ಶಾಲೆಯಿಂದ ಬಂದು ದನ ಕಾಯಲು ಹೋದ ಅಣ್ಣ ತಮ್ಮ.. ಕೃಷಿ ಹೊಂಡದಲ್ಲಿ ಮುಳುಗಿ ಸಾವು: ಪೋಷಕರ ಆಕ್ರಂದನ

ಶಾಲೆಯಿಂದ ಬಂದು ದನ ಕಾಯಲು ಹೋದ ಅಣ್ಣ ತಮ್ಮ.. ಕೃಷಿ ಹೊಂಡದಲ್ಲಿ ಮುಳುಗಿ ಸಾವು: ಪೋಷಕರ ಆಕ್ರಂದನ
ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಸಹೋದರರು ಮೃತಪಟ್ಟ ಘಟನೆ ಬಸವನಬಾಗೇವಾಡಿ ತಾಲೂಕಿನಲ್ಲಿ ನಡೆದಿದೆ.
ವಿಜಯಪುರ: ನೀರು ಕುಡಿಯಲು ಕೃಷಿ ಹೊಂಡಕ್ಕೆ ಇಳಿದಿದ್ದ ಇಬ್ಬರು ಸಹೋದರರು ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ.ಬಿ.ಗ್ರಾಮದ ಜಮೀನಿನಲ್ಲಿ ಶನಿವಾರ ಸಂಭವಿಸಿದೆ.
ರಾಯಪ್ಪ ಬಸವರಾಜ ಒಣಕಿಹಾಳ (12) ಹಾಗೂ ಮಹಾಲಿಂಗರಾಯ ಬಸವರಾಜ ಒಣಕಿಹಾಳ (7) ಮೃತ ಸಹೋದರರು. ಇಂದು ಶನಿವಾರ ಆಗಿರುವುದರಿಂದ ಹುಣಶ್ಯಾಳ ಪಿ.ಬಿ.ಗ್ರಾಮದ ಪ್ರಾಥಮಿಕ ಶಾಲೆಗೆ ಹೋಗಿ ಮಧ್ಯಾಹ್ನವೇ ಮನೆಗೆ ಆಗಮಿಸಿ ಜಾನುವಾರು ಕಾಯಲು ವ್ಯಕ್ತಿಯೊಬ್ಬರ ಜಮೀನಿಗೆ ಹೋಗಿದ್ದರು.
ಈ ವೇಳೆ ನೀರು ಕುಡಿಯಲು ಇಬ್ಬರೂ ಕೃಷಿ ಹೊಂಡಕ್ಕೆ ಇಳಿದಿದ್ದರು. ಆಗ ಕಾಲು ಜಾರಿ ಹೊಂಡದಲ್ಲಿ ಬಿದ್ದಿದ್ದರಿಂದ ಕೂಗಾಡಿದ್ದರು. ದಾರಿ ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದವರು ತಕ್ಷಣ ಬಂದು ಕಾಪಾಡಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
ಮೃತರ ತಂದೆಗೆ ಒಟ್ಟು ಮೂವರು ಗಂಡು ಮಕ್ಕಳಿದ್ದು, ಅವರಲ್ಲಿ ಈಗ ಇಬ್ಬರು ಸಾವನ್ನಪ್ಪಿದ್ದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
