ಕೂದಲು ಉದುರುವಿಕೆ ತಡೆ, ಲೈಂಗಿಕ ಶಕ್ತಿ ಹೆಚ್ಚಳ ಸೇರಿ ಮೀನಿನ ಎಣ್ಣೆಯಿಂದ ಹಲವು ಪ್ರಯೋಜನ

author img

By

Published : Jan 5, 2022, 10:57 PM IST

Consumption of fish oil or cod liver oil can be beneficial for health in many ways

ಮೀನಿನ ಎಣ್ಣೆ ಅಥವಾ ಕಾಡ್ ಲಿವರ್ ಎಣ್ಣೆಯ ಸೇವನೆಯು ಆರೋಗ್ಯಕ್ಕೆ ಅನೇಕ ವಿಧಗಳಲ್ಲಿ ಪ್ರಯೋಜನಕಾರಿ. ಅನೇಕ ಪೌಷ್ಟಿಕಾಂಶ ಹಾಗೂ ಚಿಕಿತ್ಸಕ ಗುಣಗಳು ಈ ಎಣ್ಣೆಯಲ್ಲಿದ್ದು ಕೂದಲು ಉದುರುವಿಕೆ ತಡೆಯುವುದು ಮತ್ತು ತ್ವಚೆಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದರ ಇನ್ನೂ ಕೆಲವು ಪ್ರಯೋಜನಗಳ ಮಾಹಿತಿ ಇಲ್ಲಿದೆ.

ಉತ್ತಮ ಆರೋಗ್ಯ ಹಾಗೂ ಚರ್ಮದ ರಕ್ಷಣೆಗಾಗಿ ಮೀನಿನ ಎಣ್ಣೆಯನ್ನು ಬಳಸುತ್ತಾರೆ. ಈ ಎಣ್ಣೆ ಆರೋಗ್ಯವೃದ್ಧಿಗೂ ಸಹಾಯ ಮಾಡುತ್ತದೆ.

ಮೀನಿನ ಎಣ್ಣೆ ಒಮೆಗಾ-3 ಕೊಬ್ಬಿನಾಮ್ಲವನ್ನು ಒಳಗೊಂಡಿರುತ್ತದೆ. ಟ್ರೈಗ್ಲಿಸರೈಡ್ ಅನ್ನು ಕರಗಿಸಲು ಇದು ಸಹಾಯ ಮಾಡುವುದು. ರಕ್ತದಲ್ಲಿನ ಕೊಬ್ಬು, ರಕ್ತ ಸಂಚಾರ, ಹೃದಯದ ಆರೋಗ್ಯ ಸೇರಿದಂತೆ ವಿವಿಧ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಲು ಕೂಡಾ ಸಹಕಾರಿ.

ಮೀನಿನ ಎಣ್ಣೆ ಅಥವಾ ಕಾಡ್ ಲಿವರ್ ಎಣ್ಣೆಯಿಂದ ಹಲವಾರು ಔಷಧೀಯ ಪ್ರಯೋಜನಗಳನ್ನು ಪಡೆಯಬಹುದು. ಅನೇಕ ರೋಗಗಳಿಂದ ರಕ್ಷಣೆ ಪಡೆಯಲು ಇದು ಸಹಕಾರಿಯೂ ಹೌದು. ಕಣ್ಣು, ಮೂಳೆ, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

ಇದರ ಪ್ರಯೋಜನಗಳನ್ನು ಪಡೆಯಲು ಸಾಮಾನ್ಯ ಮೀನಿನ ಎಣ್ಣೆಯನ್ನು ಸೇವಿಸುವ ಅಗತ್ಯವಿಲ್ಲ. ಇದು ಸಪ್ಲಿಮೆಂಟ್ಸ್ ಅಥವಾ ಕ್ಯಾಪ್ಸುಲ್‌ಗಳ ರೂಪದಲ್ಲಿಯೂ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದೆ.

ಮೀನಿನ ಎಣ್ಣೆಯಲ್ಲಿ ಕಂಡುಬರುವ ಪೋಷಕಾಂಶಗಳು:

ಮುಂಬೈ ಮೂಲದ ಪೌಷ್ಟಿಕ ತಜ್ಞ ಡಾ. ದಿಲ್ಶನ್ ಬಾಬಾ ಅವರು ಮೀನಿನ ಎಣ್ಣೆ ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಎ ಮತ್ತು ಡಿಗಳ ಪ್ರಮುಖ ಮೂಲಗಳಲ್ಲಿ ಒಂದಾಗಿದೆ ಎಂದು ವಿವರಿಸುತ್ತಾರೆ. ಈ ಎಣ್ಣೆಯು ಒಮೆಗಾ-3 ಕೊಬ್ಬಿನಾಮ್ಲಗಳ ಜೊತೆಗೆ ಐಕೋಸಾಪೆಂಟೆನೊಯಿಕ್ ಆಮ್ಲ (ಇಪಿಎ) ಮತ್ತು ಡೊಕೊಸಾಹೆಕ್ಸೆನೊಯಿಕ್ ಆಮ್ಲ (ಡಿಎಚ್‌ಎ) ಹೊಂದಿರುತ್ತದೆ. ಮೀನಿನಿಂದ ಸಿಗುವ ಒಮೆಗಾ-3 ಕೊಬ್ಬಿನಾಮ್ಲಗಳು ಸಸ್ಯಗಳಿಂದ ಪಡೆಯುವುದಕ್ಕಿಂತ ಹೆಚ್ಚು ಉತ್ತಮವೆಂದು ಹೇಳಿದ್ದಾರೆ.

ಸಸ್ಯಗಳಲ್ಲಿನ ಒಮೆಗಾ -3 ಮುಖ್ಯವಾಗಿ ಆಲ್ಫಾ-ಲಿನೋಲೆನಿಕ್ ಆಮ್ಲದ (ಎಎಲ್‌ಎ) ರೂಪದಲ್ಲಿ ಕಂಡುಬರುತ್ತದೆ. ಇದು ಕೂಡ ಬಹಳ ಮುಖ್ಯವಾಗಿದ್ದರೂ ಇದಕ್ಕಿಂತ ಐಕೋಸಾಪೆಂಟೆನೊಯಿಕ್ ಆಮ್ಲ ಮತ್ತು ಡೊಕೊಸಾಹೆಕ್ಸೆನೊಯಿಕ್ ಹೆಚ್ಚು ಪರಿಣಾಮಕಾರಿ. ಇದಲ್ಲದೆ, ಮೀನಿನ ಎಣ್ಣೆಯಲ್ಲಿ ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ. ಇದು ಚರ್ಮವನ್ನು ರಕ್ಷಿಸುತ್ತದೆ ಹಾಗೂ ರಕ್ತ ಪರಿಚಲನೆಯನ್ನು ಸರಿಯಾಗಿ ಮಾಡುತ್ತದೆ.

ಈ ಎಣ್ಣೆಯಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲಗಳು ಹೃದಯದ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದು ಟ್ರೈಗ್ಲಿಸರೈಡ್ ಅಂದರೆ ಲಿಪಿಡ್ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡುತ್ತದೆ, ಅಷ್ಟೇ ಅಲ್ಲ, ಹಾನಿಕಾರಕ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (ಎಲ್‌ಡಿಎಲ್‌) ಕಡಿಮೆ ಮಾಡುವ ಮೂಲಕ ಉತ್ತಮ ಕೊಲೆಸ್ಟ್ರಾಲ್, ಅಂದರೆ ಹೈ-ಡೆನ್ಸಿಟಿ ಲಿಪೊಪ್ರೋಟೀನ್ (ಹೆಚ್‌ಡಿಎಲ್‌) ಮಟ್ಟವನ್ನು ಹೆಚ್ಚಿಸುತ್ತದೆ.

ಒಮೆಗಾ -3 ದೇಹದಲ್ಲಿ ರಕ್ತ ಪರಿಚಲನೆಯನ್ನು ನಿಯಂತ್ರಿಸುತ್ತದೆ. ಅಪಧಮನಿಕಾಠಿಣ್ಯದ ರಚನೆಯನ್ನು ಕಡಿಮೆ ಮಾಡುತ್ತದೆ. ಇದು ಅಂತಿಮವಾಗಿ ಹೃದಯಾಘಾತ ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆ ಮಾಡಬಲ್ಲದು.

ಮೀನಿನ ಎಣ್ಣೆಯ ಸೇವನೆಯು ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಉಪಕಾರಿ. ಇದು ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುವ ಜೊತೆಗೆ ಆಸ್ಟಿಯೊಪೊರೋಸಿಸ್ ಸಮಸ್ಯೆಯನ್ನು ನಿಭಾಯಿಸಲು ಸಹಾಯಕ. ಇದಲ್ಲದೆ, ಒಮೆಗಾ -3 ಕೊಬ್ಬಿನಾಮ್ಲಗಳು ಮೂಳೆಗಳು ಮತ್ತು ಅವುಗಳ ಸುತ್ತಲಿನ ಅಂಗಾಂಶಗಳಲ್ಲಿ ಇರುವ ಖನಿಜಗಳ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ ಹಾಗೂ ಸಂಧಿವಾತದ ಸಮಸ್ಯೆಯನ್ನು ಸಹ ನಿವಾರಿಸುತ್ತದೆ.

ಒತ್ತಡ, ಖಿನ್ನತೆ ಕಡಿಮೆ ಮಾಡಲು ಉಪಕಾರಿ:

ಆರ್ಕೈವ್ಸ್ ಆಫ್ ಜನರಲ್ ಸೈಕಿಯಾಟ್ರಿಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಕಾಡ್ ಲಿವರ್ ಎಣ್ಣೆಯಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಸೈಕೋಸಿಸ್ ಮತ್ತು ಸ್ಕಿಜೋಫ್ರೇನಿಯಾದಂತಹ ಮಾನಸಿಕ ಕಾಯಿಲೆಗಳಿಂದ ರಕ್ಷಿಸುತ್ತದೆ. ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಹಾಗೂ ಇತರ ಮಾನಸಿಕ ಅಸ್ವಸ್ಥತೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಮೀನಿನ ಎಣ್ಣೆಯು ಜ್ಞಾಪಕಶಕ್ತಿಯನ್ನು ಹೆಚ್ಚಿಸುವಲ್ಲೂ ಉತ್ತಮವಾಗಿದೆ.

ಮೀನಿನ ಎಣ್ಣೆಯ ಪೂರಕಗಳನ್ನು ಮಧುಮೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುವ ಮೂಲಕ ಟೈಪ್ -2 ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಇದು ಪರಿಹಾರ ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಮತ್ತು ದೇಹದಲ್ಲಿ ಸ್ವಯಂ ನಿರೋಧಕ ಅಸ್ವಸ್ಥತೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಆಟೋಇಮ್ಯೂನ್ ಡಿಸಾರ್ಡರ್ ಎನ್ನುವುದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಆರೋಗ್ಯಕರ ಕೋಶಗಳನ್ನು ನಾಶಮಾಡಲು ಪ್ರಾರಂಭಿಸುವ ಸ್ಥಿತಿಯಾಗಿದೆ.

ಪುರುಷರಲ್ಲಿ ವೀರ್ಯಾಣು ಸುಧಾರಣೆ:

ಮೀನಿನ ಎಣ್ಣೆಯ ಸೇವನೆಯು ಕಣ್ಣಿನ ಆರೋಗ್ಯಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಕಣ್ಣಿನ ಅಸ್ವಸ್ಥತೆಗಳು ಮತ್ತು ದೃಷ್ಟಿ ದೋಷಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಅದೇ ವಿಷಯದಲ್ಲಿ ಹಿಂದಿನ ಸಂಶೋಧನೆಯು ಮೀನಿನ ಎಣ್ಣೆಯು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ (AMD) ನಲ್ಲಿ ಪರಿಹಾರ ನೀಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇದಲ್ಲದೆ, ಒಮೆಗಾ -3 ಮತ್ತು ವಿಟಮಿನ್ ಡಿ ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಅಗತ್ಯ ಎಂದು ವಿವರಿಸಿದ್ದಾರೆ.

ಒಮೆಗಾ-3 ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳು ವೀರ್ಯ ಕೋಶಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಇದು ಪುರುಷರಲ್ಲಿ ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಗರ್ಭಾವಸ್ಥೆಯಲ್ಲಿ ಇದರ ಸೇವನೆಯು ತಾಯಿ ಮತ್ತು ಭ್ರೂಣ ಇಬ್ಬರಿಗೂ ಪ್ರಯೋಜನಕಾರಿ. ಅಲ್ಲದೆ, ಇದರಲ್ಲಿರುವ ಡೊಕೊಸಾಹೆಕ್ಸೆನೊಯಿಕ್ ಆಮ್ಲವು ಗರ್ಭಾಶಯದಲ್ಲಿನ ಭ್ರೂಣದ ಒಟ್ಟಾರೆ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರಿಂದಾಗಿ ಅಕಾಲಿಕ ಹೆರಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಮೀನಿನ ಎಣ್ಣೆಯ ಪೂರಕಗಳು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಲು, ತೂಕವನ್ನು ಕಡಿಮೆ ಮಾಡಲು, ಮೂತ್ರಪಿಂಡದ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ನೆನಪಿಡಿ!

ಇದನ್ನು ಅನಗತ್ಯವಾಗಿ ಅಥವಾ ವೈದ್ಯರ ಸಲಹೆಯಿಲ್ಲದೆ ಸೇವಿಸಬಾರದು. ಏಕೆಂದರೆ ಅದು ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ ಎಂಬುದನ್ನು ಜನರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಡಾ.ದಿಲ್ಶನ್ ಬಾಬಾ ಹೇಳುತ್ತಾರೆ. ಆದ್ದರಿಂದ, ಮೀನಿನ ಎಣ್ಣೆಗೆ ಸಂಬಂಧಿಸಿದ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: Health Tips: ಪ್ರತಿ ವಾರ 4 ವಿಧದ ತರಕಾರಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.