ಲೋಕೋಪಯೋಗಿ ಇಲಾಖೆಯ ಜೆಇ, ಎಇ ನೇಮಕಾತಿಯಲ್ಲಿ ಅಕ್ರಮ: ಸಿಐಡಿ ಕಣ್ತಪ್ಪಿಸಿ ಓಡಾಡುತ್ತಿರುವ ಶಿಕ್ಷಕ

author img

By

Published : Sep 23, 2022, 10:30 PM IST

Public Works Department

ಲೋಕೋಪಯೋಗಿ ಇಲಾಖೆಯ ಅಭಿಯಂತರರ ನೇಮಕಾತಿ ಪರೀಕ್ಷೆಯ ಅಕ್ರಮ ನೇಮಕಾತಿಯಲ್ಲಿ ವಿಜಯಪುರ ಜಿಲ್ಲೆಯ ಶಿಕ್ಷಕರೊಬ್ಬರ ಕೈವಾಡವಿರುವುದು ತಡವಾಗಿ ಬೆಳಕಿಗೆ ಬಂದಿದೆ.

ವಿಜಯಪುರ: ಪಿಎಸ್​ಐ, ಶಿಕ್ಷಕರ ಅಕ್ರಮ ನೇಮಕಾತಿ ಬೆನ್ನಲ್ಲೇ ಜಿಲ್ಲೆಗೆ ಪಿಡಬ್ಲ್ಯೂಡಿ ಇಂಜನಿಯರ್​ಗಳ ನೇಮಕಾತಿ ಕಳಂಕವೂ ತಟ್ಟಿದೆ. ಲೋಕೋಪಯೋಗಿ ಇಲಾಖೆಯ ಅಭಿಯಂತರರ ನೇಮಕಾತಿ ಪರೀಕ್ಷೆಯ ಅಕ್ರಮ ನೇಮಕಾತಿಯಲ್ಲಿ ಜಿಲ್ಲೆಯ ಶಿಕ್ಷಕರೊಬ್ಬರ ಕೈವಾಡವಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆ ಶಿಕ್ಷಕನನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೆ ಚಾಲಾಕಿ ಶಿಕ್ಷಕ ಮಾತ್ರ ಪೊಲೀಸರ ಹಾಗೂ ಸಿಐಡಿಯವರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದಾನೆ.

ಜಿಲ್ಲೆಯ ಸಿಂದಗಿ ತಾಲೂಕಿನ ಗುತ್ತರಗಿಯ ಸರ್ಕಾರಿ ಮಾದರಿ ಪ್ರಾಥಮಿ ಶಾಲೆ ಶಿಕ್ಷಕ ಗೊಲ್ಲಾಳಪ್ಪ ಅಮಾನತ್ತಾದ ಶಿಕ್ಷಕ. ಪ್ರಶ್ನೆ ಪತ್ರಿಕೆಯನ್ನು ಮೊಬೈಲ್​​ನಲ್ಲಿ ಫೋಟೋ ಹೊಡೆದುಕೊಂಡು, ಕೀ ಉತ್ತರ ಸಿದ್ಧ ಮಾಡಲು ನೆರವಾಗಿರುವ ಆರೋಪದ ಮೇಲೆ ಇವರ ವಿರುದ್ಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಅಮಾನತು ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.

ಗುತ್ತರಗಿ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರು, ಕೆ.ಪಿ.ಎಸ್.ಸಿ ಆಯೋಗದ ಪಿಡಬ್ಲೂಡಿ ಇಲಾಖೆಯ ಅಸಿಸ್ಟಂಟ್ ಇಂಜಿನಿಯರಿಂಗ್​ ಹುದ್ದೆಯ ಪರೀಕ್ಷೆಯಲ್ಲಿ, ಪರೀಕ್ಷಾ ಕೇಂದ್ರವಾದ ಕಲಬುರ್ಗಿಯ ಬಾಲಾಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆಯ ಸೋರಿಕೆಗೆ ಕಾರಣವಾಗಿದ್ದರು. ಹೀಗಾಗಿ ಇವರ ಮೇಲೆ ಮೋಸ, ವಂಚನೆಯ ಹಾಗೂ ಇದಕ್ಕೆ ಸಂಬಂಧಿಸಿದ ಪ್ರಕರಣಗಳು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಶಿಕ್ಷಕನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದು, ಆದರೆ ಶಿಕ್ಷಕ ಮಾತ್ರ ಚಳ್ಳೆ ಹಣ್ಣು ತಿನ್ನಿಸಿ ಓಡಾಡ್ತಿದ್ದಾನೆ.

ಶಿಕ್ಷಕನ ಹಿಂದೆ ಪ್ರಭಾವಿ ಕೈ : ಶಿಕ್ಷಕನ ಹಿಂದೆ ಪ್ರಭಾವಿಗಳ ಕೈಯಿದೆ ಎನ್ನಲಾಗಿದೆ. ಈ ಶಿಕ್ಷಕನ ಮೇಲೆ ಕೇವಲ ಲೋಕೋಪಯೋಗಿ ಇಲಾಖೆ ಅಲ್ಲದೇ, ವಿವಿಧ ಇಲಾಖೆಗಳಿಗೆ ನೇರವಾಗಿ ಅಥವಾ ಕೆಪಿಎಸ್​ಸಿ ಮೂಲಕ ನಡೆಯುವ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅಕ್ರಮವಾಗಿ ನೇಮಕ ಮಾಡಿದ ಆರೋಪವೂ ಇದೆ. ಅಲ್ಲದೆ 10ಕ್ಕೂ ಹೆಚ್ಚು ಪಿಎಸ್​ಐಗಳನ್ನು ಅಕ್ರಮವಾಗಿ ನೇಮಕ ಮಾಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇಷ್ಟಿದ್ದರೂ ಕೂಡಾ ಆತ ಪೊಲೀಸರ ಕಣ್ತಪ್ಪಿಸಿ ಓಡಾಡಿಕೊಂಡಿರುವುದರಿಂದ ಆತನ ಹಿಂದೆ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಮೂರ್ನಾಲ್ಕು ಬಾರಿ ಅರೆಸ್ಟ್ ಮಾಡಲು ಬಂದಾಗಲೊಮ್ಮೆ ಪೊಲೀಸರ ಕಣ್ಣು ತಪ್ಪಿಸಿ ಓಡಾಡಿಕೊಂಡಿದ್ದಾನೆ.

ಈ ಹಿಂದೇಯೂ ಡೀಲಿಂಗ್​ : 2021 ರ ಡಿಸೆಂಬರ 14 ರಂದು ನಡೆದಿದ್ದ ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ (ಜೆಇ) ಮತ್ತು ಸಹಾಯಕ ಇಂಜಿನಿಯರ್ (ಎಇ) ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆಸಿದ ಆರೋಪ ಈತನ ಮೇಲಿದೆ. ಈ ಪರೀಕ್ಷೆಗೆ ಬ್ಲೂಟೂತ್ ಬಳಸಿ ಅಕ್ರಮವೆಸಗಿರುವುದು ಬೆಳಕಿಗೆ ಬಂದಿದೆ. ಪಿಎಸ್‌ಐ, ಎಫ್‌ಡಿಎ ಪರೀಕ್ಷೆಯಲ್ಲಿಯೂ ಡೀಲ್ ಕುದುರಿಸಿ ಅಕ್ರಮ ನಡೆಸಿದ್ದರ ತನಿಖೆ ಚುರುಕುಗೊಂಡಿರುವ ಹೊತ್ತಿನಲ್ಲೇ ಬೆಳಕಿಗೆ ಬಂದ ಮತ್ತೊಂದು ಹಗರಣ ಇದಾಗಿದೆ.

ಕಿಂಗ್‌ಪಿನ್‌ ಲಿಂಕ್​ : ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಪರೀಕ್ಷೆ ಅಕ್ರಮದ ತನಿಖೆಯ ಸಿಐಡಿ ತಂಡಕ್ಕೆ ಪಿಡಬ್ಲ್ಯೂಡಿ ಇಲಾಖೆಯ ಜೆಇ, ಎಇ ಪರೀಕ್ಷೆ ಅಕ್ರಮದ ಬಗ್ಗೆಯೂ ಸ್ಫೋಟಕ ಅಂಶಗಳು ಗೊತ್ತಾಗಿವೆ. ಈಗ ತಪ್ಪಿಸಿಕೊಂಡಿರುವ ಗೋಲ್ಲಾಳಪ್ಪ ಅವರನ್ನು ವಶಕ್ಕೆ ಪಡೆದರೆ ಇನ್ನಷ್ಟು ಆರೋಪಿಗಳು ಹಾಗೂ ಪ್ರಭಾವಿಗಳ ಹೆಸರು ಬೆಳಕಿಗೆ ಬರುವ ಸಾಧ್ಯತೆಗಳಿವೆ. ಪಿಎಸ್‌ಐ ನೇಮಕ ಹಗರಣದ ಕಿಂಗ್‌ಪಿನ್‌ ಆಗಿರುವ ನೀರಾವರಿ ಇಲಾಖೆ ಎಇ ಮಂಜುನಾಥ ಮೇಳಕುಂದಿ ಮತ್ತು ಇನ್ನೊಬ್ಬ ಮಾಸ್ಟರ್ ಮೈಂಡ್ ಆರ್‌.ಡಿ. ಪಾಟೀಲ್ ಜೊತೆಗೆ ಸೇರಿಕೊಂಡು ಇಂಜಿನಿಯರ್ಸ್‌ ನೇಮಕ ಪರೀಕ್ಷೆಯಲ್ಲೂ ಕೈಚಳಕ ತೋರಿಸಿ ಕಳ್ಳಾಟ ನಡೆಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಶಿಕ್ಷಕನಾಗಿ ಅಕ್ರಮವೆಸಗಿರುವುದಕ್ಕೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೇ ಸಾಕ್ಷಿ ಎಂದಿವೆ ಸಿಐಡಿ ಮೂಲಗಳು. ಲೋಕೋಪಯೋಗಿ ಇಲಾಖೆಯ ಜ್ಯೂನಿಯರ್ ಇಂಜಿನಿಯರ್ ಹಾಗೂ ಅಸ್ಟಿಸೆಂಟ್ ಇಂಜಿನಿಯರ್ ಹುದ್ದೆಗಳೂ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದನ್ನು ವಿಚಾರಣೆ ವೇಳೆ ಸಿಐಡಿ ಪೊಲೀಸರು ಕಂಡು ಕೊಂಡಿದ್ದರು.‌ ಅಕ್ರಮ ಬಗ್ಗೆ ಈ ಹಿಂದೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿತ್ತು. ಪ್ರಮುಖ ಆರೋಪಿಯನ್ನು ಕರೆತಂದು ಈ ಆರೋಪಿಯನ್ನು ಬಂಧಿಸಿದರೆ ಇನ್ನಷ್ಟು ಅಕ್ರಮಗಳು ಹೊರಗೆ ಬರಲಿವೆ.

ಇದನ್ನೂ ಓದಿ : ಪಿಎಸ್​ಐ ನೇಮಕಾತಿ ಮರು ಪರೀಕ್ಷೆ ಆದೇಶ ಹಿಂಪಡೆಯಬೇಕೆಂದು ಒತ್ತಾಯ: ಅಭ್ಯರ್ಥಿಗಳಿಂದ ಅಹೋರಾತ್ರಿ‌ ಧರಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.