ಗುರುಮಠಕಲ್: ಅನುದಾನದ ಆಸೆಗೆ ಶಾಲೆಯ ಸುಸಜ್ಜಿತ ಅಡುಗೆ ಕೋಣೆ ನೆಲಸಮ ಆರೋಪ

author img

By

Published : Sep 19, 2021, 12:02 PM IST

demolished the government school

ಅನುದಾನದ ಆಸೆಗೆ ಪುಟಪಾಕ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಸಜ್ಜಿತ ಅಡುಗೆ ಕೋಣೆ ಕಟ್ಟಡವನ್ನು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಜೆಸಿಬಿಯಿಂದ ಧ್ವಂಸ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಗುರುಮಠಕಲ್(ಯಾದಗಿರಿ): ತಾಲೂಕಿನ ಪುಟಪಾಕ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಸಜ್ಜಿತ ಅಡುಗೆ ಕೋಣೆ ಕಟ್ಟಡವನ್ನು ಶಾಲೆಯ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಜೆಸಿಬಿಯಿಂದ ಧ್ವಂಸ ಮಾಡಿಸುವ ಮೂಲಕ ದರ್ಪ ಮೆರೆದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಲಾಖೆಯಿಂದ ನೂತನ ಅಡುಗೆ ಕೋಣೆ ಕಟ್ಟಲು ಅನುದಾನ ಮಂಜೂರಾಗಿದೆ. ಹಳೆ ಅಡುಗೆ ಕೋಣೆ ಕಟ್ಟಡವನ್ನು 2008-09 ನೇ ಸಾಲಿನಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಕಟ್ಟಡವನ್ನು ಕೆಡವಿ ತಾನು ನೂತನ ಕಟ್ಟಡ ನಿರ್ಮಾಣ ಮಾಡುವುದಾಗಿ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಕಿಶನ್ ರಾಠೋಡ ಇಲ್ಲಿನ ಮುಖ್ಯೋಪಾಧ್ಯಯರಾದ ಸುನಂದಾ ಅವರಿಗೆ ತಿಳಿಸಿದ್ದಾರೆ.

ಶಾಲೆಯ ಸುಸಜ್ಜಿತ ಅಡುಗೆ ಕೋಣೆ ಕಟ್ಟಡ ಕೆಡವಿದ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ

ಇದಕ್ಕೆ ಪ್ರತಿಕ್ರಿಯಿಸಿದ ಶಾಲೆ ಮುಖ್ಯೋಪಾಧ್ಯಯರಾದ ಸುನಂದಾ, ಈ ಕಟ್ಟಡ ಸುಸಜ್ಜಿತವಾಗಿದ್ದು, ನೆಲಸಮ ಮಾಡುವ ಹಂತಕ್ಕೆ ಬಂದಿಲ್ಲ. ಈ ಕುರಿತು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನೂತನ ಕಟ್ಟಡ ಕಟ್ಟಲು ಬರುವುದಿಲ್ಲ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ನೂತನ ಕಟ್ಟಡಕ್ಕೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.

ಆದರೆ, ಇದನ್ನು ಕೇಳದ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ, ಅನುದಾನ ಹಿಂದಕ್ಕೆ ಹೋಗುತ್ತದೆ ಎಂಬ ಉದ್ದೇಶದಿಂದ ಸುಸಜ್ಜಿತ ಕಟ್ಟಡವನ್ನು ಶನಿವಾರ ಶಾಲಾ ಅವಧಿಯ ನಂತರ ಜೆಸಿಬಿಯಿಂದ ನೆಲಸಮ ಮಾಡಿದ್ದಾರೆ.

ಕಿಶನ್ ರಾಠೋಡ ಎಸ್‌ಡಿಎಂಸಿ ಅಧ್ಯಕ್ಷ ಅವಧಿ ಏಪ್ರಿಲ್ -2020ಕ್ಕೆ ಮುಗಿದಿದ್ದು, ಪ್ರಸ್ತುತ ಕೋವಿಡ್ -19 ಹಿನ್ನೆಲೆ ಇನ್ನೂ ನೂತನ ಅಧ್ಯಕ್ಷರ ಆಯ್ಕೆಯಾಗಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ದೂರು ನೀಡುವುದಾಗಿ ಶಾಲೆಯ ಸುನಂದಾ ಹೇಳಿದ್ದಾರೆ.

ಉತ್ತಮ ಸ್ಥಿತಿಯಲ್ಲಿರುವ ಸರ್ಕಾರಿ ಕಟ್ಟಡವನ್ನು ಅಧಿಕಾರಿಗಳ ಮತ್ತು ಇಲ್ಲಿನ ಮುಖ್ಯಗುರುಗಳ ಗಮನಕ್ಕೆ ತಾರದೆ, ಮನಬಂದಂತೆ ನೆಲಕ್ಕುರುಳಿಸಿದ ಎಸ್‌ಡಿಎಂಸಿ ಮಾಜಿ ಅಧ್ಯಕ್ಷನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗರುಡ ಸಂಸ್ಥೆಯ ಉಪಾಧ್ಯಕ್ಷ ಸಂಜು ಅಳೆಗಾರ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಕಿಶನ್ ರಾಠೋಡ, ಸದ್ಯಕ್ಕೆ ನಾನೇ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಅನುದಾನ ಬಂದಿದೆ, ನಾನೇ ಮುಂದೆ ನಿಂತು ಕೆಲಸ ಮಾಡಿಸುತ್ತೇನೆ. ಕಟ್ಟಡ ಹಳೆಯದಾಗಿತ್ತು, ಹಾಗಾಗಿ ಕೆಡವಲಾಗಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.