ವಿಜಯಪುರ: ಡೀಸೆಲ್ ಟ್ಯಾಂಕರ್ ಪಲ್ಟಿ, ಮುಗಿಬಿದ್ದ ಜನ

ವಿಜಯಪುರ: ಡೀಸೆಲ್ ಟ್ಯಾಂಕರ್ ಪಲ್ಟಿ, ಮುಗಿಬಿದ್ದ ಜನ
ವಿಜಯಪುರ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50 ಹೈಪರ್ ಮಾರ್ಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿದೆ.
ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ವಿಜಯಪುರ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50 ಹೈಪರ್ ಮಾರ್ಟ್ ಬಳಿ ಮಂಗಳವಾರ ಸಂಜೆ ಸಂಭವಿಸಿದೆ.
ಟ್ಯಾಂಕರ್ನಿಂದ ಸೋರುತ್ತಿದ್ದ ಡೀಸೆಲ್ ತುಂಬಿಕೊಳ್ಳಲು ಜನ ಮುಗಿಬಿದ್ದ ಕಾರಣ ಏನಾದರೂ ದೊಡ್ಡ ಅನಾಹುತ ಸಂಭವಿಸಬಾರದು ಎಂದು ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಉರುಳಿ ಬಿದ್ದ ಡೀಸೆಲ್ ಟ್ಯಾಂಕರ್ನಿಂದ ಸೋರುತ್ತಿದ್ದ ಡೀಸೆಲ್ ಪಡೆದುಕೊಳ್ಳಲು ಜನ ವಾಟರ್ ಬಾಟಲ್ ಹಾಗೂ ಇತರ ವಸ್ತುಗಳನ್ನು ತೆಗೆದುಕೊಂಡು ಬಂದು ಡೀಸೆಲ್ ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸ್ಥಳಕ್ಕೆ ಆಗಮಿಸಿದ ಗೋಲಗುಮ್ಮಟ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಜನರನ್ನು ಚದುರಿಸಿದ್ದಾರೆ. ಆಕಸ್ಮಿಕವಾಗಿ ಬೆಂಕಿ ಏನಾದರೂ ಹೊತ್ತಿಕೊಂಡಿದ್ದರೆ ದೊಡ್ಡ ದುರಂತವೇ ಸಂಭವಿಸಬಹುದಿತ್ತು. ಗೋಲಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
