50 ಕೆಜಿ ತೂಕದ ಮೂಟೆ ಹೊತ್ತು 5 ಕಿ.ಮೀ ದೀರ್ಘದಂಡ ನಮಸ್ಕಾರ.. ದೇವರಿಗೆ ಹರಕೆ ತೀರಿಸಿದ ಭೂಪ: ವಿಡಿಯೋ
ಚಿಕ್ಕೋಡಿ(ಬೆಳಗಾವಿ): ಆಸ್ತಿಕರು ದೇವರ ಆಶೀರ್ವಾದ ಪಡೆಯಬೇಕು ಎಂದು ಹಲವು ರೀತಿಯಲ್ಲಿ ತಮ್ಮ ಭಕ್ತಿಯನ್ನು ದೇವರಿಗೆ ಸಮರ್ಪಿಸುತ್ತಿರುತ್ತಾರೆ. ಯುವಕನೋರ್ವ ತನ್ನ ಬೆನ್ನ ಮೇಲೆ 50 ಕೆಜಿ ತೂಕದ ಅಕ್ಕಿ ಮೂಟೆ ಹೊತ್ತು ಐದು ಕಿ.ಮೀ ದೀರ್ಘದಂಡ ನಮಸ್ಕಾರದ ಮೂಲಕ ದೇವರ ಮೇಲಿನ ತನ್ನ ಭಕ್ತಿಯನ್ನು ಪ್ರದರ್ಶಿಸಿದ್ದಾನೆ. ಜಿಲ್ಲೆಯ ರಾಯಭಾಗ ತಾಲೂಕಿನ ಹಾರೊಗೇರಿ ಕುರಬಗೋಡೆ ಹಾಡಕರ್ ತೋಟದ ಕರೆಪ್ಪ ಕೃಷ್ಣಪ್ಪಾ ಸುಣದೋಳಿ ಎಂಬ ಯುವಕ 50 ಕೆಜಿ ಅಕ್ಕಿ ಮೂಟೆಯನ್ನು ಬೆನ್ನ ಮೇಲೆ ಹೊತ್ತು ಹಾರೂಗೇರಿ ಪಟ್ಟಣದ ಸುಕ್ಷೇತ್ರ ಕರಿಸಿದ್ದೇಶ್ವರ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಮಾಡುವ ಮೂಲಕ ತನ್ನ ಹರಕೆಯನ್ನು ತೀರಿಸಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದೇ ವೇಳೆ ಯುವಕ ಕರೆಪ್ಪ ಈಟಿವಿ ಭಾರತ ಜೊತೆ ದೂರವಾಣಿ ಮೂಲಕ ಮಾತನಾಡಿ, ಕೆಲವರು ಭಕ್ತಿಯ ರೂಪದಲ್ಲಿ ವಿವಿಧ ರೀತಿಯಲ್ಲಿ ತಮ್ಮ ಸೇವೆಯನ್ನು ದೇವರಿಗೆ ಅರ್ಪಣೆ ಮಾಡುತ್ತಾರೆ. ನನಗೂ ಚಿಕ್ಕ ವಯಸ್ಸಿನಲ್ಲೇ ದೇವರಿಗೆ ವಿಶೇಷವಾಗಿ ನನ್ನ ಭಕ್ತಿಯನ್ನು ಅರ್ಪಣೆ ಮಾಡಬೇಕೆಂದು ಆಸೆ ಇತ್ತು. ಸದ್ಯ 50 ಕೆಜಿ ಅಕ್ಕಿ ಮೂಟೆಯನ್ನು ಬೆನ್ನ ಮೇಲೆ ಹೊತ್ತು ದೀರ್ಘದಂಡ ನಮಸ್ಕಾರ ಸಲ್ಲಿಸಿದ್ದೇನೆ. ಇದರಲ್ಲಿ ಏನೂ ವಿಶೇಷವಿಲ್ಲ, ನಾನು ದೇವರಿಗೆ ಇನ್ನೂ ಬೇರೆ ರೀತಿಯಲ್ಲಿ ನನ್ನ ಭಕ್ತಿಯನ್ನು ಅರ್ಪಣೆ ಮಾಡಬೇಕೆಂಬ ಹುಮ್ಮಸ್ಸು ತುಂಬಿದೆ. ದೇವರು ಇದೇ ರೀತಿಯಲ್ಲಿ ಆರೋಗ್ಯ ಭಾಗ್ಯವನ್ನು ಕರುಣಿಸಿದರೆ ನನ್ನ ಭಕ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ದಾನೆ.
ಇದನ್ನೂ ಓದಿ: ಮಂಡ್ಯದ ಬೆಲ್ಲದಲ್ಲೂ ಅರಳಿದ ಗೌರಿ ಗಣೇಶ.. ಜನರಿಂದ ಭಾರಿ ಬೇಡಿಕೆ