ವಿದ್ಯುತ್ ತಂತಿ ತುಂಡಾಗಿ ಬಿದ್ದು ಒಂದೂವರೆ ಎಕರೆ ಕಬ್ಬು ಬೆಳೆ ಭಸ್ಮ.. ಪರಿಹಾರಕ್ಕಾಗಿ ಅಂಗಲಾಚಿದ ರೈತ
ಮೈಸೂರು: ವಿದ್ಯುತ್ ತಂತಿ ತುಂಡಾಗಿ ಬಿದ್ದು, ಕಬ್ಬು ಬೆಳೆ ಸುಟ್ಟು ಭಸ್ಮವಾಗಿರುವ ಘಟನೆ ನಂಜನಗೂಡು ತಾಲೂಕಿನ ಮಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜವರಯ್ಯ ಎಂಬುವವರು ತಮ್ಮ ಮೂರು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯನ್ನು ಬೆಳೆದಿದ್ದರು. ಕಬ್ಬು ಕಟಾವಿಗೆ ಬಂದಿತ್ತು. ಕಳೆದ ಮೂರು ದಿನಗಳಿಂದ ಕಬ್ಬು ಕಟಾವು ಮಾಡಲಾಗುತ್ತಿದೆ. ಒಂದೂವರೆ ಎಕರೆಯಷ್ಟು ಕಟಾವಿಗೆ ಬಾಕಿ ಉಳಿದಿತ್ತು.
ವಿದ್ಯುತ್ ತಂತಿ ಕಟ್ಟಾಗುವ ರೀತಿ ಇರುವುದನ್ನು ಗಮನಿಸಿದ ರೈತ ಚೆಸ್ಕಾಂಗೆ ದೂರು ನೀಡಿದ್ದರು. ಆದರೆ ಬಾಕಿ ಇದ್ದ ಒಂದೂವರೆ ಎಕರೆ ಕಟಾವು ಮಾಡುವಷ್ಟರಲ್ಲಿ ಜಮೀನಿನ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಕಟ್ಟಾಗಿ ಬಿದ್ದ ಪರಿಣಾಮ ಕಬ್ಬು ಬೆಳೆಗೆ ಬೆಂಕಿ ಹತ್ತಿಕೊಂಡಿದೆ. ಬೆಂಕಿ ನಾಲಿಗೆಗೆ ಸಂಪೂರ್ಣವಾಗಿ ಕಬ್ಬು ಬೆಳೆ ಸುಟ್ಟು ಕರಕಲಾಗಿದೆ. "ವಿದ್ಯುತ್ ತಂತಿಯನ್ನು ಸರಿಪಡಿಸುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷವೇ ಈ ಅವಘಡಕ್ಕೆ ಪ್ರಮುಖ ಕಾರಣ. ಸುಮಾರು 2 ಲಕ್ಷಕ್ಕೂ ಹೆಚ್ಚು ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು" ಎಂದು ರೈತ ಜವರಯ್ಯ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ : ಜನಜೀವನ ಅಸ್ತವ್ಯಸ್ತ