ಸರ್ಕಾರದ ನಿರ್ಲಕ್ಷ್ಯ.. ಗೋವಾ ಹೆಸರಿನಲ್ಲೇ ಉಳಿದ ರಾಜ್ಯ ವ್ಯಾಪ್ತಿಯ 12 ದ್ವೀಪಗಳು..

author img

By

Published : Oct 17, 2021, 8:02 PM IST

Island

ಈ ನಡುಗಡ್ಡೆಗಳ ಪೈಕಿ ಕಾರವಾರದ ಸಮೀಪದ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ಗುಡಿಯಿದೆ. ಪ್ರತಿ ವರ್ಷ ಅಲ್ಲಿನ ಪೂಜಾ ಕೈಂಕರ್ಯಗಳನ್ನು ಕಾರವಾರದ ಕಡವಾಡದ ಮನೆತನವೇ ನೋಡಿಕೊಳ್ಳುತ್ತಿದೆ. ಇತಿಹಾಸ ನೋಡಿದರೂ ಇವುಗಳೆಲ್ಲವೂ ಕರ್ನಾಟಕಕ್ಕೆ ಸೇರಿದೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ, ಅಂಜುದೀವ್ ದ್ವೀಪ ನೌಕಾಪಡೆಯ ಸುಪರ್ದಿಗಿದ್ದರೂ ದಾಖಲೆ ಪ್ರಕಾರ ಇದು ಗೋವಾಕ್ಕೆ ಸೇರಿದ್ದಾಗಿದೆ..

ಕಾರವಾರ : ಕರ್ನಾಟಕದ ಕಾಶ್ಮೀರ ಎಂದೇ ಕರೆಯುವ ಮತ್ತು ಗೋವಾ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಕಾರವಾರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ಹತ್ತಾರು ದ್ವೀಪಗಳಿವೆ.

ಅದರಲ್ಲಿ ಒಂದಿಷ್ಟು ದ್ವೀಪಗಳು ಪ್ರವಾಸಿಗರಿಗೆ ಮುಕ್ತವಾಗಿದ್ದರೆ, ಇನ್ನೊಂದಿಷ್ಟು ದ್ವೀಪಗಳಿಗೆ ದೇಶದ ಭದ್ರತಾ ದೃಷ್ಟಿಯಿಂದ ನೌಕಾನೆಲೆಯಿಂದ ನಿರ್ಬಂಧ ವಿಧಿಸಲಾಗಿದೆ. ಆದರೆ, ಪೋರ್ಚುಗೀಸ್ ಆಳ್ವಿಕೆ ಕಾಲದಲ್ಲಿ ಗೋವಾ ಪಾಲಾಗಿದ್ದ ಕಾರವಾರ ಸಮೀಪದ ದ್ವೀಪಗಳು ಸರ್ಕಾರದ ನಿರ್ಲಕ್ಷ್ಯತನದಿಂದಾಗಿ ಇಂದಿಗೂ ಕೂಡ ಗೋವಾ ಹೆಸರಿನಲ್ಲಿಯೇ ಇರುವುದು ಇದೀಗ ಬೆಳಕಿಗೆ ಬಂದಿದೆ.

ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ್ ಮಾತನಾಡಿರುವುದು..

ಸೀಬರ್ಡ್​ನಂತಹ ಬೃಹತ್ ಯೋಜನೆಗೆ ಕಾರವಾರ-ಅಂಕೋಲಾ ವ್ಯಾಪ್ತಿಯಲ್ಲಿ ಹಲವು ನಡುಗಡ್ಡೆಗಳು ಸೇರ್ಪಡೆಗೊಂಡರೂ ಕೂಡ ಇಂದಿಗೂ ಇಲ್ಲಿನ ಕೆಲವು ದ್ವೀಪಗಳು ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಮಾತ್ರವಲ್ಲದೆ, ನಿತ್ಯ ಮೀನುಗಾರರು, ಪ್ರವಾಸಿಗರ ಸಂಚಾರಕ್ಕೂ ಮುಕ್ತವಾಗಿವೆ.

ಆದರೆ, ಈ ಹಿಂದೆ ಪೋರ್ಚುಗೀಸರ ಕಾಲಾವಧಿಯಲ್ಲಿ ಗೋವಾವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಲಾಗುತ್ತಿತ್ತು. ಆಗ ರಾಜ್ಯದಿಂದ ವಶಕ್ಕೆ ಪಡೆದು 12 ನಡುಗಡ್ಡೆಗಳನ್ನು ತಮ್ಮ ವ್ಯಾಪಾರ, ವಹಿವಾಟಿಗೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ದಾಖಲೆಗಳ ಪ್ರಕಾರ ಇನ್ನೂ ಕೂಡ ಅವು ಗೋವಾ ರಾಜ್ಯದ ಹೆಸರಿನಲ್ಲೇ ಇವೆ ಎಂಬ ಮಾಹಿತಿ ಕೇಂದ್ರ ಗೃಹ ಇಲಾಖೆ ಹಾಗೂ ರಾಜ್ಯ ಆಂತರಿಕ ಭದ್ರತಾ ವಿಭಾಗದಿಂದ ಹೊರ ಬಿದ್ದಿದೆ.

ಆದರೆ, ಈ ನಡುಗಡ್ಡೆಗಳು ಕರ್ನಾಟಕದ ಕಡಲತೀರದಿಂದ 12-15 ನಾಟಿಕಲ್ ವ್ಯಾಪ್ತಿಯಲ್ಲಿದೆ. ಭೌಗೋಳಿಕವಾಗಿ ಅವು ಕರ್ನಾಟಕ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. 1947ರಲ್ಲಿ ಭಾರತ ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡರೂ ಪೋರ್ಚುಗೀಸರು ಗೋವಾದಲ್ಲಿ ಆಡಳಿತ ಕೊನೆಗೊಳಿಸಿರಲಿಲ್ಲ. ಹೀಗಾಗಿ, ಈ ನಡುಗಡ್ಡೆಗಳು ಸ್ವಾತಂತ್ರ್ಯದ ಬಳಿಕ ದಶಕಗಳ ಕಾಲ ಪೋರ್ಚುಗೀಸರ ಕೈಯಲ್ಲೇ ಇದ್ದ‌ ಕಾರಣ ಅವು ಗೋವಾ ರಾಜ್ಯದ ಹೆಸರಿನಲ್ಲಿ ದಾಖಲಾಗಿದ್ದವು.

ಪೋರ್ಚುಗೀಸರು ಭಾರತ ಬಿಟ್ಟು ಆರು ದಶಕಗಳೇ ಕಳೆದಿದ್ದರೂ ಕೂಡ ಕರ್ನಾಟಕದ ಕಂದಾಯ ಇಲಾಖೆ ಈ ನಡುಗಡ್ಡೆಗಳನ್ನು ತನ್ನ ಹೆಸರಿಗೆ ಮಾಡಿಕೊಂಡಿಲ್ಲ.‌ ಇದರಿಂದ ಕಂದಾಯ ಭೂ ದಾಖಲೆ ಪುಟದಲ್ಲಿ ಇವುಗಳ ಸೇರ್ಪಡೆಯಾಗಿಲ್ಲ. ಹೀಗಾಗಿ, 500 ವರ್ಷದ ಹಿಂದಿನ ದಾಖಲೆಯ ಪ್ರಕಾರ, ಈ ನಡುಗಡ್ಡೆಗಳು ಇನ್ನೂ ಗೋವಾದ ಹೆಸರಿನಲ್ಲೇ ಇವೆ.

ಇವು ಹೆಸರಿಗೆ ಮಾತ್ರ ಕಾರವಾರ ಬಳಿಯ ನಡುಗಡ್ಡೆಗಳಾಗಿ ರಾಜ್ಯಕ್ಕೆ ಸೀಮಿತವಾಗಿವೆ. ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ಮಾಡದೇ ಕೂಡಲೇ ಈ ನಡುಗಡ್ಡೆಗಳನ್ನು ರಾಜ್ಯದ ಹೆಸರಿಗೆ ದಾಖಲೀಕರಣ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ನಡುಗಡ್ಡೆಗಳ ಪೈಕಿ ಕಾರವಾರದ ಸಮೀಪದ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ಗುಡಿಯಿದೆ. ಪ್ರತಿ ವರ್ಷ ಅಲ್ಲಿನ ಪೂಜಾ ಕೈಂಕರ್ಯಗಳನ್ನು ಕಾರವಾರದ ಕಡವಾಡದ ಮನೆತನವೇ ನೋಡಿಕೊಳ್ಳುತ್ತಿದೆ. ಇತಿಹಾಸ ನೋಡಿದರೂ ಇವುಗಳೆಲ್ಲವೂ ಕರ್ನಾಟಕಕ್ಕೆ ಸೇರಿದೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ, ಅಂಜುದೀವ್ ದ್ವೀಪ ನೌಕಾಪಡೆಯ ಸುಪರ್ದಿಗಿದ್ದರೂ ದಾಖಲೆ ಪ್ರಕಾರ ಇದು ಗೋವಾಕ್ಕೆ ಸೇರಿದ್ದಾಗಿದೆ.

ಇದಲ್ಲದೆ ದೇವಘಡ, ಶಿಮ್ಸಿಗುಡ್ಡ, ಕರ್ಕಲ್ ಗುಡ್ಡ, ಸನಸೆಗುಂಜಿ ನಡುಗಡ್ಡೆ, ಕನಿಗುಡ್ಡ, ಮದಲಿಗಡ ಸೇರಿ 12 ನಡುಗಡ್ಡೆಗಳು ಇನ್ನೂ ಕೂಡ ಗೋವಾ ರಾಜ್ಯದ ಹೆಸರಿನಲ್ಲಿದೆ. ಆದರೆ, ಇದೀಗ ಕೇಂದ್ರ ಗೃಹ ಇಲಾಖೆ ಹಾಗೂ ರಾಜ್ಯ ಆಂತರಿಕ ಭದ್ರತಾ ಪಡೆ ಸ್ಪಷ್ಟ ಮಾಹಿತಿ ಒದಗಿಸುವಂತೆ ಉತ್ತರಕನ್ನಡ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಅದರಂತೆ ಈ ಬಗ್ಗೆ ಪರಿಶೀಲಿಸಿದ ಜಿಲ್ಲಾಡಳಿತ, ನಡುಗಡ್ಡೆಗಳ ಲಾಂಗಿಟ್ಯೂಡ್ ಹಾಗೂ ಲ್ಯಾಟಿಟ್ಯೂಡ್ ಪರಿಶೀಲಿಸಿ ಇವುಗಳು ಕರ್ನಾಟಕದ್ದೇ ಎಂದು ವರದಿ ಕಳುಹಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಓದಿ: ದುಬೈ ಅನಿವಾಸಿಗಳಿಗೆ ಹೂಡಿಕೆ ಮಾಡಲು ಆಹ್ವಾನಿಸಿದ ಸಚಿವ ‌ಮುರುಗೇಶ್ ನಿರಾಣಿ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.