸ್ತ್ರಗಳನ್ನು ಚಂಪಾರಣ್ಯ ನೆಲದಲ್ಲಿ ಬಳಸಿದರು ಅನ್ನೋದು ಇತಿಹಾಸದಿಂದ ತಿಳಿದು ಬರುತ್ತದೆ. ಇದೇ ಮುಂದೆ ದೇಶದ ಸ್ವಾತಂತ್ರ್ಯ ಆಂದೋಲನ ಬೀಜಾರ್ಪಣೆ ಕೂಡ ಆಯಿತು. ಮೋಹನದಾಸ್ ಕರಮಚಂದ ಗಾಂಧಿ ಮಹಾತ್ಮನಾಗುವತ್ತ ಇಟ್ಟ ಮೊದಲ ಹೆಜ್ಜೆ ಕೂಡ ಹೌದು. ಈ ಸತ್ಯಾಗ್ರಹವು ಭಾರತದ ಯುವಜನರಿಗೆ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕನ್ನು ನೀಡಿತು.

ಬ್ರಿಟಿಷ್ ಆರ್ಥಿಕ ನೀತಿ: ಬಿಹಾರದ ವಾಯುವ್ಯ ಪ್ರದೇಶದಲ್ಲಿರುವ ಚಂಪಾರಣ್ಯ ಜಿಲ್ಲೆಯಲ್ಲಿ ರೈತರು ಭೂ-ಮಾಲೀಕರು ನೀಡಿದ ಭೂಮಿಯಲ್ಲಿ ಇಂಡಿಗೋ ಬೆಳೆಯಬೇಕಾಗಿತ್ತು. ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಜಾರಿಗೊಳಿಸಿದ ಈ ಆರ್ಥಿಕ ನೀತಿಯಿಂದ ಇಲ್ಲಿನ ರೈತರು ಬೇಸತ್ತು ಹೋಗಿದ್ದರು. ತೀನ್ ಕಥಿಯಾ ವ್ಯವಸ್ಥೆ ಎಂದೂ ಕರೆಯಲಾಗುತ್ತಿದ್ದ ಆರ್ಥಿಕ ನೀತಿ ಪೂರ್ವ ಭಾರತದ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಹೆಚ್ಚಾಗಿ ಆಚರಣೆಯಲ್ಲಿತ್ತು. ಬಿತ್ತನೆಗೆ ಬೇಕಾದ ಭೂಮಿಯನ್ನು ಸಹ ಭೂ ಜಮಾದಾರರೇ ನಿರ್ಧರಿಸುತ್ತಿದ್ದರು. ಭೂಮಿಯ ಯಾವ ಭಾಗದಲ್ಲಿ ಇಂಡಿಗೋ ಬಿತ್ತನೆ ಮಾಡಬೇಕು ಎಂದು ನಿರ್ಧರಿಸುವುದು ರೈತರ ಕೈಯಲ್ಲಿಯೂ ಇರಲಿಲ್ಲ. ಬೆಳೆದ ಬೆಳೆಯಿಂದ ರೈತರಿಗೆ ಯಾವುದೇ ಲಾಭ ಬರುತ್ತಿರಲಿಲ್ಲ. ಮಸಾಲೆಗೆ ಯೋಗ್ಯವಾಗಿದ್ದ ಇಂಡಿಗೋ ಬೆಳೆಗೆ ಒತ್ತಡ ಹೆಚ್ಚಾಗತೊಡಗಿತ್ತು. ರೈತರಲ್ಲಿ ಖಂಡಿಸುವ ಶಕ್ತಿ ಇರಲಿಲ್ಲ. ಈ ವೇಳೆ ರೈತ ನಾಯಕ ರಾಜ್‌ಕುಮಾರ್ ಶುಕ್ಲಾ ಅವರ ಕೋರಿಕೆ ಮೇರೆಗೆ, 15 ಏಪ್ರಿಲ್ 1917 ರಂದು ಚಂಪಾರಣ್ಯ ಆಗಮಿಸಿದ ಮಹಾತ್ಮ ಗಾಂಧೀಜಿ ಅವರು ಸತ್ಯಾಗ್ರಹಕ್ಕೆ ಧುಮುಕುವ ಮೂಲಕ ಇದನ್ನು ಪ್ರಶ್ನಿಸಿದ್ದರು. ಇಂಡಿಗೋ ಕೃಷಿಯಿಂದ ಬೇಸತ್ತಿದ್ದ ರೈತರನ್ನು ಈ ಸಂಕಷ್ಟದಿಂದ ಹೊರತಂದ ಗಾಂಧೀಜಿ ಅವರು ದೇಶದ ಹೋರಾಟಕ್ಕೆ ಹೊಸ ತಿರುವು ನೀಡಿರುವುದು ಇತಿಹಾಸದಿಂದ ತಿಳಿದು ಬರುತ್ತದೆ.

"ಪ್ರಾಯೋಗಿಕವಾಗಿ ಆರಂಭಿಸಿದ ಗಾಂಧೀಜಿ ಅವರ ಅಹಿಂಸಾ ಚಳವಳಿ ಮತ್ತು ಸತ್ಯಾಗ್ರಹ ಮಾರ್ಗಗಳು ಮುಂದೆ ಇವೇ ದೇಶ ಕಟ್ಟುವಲ್ಲಿ ದಾರಿದೀಪವಾದವು. ಗಾಂಧೀಜಿಯವರು ಭಾರತದ ಚಂಪಾರಣ್ಯ ನೆಲದಲ್ಲಿ ಮೊದಲು ಬಾರಿ ಸತ್ಯಾಗ್ರಹ ಮತ್ತು ಅಹಿಂಸೆಯ ಅಸ್ತ್ರಗಳನ್ನು ಉಪಯೋಗಿಸುವ ಮೂಲಕ ದೇಶಕ್ಕೆ ಮಾದರಿಯಾದರು. ರೈತರ ಈ ಆಂದೋಲನವನ್ನು ಸತ್ಯಾಗ್ರಹದ ಮೊದಲ ಯಶಸ್ವಿ ಪ್ರಯೋಗವೆಂದೇ ಪರಿಗಣಿಸಲಾಗುತ್ತದೆ. ಈ ಆಂದೋಲನದ ಅಡಿಯಲ್ಲಿ, ಮಹಾತ್ಮಾ ಗಾಂಧಿಯವರು ಸತ್ಯಾಗ್ರಹದ ಮೂಲಕ ರೈತರ ಶೋಷಣೆಯನ್ನು ನಿಲ್ಲಿಸಿದರು. - ಅನಿರುದ್ಧ್ ಚೌರಾಸಿಯಾ, ಗಾಂಧಿವಾದಿ.