ಉತ್ತರಕನ್ನಡದಲ್ಲಿ ವಿನೂತನ ಪ್ರಯೋಗ: ಡ್ರೋನ್ ಮೂಲಕ ಬೀಜ ಬಿತ್ತನೆ ಮಾಡಿದ ಅರಣ್ಯ ಇಲಾಖೆ

author img

By

Published : Sep 17, 2022, 2:05 PM IST

uttara kannada

ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತ ತಡೆಗೆ ಅರಣ್ಯ ಇಲಾಖೆ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಹೆಚ್ಚಿನ ಗಿಡಗಳನ್ನ ಬೆಳೆಸುವ ಮೂಲಕ ಮಣ್ಣು ಕುಸಿಯದಂತೆ ತಡೆಯಲು ಡ್ರೋನ್ ಮೂಲಕ ಬೀಜ ಬಿತ್ತನೆ ಮಾಡಲಾಗುತ್ತಿದೆ.

ಶಿರಸಿ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಅನೇಕ ಕಡೆಗಳಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದೆ. ಮಳೆಯ ಪ್ರಭಾವದಿಂದ ಯಲ್ಲಾಪುರ ತಾಲೂಕಿನಲ್ಲಿ ಕಳೆದ ವರ್ಷ ಭಾರಿ ಹಾನಿಯುಂಟಾಗಿತ್ತು. ಹೀಗಾಗಿ, ಗುಡ್ಡ ಕುಸಿತ ತಡೆಯಲು ಅರಣ್ಯ ಇಲಾಖೆ ವಿನೂತನ ಪ್ರಯೋಗ ಜಾರಿ ಮಾಡಿದ್ದು, ಡ್ರೋನ್ ಮೂಲಕ ಬೀಜದ ಉಂಡೆ ಬಿತ್ತಿ ಪರಿಸರ ಬೆಳೆಸುವ ಕಾರ್ಯಕ್ಕೆ ಮುಂದಾಗಿದೆ.

ಜಿಲ್ಲೆಯ ವಿವಿಧೆಡೆ ಸೇರಿದಂತೆ ಯಲ್ಲಾಪುರ ತಾಲೂಕಿನಲ್ಲೂ ಮಳೆಯ ಪ್ರಭಾವದಿಂದ ಗುಡ್ಡ ಕುಸಿದು ಅರಣ್ಯ ನಾಶವಾಗಿದೆ. ಬೆಟ್ಟ ಗುಡ್ಡದ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿ ಅಂತಹ ಪ್ರದೇಶಕ್ಕೆ ಯಾರೊಬ್ಬರು ಹೋಗಲಾರದ ಸ್ಥಿತಿ ನಿರ್ಮಾಣವಾಗಿದೆ. ಆ ಕಾರಣಕ್ಕಾಗಿ ಉತ್ತರಕನ್ನಡ ಅರಣ್ಯ ಇಲಾಖೆ ಡ್ರೋನ್​ ಮೂಲಕ ಬೀಜದುಂಡೆಯ ಬಿತ್ತನೆ ಮಾಡುವ ಹೊಸ ಕಾರ್ಯ ಕೈಗೆತ್ತಿಕೊಂಡಿದೆ. ಯಲ್ಲಾಪುರ ತಾಲೂಕು ಒಂದರಲ್ಲೇ 46 ಕಡೆಗಳಲ್ಲಿ ಡ್ರೋನ್ ಬಳಸಿ ಬೀಜದುಂಡೆಗಳ ಬಿತ್ತನೆ ಮಾಡಿ ಮಣ್ಣಿನ ಸವಕಳಿ/ಭೂ ಕುಸಿತವನ್ನು ತಡೆಗಟ್ಟುವ ಕಾರ್ಯ ಮಾಡಲಾಗುತ್ತಿದೆ.

ಡ್ರೋನ್ ಮೂಲಕ ಬೀಜ ಬಿತ್ತನೆ ಮಾಡಿದ ಅರಣ್ಯ ಇಲಾಖೆ

ಇದನ್ನೂ ಓದಿ: ಡ್ರೋನ್ ಮೂಲಕ ಚಿಕ್ಕಮಗಳೂರಲ್ಲಿ ಬೀಜ ಬಿತ್ತನೆ ಮಾಡಿದ ಅರಣ್ಯ ಇಲಾಖೆ

ಜಿಲ್ಲೆಯ ಯಲ್ಲಾಪುರ, ಶಿರಸಿ ಸೇರಿದಂತೆ ಹಲವು ತಾಲೂಕಿನಲ್ಲಿ ಈ ಪ್ರಯೋಗ ಮಳೆಯ ನಡುವೆಯೇ ಯಶಸ್ವಿಯಾಗಿ ನಡೆಯುತ್ತಿದೆ. ಅತೀ ಹೆಚ್ಚು ಭೂ ಕುಸಿತ ಕಂಡ ಯಲ್ಲಾಪುರ ತಾಲೂಕಿನ ಕಳಚೆ, ಬಾರೆ ಸೇರಿದಂತೆ ಹಲವು ಭಾಗಗಳಲ್ಲಿ ಈ ರೀತಿಯ ವೈಜ್ಞಾನಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಗುಜರಾತ್ ಮೂಲಕ ಡ್ರೋನ್​ ತರಿಸಿಕೊಂಡು ವೇಗವಾಗಿ ಬೆಳೆಯುವ ಹುಲ್ಲು, ಬಿದಿರು, ಮತ್ತಿ, ಹೊನ್ನೆ ಬೀಜದುಂಡೆಗಳನ್ನು ಬಿತ್ತಲಾಗಿದ್ದು, ಜನರು ಹೋಗಲು ಸಾಧ್ಯವಾಗದ ಪ್ರದೇಶಗಳಲ್ಲಿಯೂ ಈ ವಿನೂತನ ವಿಧಾನ ಉಪಕಾರಿಯಾಗಿದೆ.

ಇದನ್ನೂ ಓದಿ: ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಅಕ್ರಮ: ಕಡಿವಾಣಕ್ಕೆ ಸರ್ಕಾರದ ಹೊಸ ಅಸ್ತ್ರವೇನು?

ಶಿರಸಿಯಲ್ಲಿ 25, ಯಲ್ಲಾಪುರದಲ್ಲಿ 30, ಹೊನ್ನಾವರದಲ್ಲಿ 24, ಕಾರವಾರದಲ್ಲಿ 13, ಹಳಿಯಾಳ 7, ದಾಂಡೇಲಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ 21 ಹೆಕ್ಟೇರ್ ಪ್ರದೇಶದಲ್ಲಿ ಒಟ್ಟು 120 ಹೆಕ್ಟೇರ್ ಪ್ರದೇಶದಲ್ಲಿ ಈ ಬೀಜ ಬಿತ್ತನೆ ಕಾರ್ಯ ಕೈಗೊಳ್ಳಲಾಗಿದ್ದು, ಈಗಾಗಲೇ 100 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ ಕಾರ್ಯ ಮುಗಿದಿದೆ ಎನ್ನಲಾಗಿದೆ.

ಒಟ್ಟಾರೆಯಾಗಿ ಗುಡ್ಡ ಕುಸಿತವಾದ ಉತ್ತರಕನ್ನಡ, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಡ್ರೋನ್​ ಮೂಲಕ ಅರಣ್ಯದಲ್ಲಿ ಬೀಜ ಬಿತ್ತನೆ ಮಾಡಲಾಗುತ್ತಿದೆ. ಬೀಜಗಳು ಇನ್ನು ಹದಿನೈದು ದಿನದಲ್ಲಿ ಮೊಳೆಯೊಡೆಯಬಹುದು ಎಂದು ಅಂದಾಜಿಸಲಾಗಿದ್ದು, ಯಲ್ಲಾಪುರದಂತಹ ಪ್ರದೇಶದಲ್ಲಿ ಅಭಿಯಾನ ನಡೆಸಿರುವುದು ಇಲಾಖೆಯ ಪರಿಸರ ಕಾಳಜಿಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಅತಿವೃಷ್ಟಿ ಎದುರಿಸಲು ಮುಂಜಾಗ್ರತಾ ಕ್ರಮ : ಸಿಎಂಗೆ ಜಿಲ್ಲಾಧಿಕಾರಿ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.