ಆ್ಯಂಬುಲೆನ್ಸ್​ ಅಪಘಾತ.. ಮೃತರ ಮನೆಗೆ ಸಚಿವ ಶ್ರೀನಿವಾಸ ಪೂಜಾರಿ ಭೇಟಿ, ಸಾಂತ್ವನ‌

author img

By

Published : Jul 26, 2022, 1:05 PM IST

Srinivasa Pujari visited the house of those who died in the ambulance accident

ಆ್ಯಂಬುಲೆನ್ಸ್​​​ ಅಪಘಾತ ಪ್ರಕರಣ- ಮೃತಪಟ್ಟವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ- ಜೀವವಿಮೆ ಹಾಗೂ ಸರ್ಕಾರದಿಂದ ವಿಶೇಷ ಪರಿಹಾರಧನ ಒದಗಿಸುವ ಕುರಿತು ಭರವಸೆ

ಕಾರವಾರ : ಇತ್ತೀಚೆಗೆ ಶಿರೂರು ಟೋಲ್​ಗೇಟ್ ಬಳಿ ಆ್ಯಂಬುಲೆನ್ಸ್ ಅಪಘಾತದಲ್ಲಿ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವ ಬಗ್ಗೆ ತಿಂಗಳ ಅಂತ್ಯದೊಳಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ತಿರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮೃತರ ಮಕ್ಕಳೊಂದಿಗೆ ಚರ್ಚೆ ನಡೆಸಿ ಧೈರ್ಯ ತುಂಬಿದರು. ಅಪಘಾತದಲ್ಲಿ ಸಾವನ್ನಪ್ಪಿದವರ ಮರಣದ ದಾಖಲೆ, ವಿವಿಧ ದಾಖಲಾತಿ ಸಮಸ್ಯೆಯ ಬಗ್ಗೆ ಸ್ಥಳೀಯರು ಸಚಿವರ ಬಳಿ ಹೇಳಿಕೊಂಡಿದ್ದು, ಶಾಸಕ ಸುನೀಲ್​ ನಾಯ್ಕ ಅಧಿಕಾರಿಗಳೊಂದಿಗೆ ಮಾತನಾಡಿ ಸಂಬಂಧಿಸಿದ ಎಲ್ಲಾ ದಾಖಲೆ ಒದಗಿಸುವ ಬಗ್ಗೆ ಸೂಚಿಸಿದರು.

ವಿಶೇಷ ಪರಿಹಾರದ ಭರವಸೆ: ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೋಟ ಶ್ರೀನಿವಾಸ್, ಆಸ್ಪತ್ರೆಗೆ ಕರೆದೊಯ್ಯುವಾಗ ಈ ಘಟನೆ ನಡೆದಿರುವುದು ದುರಂತ ಹಾಗೂ ನೋವಿನ ಸಂಗತಿಯಾಗಿದೆ. ಮೃತರ ಕುಟುಂಬಗಳಿಗೆ ಸ್ಥಳೀಯವಾಗಿ ಜೀವವಿಮೆ ಇತ್ಯಾದಿ ಲಭಿಸುವ ಕುರಿತು ಶಾಸಕ ಸುನೀಲ್ ನಾಯ್ಕ ನೋಡಿಕೊಳ್ಳುತ್ತಾರೆ. ಇದರೊಂದಿಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮೃತರು ಹಾಗೂ ಗಾಯಾಳುಗಳ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ವಿಶೇಷ ಪರಿಹಾರವನ್ನು ಒದಗಿಸುವ ಕುರಿತು ಪ್ರಯತ್ನಿಸಲಾಗುವುದು ಎಂದು ಅಭಯ ನೀಡಿದರು.

ಸುಸಜ್ಜಿತ ಆಸ್ಪತ್ರೆಗಾಗಿ ಜಾಗ ಕಾಯ್ದಿರಿಸಲಾಗಿದೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈಗಾಗಲೇ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದ್ದೇನೆ. ಹೃದಯ ಭಾಗವಾಗಿರುವ ಕುಮಟಾದಲ್ಲಿ 15 ರಿಂದ 20 ಎಕರೆ ಜಾಗ ಕಾಯ್ದಿರಿಸಲಾಗಿದೆ. ತಿಂಗಳಾಂತ್ಯದಲ್ಲಿ ಜಿಲ್ಲೆಯ ಶಾಸಕರು, ಸಚಿವರೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಿದ ಬಳಿಕ ತೀರ್ಮಾನ ಪ್ರಕಟಿಸಲಾಗುವುದು ಎಂದರು.

ಆ್ಯಂಬುಲೆನ್ಸ್​ ಅಪಘಾತ.. ಮೃತರ ಮನೆಗೆ ಸಚಿವ ಶ್ರೀನಿವಾಸ ಪೂಜಾರಿ ಭೇಟಿ, ಸಾಂತ್ವನ‌

ಆಸ್ಪತ್ರೆ ಸರ್ಕಾರಿ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದೆಯೇ ಎನ್ನುವುದು ಆ ಬಳಿಕ ನಿರ್ಧಾರವಾಗಲಿದೆ. ಇದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಶಾಸಕರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿಶೇಷ ಪರಿಹಾರಧನ ನೀಡುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ : ಶಿರೂರು ಟೋಲ್‌ ಕಂಬಕ್ಕೆ ಡಿಕ್ಕಿಯಾದ ಆ್ಯಂಬುಲೆನ್ಸ್​; ನಾಲ್ವರು ದಾರುಣ ಸಾವು...ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.