ಗುಮ್ಮಟನಗರಿ ವಿಜಯಪುರದಲ್ಲಿ ಬೃಹತ್ ಮರಗಳ ಮಾರಣಹೋಮ: ಪರಿಸರ ಪ್ರೇಮಿಗಳಲ್ಲಿ ಆತಂಕ..!
Updated on: Dec 6, 2022, 3:16 PM IST

ಗುಮ್ಮಟನಗರಿ ವಿಜಯಪುರದಲ್ಲಿ ಬೃಹತ್ ಮರಗಳ ಮಾರಣಹೋಮ: ಪರಿಸರ ಪ್ರೇಮಿಗಳಲ್ಲಿ ಆತಂಕ..!
Updated on: Dec 6, 2022, 3:16 PM IST
ಅರಣ್ಯ ಪ್ರದೇಶ ಕಾಣದ ವಿಜಯಪುರದಲ್ಲಿ ಮಹಾನಗರ ಪಾಲಿಕೆ, ಪಿಡಬ್ಲ್ಯುಡಿ ಇಲಾಖೆಯೂ ರಸ್ತೆ ವಿಸ್ತರಣೆ ನೆಪದಲ್ಲಿ 70ಕ್ಕೂ ಹೆಚ್ಚು ಬೃಹತ್ ಮರಗಳನ್ನು ನೆಲಕ್ಕುರುಳಿಸುತ್ತಿದೆ.
ವಿಜಯಪುರ: ಐತಿಹಾಸಿಕ ಗುಮ್ಮಟನಗರಿ,ಬರದ ನಾಡು ವಿಜಯಪುರದಲ್ಲಿ ಅಲ್ಪಸ್ವಲ್ಪವಿದ್ದ ಹಸೀರಿಕರಣಕ್ಕೂ ಈಗ ಕೊಡಲಿ ಪೆಟ್ಟು ಬೀಳುತ್ತಿದೆ. ರಸ್ತೆ ವಿಸ್ತರಣೆ ನೆಪದಲ್ಲಿ ನಗರದ ಸೌಂದರ್ಯ ಹೆಚ್ಚಿಸಲು, ಬಿಸಿಲಿನ ತಾಪ ತಗ್ಗಿಸಲು ರಸ್ತೆ ಬದಿ ನೆಟ್ಟಿದ್ದ ಬೃಹತ್ ಮರಗಳ ಮಾರಣ ಹೋಮ ನಡೆಯುತ್ತಿದೆ. ಪ್ರಸ್ತುತ ಬಹಳಷ್ಟು ಮರಗಳು ಬುಡ ಸಮೇತ ನೆಲಕ್ಕುರುಳುತ್ತಿರುವುದು ನಗರದ ಪರಿಸರ ಪ್ರೇಮಿಗಳಲ್ಲಿ ಆಕ್ರೋಶ, ಆತಂಕಕ್ಕೆ ಕಾರಣವಾಗಿದೆ.
ಹೌದು... ಮಹಿಳಾ ವಿಶ್ವವಿದ್ಯಾಲಯಕ್ಕೆ ಹೋಗುವ ಅಥಣಿ ರಸ್ತೆ ವಿಸ್ತರಣೆ ಮಾಡುವುದಕ್ಕಾಗಿ ಮಹಾನಗರ ಪಾಲಿಕೆ ಮರಗಳನ್ನು ಕಡಿಯುತ್ತಿದೆ. ಅರಣ್ಯ ಪ್ರದೇಶ ಕಾಣದ ಬಿಸಿಲುನಾಡು ಖ್ಯಾತಿಯ ವಿಜಯಪುರ ಮತ್ತೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರದ ಜತೆ ಚೆಲ್ಲಾಟವಾಡುತ್ತಿದೆಯೇ ? ಎಂಬ ಪ್ರಶ್ನೆ ನಗರವಾಸಿಗಳನ್ನು ಕಾಡುತ್ತಿದೆ.
ನೆಲಕ್ಕುರುಳಿದ 70ಕ್ಕೂ ಹೆಚ್ಚು ಮರ: ನಗರಾದ್ಯಂತ ಇರುವ ಮರಗಳನ್ನು ಮಹಾನಗರ ಪಾಲಿಕೆ, ಪಿಡಬ್ಲ್ಯುಡಿ ಇಲಾಖೆ ಸಹಯೋಗದಲ್ಲಿ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ 70ಕ್ಕೂ ಹೆಚ್ಚು ಬೃಹತ್ ಮರಗಳ ನೆಲಸಮ ಕಾರ್ಯಾಚರಣೆ ನಡೆಯುತ್ತಿದೆ. ನೈಸರ್ಗಿಕವಾಗಿ ಬೆಳೆದ ಮರಗಳನ್ನು ನಾಶಗೊಳಿಸುವ ಕೃತ್ಯವಂತೂ ಧಾರಾಳವಾಗಿ ಮುಂದುವರೆದಿದೆ. ನಗರದಾದ್ಯಂತ ಮರಗಳನ್ನು ಬೆಳೆಸುವ ಕಾರ್ಯ ಈಗಿನಿಂದಲೇ ಆಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಆಲಮಟ್ಟಿ ಜಲಾಶಯದಿಂದ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರ ಪ್ರಯತ್ನದ ಫಲ ಈಗಷ್ಟೇ ಜಿಲ್ಲೆ ನೀರಾವರಿ ಕಾಣುತ್ತಿದ್ದು, ಅಂರ್ತಜಲ ಮಟ್ಟ ಹೆಚ್ಚಾಗಿ ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ದೊರೆಯುತ್ತಿದೆ. ಹೀಗಿರುವಾಗ ಇದ್ದ ಮರಗಳನ್ನು ಕಡಿದು ಪರಿಸರ ನಾಶದ ಜತೆ ಮಳೆ ಪ್ರಮಾಣ ಕಡಿಮೆ ಮಾಡಲು ಆಡಳಿತ ವರ್ಗ ಹೊರಟಿದೆ ಎಂದು ಪರಿಸರ ಪ್ರೇಮಿಗಳು ಆರೋಪಿಸುತ್ತಿದ್ದಾರೆ.
ಒಂದು ಮರಕ್ಕೆ ಎರಡು ಮರ ಬೆಳೆಸಿ: ಪರಿಸರ ಸಂರಕ್ಷಣೆಗೆ ಮರಗಳನ್ನು ಬೆಳೆಸುವುದು ಇಂದು ಅನಿರ್ವಾಯವಾಗಿದೆ. ಒಂದು ಮರ ಕಡಿದರೆ, ಅದರ ಬದಲು ಎರಡು ಸಸಿಗಳನ್ನು ನೆಡಬೇಕು ಎನ್ನುವುದು ಸರ್ಕಾರದ ನಿಯಮಾವಳಿ ಇದೆ. ಆದರೆ, ಈ ನಿಯಮ ಮಾತ್ರ ಯಾರು ಪಾಲಿಸುತ್ತಿಲ್ಲ, ಮರ ಕಡಿಯುವ ಗುತ್ತಿಗೆ ಪಡೆದವರು ಮರ ಕಡಿದು ಹೋಗಿ ಬಿಡುತ್ತಾರೆ. ಆದರೆ, ಮರ ಬೆಳೆಸುವ ಕೆಲಸ ಯಾರು ಮಾಡುತ್ತಿಲ್ಲ ಎನ್ನುವ ಬೇಸರ ಪರಿಸರ ಪ್ರೇಮಿಗಳಲ್ಲಿದೆ. ಮರ ಕಡಿಯುವ ಗುತ್ತಿಗೆದಾರರಿಗೆ ಸಸಿ ನೀಡುವ ಮೂಲಕ ಮರ ಬೆಳೆಸಲು ಆದೇಶ ನೀಡಿ. ಅದನ್ನು ಬೆಳೆಸುವ ಹೊಣೆಗಾರಿಕೆಯನ್ನೂ ಅವರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಹೊಸ ತಂತ್ರ ಬಳಸಿ: ವಿಜಯಪುರ- ಝಳಕಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವೇಳೆ ಇದ್ದ ಮರವನ್ನು ಬುಡಸಮೇತ ಕಿತ್ತು ಸ್ಥಳಾಂತರ ಮಾಡಲಾಗುತ್ತದೆ. ಎಲ್ಲ ಮರಗಳು ಮತ್ತೆ ಬೆಳೆಯದಿದ್ದರೂ, ಸಾಕಷ್ಟು ಮರಗಳಿಗೆ ಮರುಜೀವ ದೊರೆತಿದೆ. ಇದೇ ಮಾದರಿ ಅನುಸರಿಸಿದರೆ ಪರಿಸರ ಉಳಿಸುವ ಮಹತ್ತರ ಕಾರ್ಯ ಸಾಕಾರ ಗೊಳ್ಳಬಹುದು ಎನ್ನುವುದು ಸಾರ್ವಜನಿಕರ ಆಕಾಂಕ್ಷೆಯಾಗಿದೆ.
ಇದನ್ನೂಓದಿ:ಕರ್ನಾಟಕ ಸೇರುವುದಾಗಿ ಘೋಷಿಸಿದ ಗಡಿಭಾಗದ ಜನರು.. ಹಲವು ಗ್ರಾಮಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ ನೋಟಿಸ್
