ಗಡಿ‌ ಕನ್ನಡಿಗರ ಆಕ್ರೋಶಕ್ಕೆ ಮಣಿದು ತರಾತುರಿಯಲ್ಲಿ 'ಮಹಾ' ಸಚಿವರ ಭೇಟಿ!

author img

By

Published : Dec 5, 2022, 6:30 PM IST

Updated : Dec 5, 2022, 9:48 PM IST

ಮಹಾರಾಷ್ಟ್ರ ಉದ್ಯೋಗ ಸಚಿವ ಉದಯ ಸಾವಂತ

ಕನ್ನಡಿಗರೇ ಹೆಚ್ಚಾಗಿರುವ ಗಡಿ ಪ್ರದೇಶದ ಜತ್ ತಾಲೂಕಿನ ಸಂಖ, ತಿಕೊಂಡಿ ಗ್ರಾಮಗಳಿಗೆ ಮಹಾರಾಷ್ಟ್ರ ಸರ್ಕಾರದ ಉದ್ಯೋಗ ಸಚಿವ ಉದಯ ಸಾವಂತ ಇಂದು ಭೇಟಿ ನೀಡಿದ್ದಾರೆ.

ವಿಜಯಪುರ: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗಗಳಿಗೆ ಮಹಾರಾಷ್ಟ್ರ ಉದ್ಯೋಗ ಸಚಿವ ಉದಯ ಸಾವಂತ ಇಂದು ಭೇಟಿ ನೀಡಿದ್ದು, ಗಡಿನಾಡ‌ ಕನ್ನಡಿಗರ ಸಮಸ್ಯೆಗಳನ್ನು ಆಲಿಸಿದ್ದಾರೆ. ನಾಳೆ ಉದಯ ಸಾವಂತ‌ ಕರ್ನಾಟಕದ ಬೆಳಗಾವಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ಅವರಿಂದು ಮಹಾರಾಷ್ಟ್ರದಲ್ಲಿರುವ ಗಡಿಪ್ರದೇಶ ಜತ್ ತಾಲೂಕಿನ ಸಂಖ, ತಿಕೊಂಡಿ ಗ್ರಾಮಗಳಿಗೆ ಬಂದಿದ್ದಾರೆ.

ಇತ್ತೀಚೆಗೆ ಮಹಾರಾಷ್ಟ್ರ ಗಡಿ ಭಾಗದ 48 ಹಳ್ಳಿಗಳ ಕನ್ನಡಿಗರು ತಮಗೆ ಮಹಾರಾಷ್ಟ್ರದಿಂದ ಮೂಲಸೌಲಭ್ಯ ದೊರೆಯುತ್ತಿಲ್ಲ ಎಂದು ಆರೋಪಿಸಿ, ತಮ್ಮನ್ನು ಕರ್ನಾಟಕಕ್ಕೆ ಕಳುಹಿಸಿ ಎಂದು ಆಯಾ ಗ್ರಾಮ ಪಂಚಾಯಿತಿಯಲ್ಲಿ ಠರಾವು ಪಾಸ್ ಮಾಡಿದ್ದರು. ಇದರಿಂದ ಆಘಾತಕ್ಕೊಳಗಾಗಿದ್ದ ಮಹಾರಾಷ್ಟ್ರ ಸರ್ಕಾರ ಕನ್ನಡಿಗರ ಬೇಡಿಕೆಗೆ ಮನ್ನಣೆ ನೀಡಿ ಕಣ್ಣೊರೆಸುವಂತೆ ಸ್ವಲ್ಪ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿತ್ತು.

ಗಡಿ‌ ಕನ್ನಡಿಗರ ಆಕ್ರೋಶಕ್ಕೆ ಮಣಿದು ತರಾತುರಿಯಲ್ಲಿ 'ಮಹಾ' ಸಚಿವರ ಭೇಟಿ

ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ‌ ಗಡಿ ಕನ್ನಡಿಗರನ್ನು ಸಮಾಧಾನಪಡಿಸಲು ಉದ್ಯೋಗ ಸಚಿವ ಉದಯ ಸಾವಂತ ಗಡಿ ಗ್ರಾಮಗಳಿಗೆ ಭೇಟಿ ಕೊಟ್ಟಿದ್ದಾರೆ. ಸಚಿವರ ಸಮ್ಮುಖದಲ್ಲಿಯೇ ನಮ್ಮ ಬೇಡಿಕೆ ಈಡೇರದಿದ್ದರೆ ನಮಗೆ ಕರ್ನಾಟಕಕ್ಕೆ ಹೋಗಲು NOC ಕೊಡಿ ಎಂದು ಗಡಿ ಕನ್ನಡಿಗರು ಸಚಿವರೆದುರೇ ಆಕ್ರೋಶ ಹೊರಹಾಕಿದ್ದಾರೆ.

ಸಚಿವರಿಗೆ ಇರಿಸುಮುರಿಸು: ಕರ್ನಾಟಕದ ಮಾಜಿ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲರನ್ನು ಗಡಿ ಕನ್ನಡಿಗರು ಹಾಡಿ ಹೊಗಳಿದ್ದಾರೆ. ಇದರಿಂದ ಮಹಾ ಸರ್ಕಾರದ ಸಚಿವರಿಗೆ ಇರಿಸುಮುರಿಸು ಉಂಟಾಗಿದೆ. ಇದಕ್ಕೆ ಸ್ಪಂದಿಸಿ, ಶೀಘ್ರದಲ್ಲೇ ಗಡಿ ನಾಡು ಕನ್ನಡಿಗರ ಸಮಸ್ಯೆ ಬಗೆಹರಿಸುವುದಾಗಿ ಉದಯ ಸಾವಂತ ಭರವಸೆ ಕೊಟ್ಟರು.

ಗಡಿ ಕನ್ನಡಿಗರ ಸಮಸ್ಯೆ ಕುರಿತು ಕರ್ನಾಟಕದ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಹಾಗೂ ಗ್ರಾಮಸ್ಥರ ಬೆಂಬಲಕ್ಕೆ ಕರ್ನಾಟಕ ನಿಂತಿರುವುದನ್ನೂ ಗಮನಿಸಿ ಎಚ್ಚೆತ್ತ 'ಮಹಾ' ಸರ್ಕಾರ ಮೊದಲು ಸಾಂಗಲಿ ಜಿಲ್ಲಾಧಿಕಾರಿಗಳಿಂದ ಮನವೊಲಿಸುವ ಪ್ರಯತ್ನ ಮಾಡಿತ್ತು. ಜಿಲ್ಲಾಧಿಕಾರಿಗಳು ಈ ಮನವಿಗೆ ಮಣಿಯದೇ ಇದ್ದಾಗ ಖುದ್ದು ಅಲ್ಲಿನ ಸರ್ಕಾರದ ಸಚಿವರು ಇಂದು ಭೇಟಿ‌ ನೀಡಿದ್ದಾರೆ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರನ್ನು ಕರ್ನಾಟಕಕ್ಕೆ ಬರಲು ಬಿಡುವುದಿಲ್ಲ: ಸಚಿವ ಆರ್.ಅಶೋಕ್

Last Updated :Dec 5, 2022, 9:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.