ಭಾರತೀಯ ಕೋಸ್ಟ್ ಗಾರ್ಡ್ ಕ್ಷಿಪ್ರ ಕಾರ್ಯಾಚರಣೆ: ಮುಳುಗುತ್ತಿದ್ದ ಹಡಗಿನಿಂದ 19 ಜನರ ರಕ್ಷಣೆ

author img

By

Published : Sep 17, 2022, 7:03 AM IST

Indian Coast Guard Rescues People From Vessel

ಮಹಾರಾಷ್ಟ್ರದ ರತ್ನಗಿರಿ ಕಡಲತೀರದಿಂದ 41 ಮೈಲಿ ದೂರದಲ್ಲಿ ಮುಳುಗುವ ಹಂತಕ್ಕೆ ತಲುಪಿದ್ದ ಹಡಗಿನಿಂದ 19 ಮಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಶುಕ್ರವಾರ ರಕ್ಷಿಸಿದ್ದಾರೆ.

ಕಾರವಾರ/ರತ್ನಗಿರಿ: ನವ ಮಂಗಳೂರಿಗೆ ಬಿಟುಮಿನ್ ಸಾಗಿಸುತ್ತಿದ್ದ ಹಡಗೊಂದು ನೀರು ತುಂಬಿ ಮುಳುಗುತ್ತಿದ್ದಾಗ ಅದರಲ್ಲಿದ್ದ 19 ಮಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಕ್ಷಿಪ್ರ ಕಾರ್ಯಾಚರಣೆ ಮೂಲಕ ಶುಕ್ರವಾರ ರಕ್ಷಣೆ ಮಾಡಿದ್ದಾರೆ.

ಮಧ್ಯ ಆಫ್ರಿಕಾದ ಗ್ಯಾಬೋನ್ ರಾಷ್ಟ್ರದ ಬಿಟುಮಿನ್ ಸಾಗಿಸುವ ಹಡಗು ಇದಾಗಿದ್ದು, ಯುಎಇಯ ಖೋರ್ ಫಕ್ಕನ್‌ನಿಂದ ನವಮಂಗಳೂರು ಬಂದರಿನತ್ತ ತೆರಳುತ್ತಿತ್ತು. ಮಹಾರಾಷ್ಟ್ರದ ರತ್ನಗಿರಿ ಕರಾವಳಿಯ ಪಶ್ಚಿಮಕ್ಕೆ 41 ಮೈಲಿಗಳಷ್ಟು ದೂರ ತಲುಪುತ್ತಿದ್ದಂತೆ ಇದ್ದಕ್ಕಿದ್ದಂತೆ ಹಡಗಿನಲ್ಲಿ ನೀರು ತುಂಬಲಾರಂಭಿಸಿದ್ದು, ಹಡಗಿನಲ್ಲಿದ್ದ ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು.

ತಕ್ಷಣವೇ ಭಾರತೀಯ ಕೋಸ್ಟ್ ಗಾರ್ಡ್​ಗೆ ಮಾಹಿತಿ ರವಾನೆಯಾಗಿ ಎರಡು ಕೋಸ್ಟ್ ಗಾರ್ಡ್​ನ ಐಸಿಜಿಎಸ್ ಸುಜೀತ್ ಮತ್ತು ಐಸಿಜಿಎಸ್ ಅಪೂರ್ವ ರಕ್ಷಣಾ ಚಟುವಟಿಕೆಗೆ ತೆರಳಿದ್ದವು. ಇದೇ ವೇಳೆ ಸುಧಾರಿತ ಲಘು ಹೆಲಿಕಾಪ್ಟರ್​ನ್ನು ಕೂಡ ಈ ಕಾರ್ಯಾಚರಣೆಗೆ ನಿಯೋಜಿಸಲಾಯಿತು. ಕಾರ್ಯಾಚರಣೆಯಲ್ಲಿ ಮುಳುಗುತ್ತಿದ್ದ ಹಡಗಿನಲ್ಲಿದ್ದ 19 ಮಂದಿಯನ್ನು ರಕ್ಷಣೆ ಮಾಡಲಾಗಿದೆ. 18 ಸಿಬ್ಬಂದಿ ಭಾರತೀಯರಾದರೆ, ಓರ್ವ ಹಡಗಿನ ಮಾಸ್ಟರ್‌ನನ್ನು ರಕ್ಷಿಸಲಾಗಿದೆ.

ಮುಳುಗುತ್ತಿದ್ದ ಹಡಗಿನಿಂದ 19 ಜನರ ರಕ್ಷಣೆ..

ಕೋಸ್ಟ್ ಗಾರ್ಡ್​ನಿಂದ ರಕ್ಷಣೆಗೊಳಗಾದ ಸಿಬ್ಬಂದಿಗೆ ವೈದ್ಯಕೀಯ ನೆರವನ್ನು ನೀಡಲಾಗಿದೆ. 3911 ಮೆಟ್ರಿಕನ್ ಟನ್ ಬಿಟುಮಿನ್ ತುಂಬಿರುವ ಹಡಗಿನಲ್ಲಿ ನೀರು ತುಂಬಿ ಮುಳುಗುವ ಹಂತದಲ್ಲಿದ್ದು, ಒಂದು ವೇಳೆ ಮುಳುಗಿದ್ದಲ್ಲಿ ಸಮುದ್ರ ಮಾಲಿನ್ಯ ಉಂಟಾಗುವ ಅಪಾಯವಿದೆ. ಹೀಗಾಗಿ ಹಡಗನ್ನು ಮೇಲಕ್ಕೆತ್ತಿ ಸುರಕ್ಷಿತವಾಗಿ ಟೋಯಿಂಗ್ ಮಾಡಿಕೊಂಡು ಹೋಗಲು ತುರ್ತು ಟೋಯಿಂಗ್ ಹಗಡನ್ನು ಡೈರೆಕ್ಟರೇಟ್ ಜನರಲ್- ಶಿಪ್ಪಿಂಗ್‌ನಿಂದ ವ್ಯವಸ್ಥೆ ಮಾಡಲಾಗಿದ್ದು, ಈ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ.

ಸಂಕಷ್ಟದಲ್ಲಿ ನೆರವು: ಭಾರತೀಯ ಕೋಸ್ಟ್ ಗಾರ್ಡ್ ಇಂತಹ ಸಂಕಷ್ಟದ ಸಮಯದಲ್ಲಿ ತ್ವರಿತವಾಗಿ ನೆರವಿಗೆ ಬರುವ ಮೂಲಕ ಇಲ್ಲಿಯವರೆಗೆ 11 ಸಾವಿರಕ್ಕೂ ಹೆಚ್ಚು ಜೀವಗಳನ್ನು ಉಳಿಸಿದೆ.

ಇದನ್ನೂ ಓದಿ: ಕೋಸ್ಟ್ ಗಾರ್ಡ್ ಪಶ್ಚಿಮ ವಲಯ ಕಮಾಂಡರ್: ಕಾರವಾರದ ಮನೋಜ್ ಬಾಡ್ಕರ್ ಪದಗ್ರಹಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.