ಬುಡಕಟ್ಟು ಕುಣಬಿ ಸಮುದಾಯದ ಬೇಡಿಕೆಗೆ ಸಿಗದ ಮನ್ನಣೆ: ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯ

author img

By

Published : Sep 26, 2022, 6:28 AM IST

ಬುಡಕಟ್ಟು ಕುಣಬಿ ಸಮುದಾಯ

ಉತ್ತರಕನ್ನಡ ಜಿಲ್ಲೆಯಲ್ಲಿ ಹಾಲಕ್ಕಿ ಕುಣಬಿ ಗೌಳಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವುದು ಎರಡು-ಮೂರು ದಶಕಗಳಿಂದ ಕೇಳಿ ಬರುತ್ತಿರುವ ಕೂಗು.‌

ಕಾರವಾರ(ಉತ್ತರ ಕನ್ನಡ): ಬುಡಕಟ್ಟು ಜನಾಂಗಕ್ಕೆ ಸೇರಿದ ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕಳೆದ ಎರಡು ಮೂರು ದಶಕಗಳಿಂದ ಬೇಡಿಕೆ ಕೇಳಿಬರುತ್ತಿದೆ. ಆದರೆ ಇದುವರೆಗೂ ಯಾವುದೇ ಸರ್ಕಾರಗಳೂ ಕುಣಬಿ ಸಮುದಾಯದವರ ಬೇಡಿಕೆಗೆ ಮನ್ನಣೆ ನೀಡಿರಲಿಲ್ಲ. ಇದೀಗ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹಾಕಲು ಕುಣಬಿ ಸಮುದಾಯ‌‌ ನಿರ್ಧರಿಸಿದ್ದು, ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲೇಬೇಕೆಂದು ಭಾರಿ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ ಸರ್ಕಾರಕ್ಕೆ 15 ದಿನಗಳ ಗಡುವು ನೀಡುವ ಮೂಲಕ ಮುಂದಿನ ಪರಿಣಾಮಗಳನ್ನು ಎದುರಿಸುವಂತೆ ಎಚ್ಚರಿಕೆ ರವಾನಿಸಲಾಗಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.

ಹೌದು, ಉತ್ತರಕನ್ನಡ ಜಿಲ್ಲೆಯಲ್ಲಿ ಹಾಲಕ್ಕಿ, ಕುಣಬಿ, ಗೌಳಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವುದು ಎರಡು- ಮೂರು ದಶಕಗಳಿಂದ ಕೇಳಿ ಬರುತ್ತಿರುವ ಕೂಗು.‌ ಅದರಲ್ಲೂ ಕುಣಬಿ ಸಮಾಜ ತಮ್ಮನ್ನು 2ಎ ಪ್ರವರ್ಗದಿಂದ ತೆಗೆದು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಾಕಷ್ಟು ಸಮಯಗಳಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮುಂದೆ ತಮ್ಮ ಮನವಿಗಳನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ.

ಕುಣಬಿ ಸಮುದಾಯದ ವ್ಯಕ್ತಿ ಪ್ರಸನ್ನ ಗಾವಡಾ ಅವರು ಮಾತನಾಡಿದರು

ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬಳಿಯೂ ತಮ್ಮ ಬೇಡಿಕೆಯನ್ನು ಸಲ್ಲಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಆಗ್ರಹಿಸಿತ್ತು. ಆದರೆ, ದಶಕಗಳಿಂದಲೂ ಸಮುದಾಯಕ್ಕೆ ಆಶ್ವಾಸನೆ ದೊರೆಯುತ್ತಿದೆಯೇ ಹೊರತು, ಈ ಕುರಿತು ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಇವರ ನಂತರದಲ್ಲಿ ಮನವಿ ನೀಡಿದ ಬೆಟ್ಟ ಕುರುಬ ಸೇರಿದಂತೆ ಇತರೆ ಸಮುದಾಯಗಳನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರ್ಕಾರ ಅನುಮೋದನೆ ನೀಡಿದ್ದು, ಅರ್ಹ ಪಟ್ಟಿಯಲ್ಲಿ ಬರುವ ಕುಣಬಿ ಸಮುದಾಯವನ್ನು ಮಾತ್ರ ಇದುವರೆಗೂ ಕಡೆಗಣಿಸಲಾಗಿದೆ.

ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ: ಈ ಹಿನ್ನೆಲೆ ಇದೀಗ ಕುಣಬಿ ಸಮುದಾಯದವರು ಹೋರಾಟದ ಮೂಲಕ ಗಮನ ಸೆಳೆಯಲು ಮುಂದಾಗಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿರುವ ಕುಣಬಿ ಮುಖಂಡರು, ಬೇಡಿಕೆ ಈಡೇರಿಸದಿದ್ದಲ್ಲಿ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕುಣಬಿ ಸಮಾಜ ಅಭಿವೃದ್ಧಿ ಸಂಘದ ತಾಲೂಕು ಘಟಕದ ಅಧ್ಯಕ್ಷ ಅಜಿತ್ ಮಿರಾಶಿ ಅವರು ಮಾತನಾಡಿದರು

ಇನ್ನು, ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಕಳೆದ ಮೂರು ದಶಕಗಳಿಂದ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ವರ್ಗದವರ ಹೋರಾಟವನ್ನು ಕಡೆಗಣಿಸುತ್ತಲೇ ಬಂದಿವೆ. ಹೀಗಾಗಿ ಜಿಲ್ಲೆಯ ಕುಣಬಿ ಸಮುದಾಯದ 40 ಸಾವಿರಕ್ಕೂ ಅಧಿಕ ಜನರು ಹೋರಾಟಕ್ಕೆ ಸಿದ್ಧರಾಗಿರೋದಾಗಿ ಸಮುದಾಯದ ಮುಖಂಡರು ತಿಳಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿರುವ ಕುಣಬಿ ಸಮುದಾಯದವರು ಮೂಲತಃ ಗೋವಾ ರಾಜ್ಯದವರು.

ಕುಣಬಿ ಸಮುದಾಯವರಿಂದ ಬೇಸರ: ಪೋರ್ಚುಗೀಸರ ಕಾಲದಲ್ಲಿ ಮತಾಂತರಕ್ಕೆ ಹೆದರಿ ಜೋಯಿಡಾ ತಾಲೂಕಿನ ಅರಣ್ಯ ಪ್ರದೇಶಕ್ಕೆ ಬಂದು ಇವರು ನೆಲೆಸಿದ್ದರು. ಗೋವಾದಲ್ಲಿರುವ ಕುಣಬಿ ಸಮುದಾಯಕ್ಕೆ 2007ರಲ್ಲೇ ಪರಿಶಿಷ್ಟ ಜಾತಿಯ ಮಾನ್ಯತೆ ನೀಡಲಾಗಿದೆ. ಆದರೆ, ಕರ್ನಾಟಕದಲ್ಲಿರುವ ಕುಣಬಿ ಸಮುದಾಯದ ಬೇಡಿಕೆಯನ್ನು ರಾಜ್ಯ, ಕೇಂದ್ರ ಸರ್ಕಾರಗಳು ನಿರ್ಲಕ್ಷಿಸುತ್ತಿವೆ ಎಂದು ಕುಣಬಿ ಸಮುದಾಯವರು ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ, ಬಹಳಷ್ಟು ಹಿಂದುಳಿದಿರುವ ಕುಣಬಿ ಸಮಾಜ ತಮ್ಮ ಸಮುದಾಯದ ಅಭಿವೃದ್ಧಿಗಾಗಿ ಪರಿಶಿಷ್ಟ ಪಂಗಡಕ್ಕೆ ಪರಿಗಣಿಸಲು ಬೇಡಿಕೆ ಇಟ್ಟಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಾದ್ರೂ ಸರ್ಕಾರ ಈ ಬಗ್ಗೆ ಗಮನಹರಿಸಿ ಹಿಂದುಳಿದ ಸಮುದಾಯದ ಬೇಡಿಕೆ ಈಡೇರಿಸುತ್ತಾ ಅನ್ನೋದನ್ನ ಕಾದು ನೋಡಬೇಕು.

ಓದಿ: ಅಂದು ಚುನಾವಣೆಗೆ ಸ್ಪರ್ಧಿಸಲು ಜಾರ್ಜ್ ಫರ್ನಾಂಡೀಸ್ ನನಗೆ 10 ಸಾವಿರ ರೂ ಕೊಟ್ಟಿದ್ದರು: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.