ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರ ಜೊತೆ ಪೈಪ್ ಮೂಲಕ ಮಾತನಾಡಿದ ಕುಟುಂಬಸ್ಥರು - ವಿಡಿಯೋ
ಉತ್ತರಕಾಶಿ(ಉತ್ತರಾಖಂಡ): ಉತ್ತರಕಾಶಿಯ ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಅವರಿಗೆ ನೈತಿಕ ಸ್ಥೈರ್ಯ ತುಂಬಲು ಕುಟುಂಬಸ್ಥರ ಜೊತೆ ಮಾತನಾಡಿಸಿದ್ದಾರೆ. ಕಾರ್ಮಿಕರು ಸಿಲುಕಿರುವ ಸುರಂಗದ ಭಾಗಕ್ಕೆ ದೊಡ್ಡ ಪೈಪ್ ಅಳವಡಿಸಲಾಗಿದ್ದು, ಅದರ ಮೂಲಕವೇ ಆಹಾರ, ನೀರು, ಔಷಧಗಳನ್ನು ಪೂರೈಕೆ ಮಾಡಲಾಗುತ್ತಿದೆ.
ಕಳೆದ ರಾತ್ರಿ ಕಾರ್ಮಿಕರಿಗೆ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುವುದರ ಜೊತೆಗೆ, ಎಂಡೋಸ್ಕೋಪಿಕ್ ಫ್ಲೆಕ್ಸಿ ಕ್ಯಾಮರಾವನ್ನು ಸುರಂಗದೊಳಗೆ ಕಳುಹಿಸಲಾಗಿತ್ತು. ಕ್ಯಾಮರಾವು ಅಲ್ಲಿದ್ದ ಕಾರ್ಮಿಕರನ್ನು ಸೆರೆಹಿಡಿದಿದೆ. ಇದರ ದೃಶ್ಯಾವಳಿಗಳು ಕೂಡ ಲಭ್ಯವಾಗಿದೆ. ಇದರ ಬೆನ್ನಲ್ಲೇ, ಕಾರ್ಮಿಕರಿಗೆ ಸ್ಥೈರ್ಯ ತುಂಬಲು ಅಧಿಕಾರಿಗಳು ಅವರ ಕುಟುಂಬ ಸದಸ್ಯರ ಜೊತೆಗೆ ಮಾತನಾಡಿಸಿದ್ದಾರೆ.
ಪೈಪ್ ಮೂಲಕ ಜೋರಾಗಿ ಮಾತನಾಡಿದ್ದು, ಹೊರಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನಿಮ್ಮನ್ನು ಬೇಗನೇ ಹೊರಗೆ ತರಲಾಗುವುದು ಹೆದರಬೇಡಿ ಎಂದು ಕುಟುಂಬಸ್ಥರು ಹೇಳಿದ್ದಾರೆ. ಇದಕ್ಕೆ ಕಾರ್ಮಿಕರು ಕೂಡ ಸ್ಪಂದಿಸಿದ್ದು ವಿಡಿಯೋದಲ್ಲಿ ಕೇಳಬಹುದು.
ನವೆಂಬರ್ 12ರ ಭಾನುವಾರ ಮುಂಜಾನೆ ಉತ್ತರಾಖಂಡದ ಬ್ರಹ್ಮಖಾಲ್ ಮತ್ತು ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಿಲ್ಕ್ಯಾರಾ ಮತ್ತು ದಾಂಡಲ್‌ಗಾಂವ್ ನಡುವೆ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಭಾಗ 21 ಮೀಟರ್ನಷ್ಟು ಕುಸಿತವಾಗಿತ್ತು. ಸುರಂಗ ಮಾರ್ಗದ ದುರಸ್ತಿಗೆ ವಿವಿಧೆಡೆಯಿಂದ 40 ಮಂದಿ ಕಾರ್ಮಿಕರು ತೆರಳಿದ್ದರು. ಈ ವೇಳೆ, ಸುರಂಗದ ಮತ್ತೊಂದು ಭಾಗ ಕುಸಿದಿತ್ತು. ಕಾರ್ಮಿಕರು ಅದರೊಳಗೆ ಸಿಲುಕಿದ್ದರು.
ಇದನ್ನೂ ಓದಿ: 10 ದಿನದಿಂದ ಉತ್ತರಕಾಶಿ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ಮೊದಲ ದೃಶ್ಯ