ಗೋಕರ್ಣ ದೇವಾಲಯದ ಪೂಜಾ ವಿವಾದ : ಕೊನೆಗೂ ಆತ್ಮಲಿಂಗ ಪೂಜೆಗೆ ಸಿಕ್ತು ಅವಕಾಶ

author img

By

Published : Oct 9, 2021, 7:56 PM IST

gokarna-temple-worship-controversy-end

ದೇವಸ್ಥಾನ ಆಡಳಿತ ಮಂಡಳಿ ಹಾಗೂ ಉಪಾಧಿವಂತರ ನಡುವಿನ ಗಲಾಟೆಯಿಂದಾಗಿ ಆತ್ಮಲಿಂಗ ದರ್ಶನಕ್ಕೆ ಭಕ್ತರಿಗೆ ಎದುರಾಗಿದ್ದ ಅಡ್ಡಿ ನಿವಾರಣೆಯಾದಂತಾಗಿದೆ. ಆತ್ಮಲಿಂಗ ದರ್ಶನಕ್ಕೆಂದೇ ದೂರದೂರುಗಳಿಂದ ಆಗಮಿಸುತ್ತಿದ್ದ ಭಕ್ತರಿಗೆ ಇದು ಸಂತಸ ಮೂಡಿಸಿದ್ದಂತೂ ಸತ್ಯ..

ಕಾರವಾರ : ದಕ್ಷಿಣಕಾಶಿ ಖ್ಯಾತಿಯ ಶ್ರೀ ಮಹಾಬಲೇಶ್ವರ ಸ್ವಾಮಿ ದೇವಸ್ಥಾನ ಸದ್ಯ ಸರ್ಕಾರದ ಹಿಡಿತದಲ್ಲಿದೆ. ದೇವಸ್ಥಾನ ನಿರ್ವಹಣೆಗೆ ಸುಪ್ರೀಂಕೋರ್ಟ್ ಸಮಿತಿಯೊಂದನ್ನ ರಚನೆ ಮಾಡಿತ್ತು.

ಆದರೆ, ಕೆಲ ದಿನಗಳ ಹಿಂದೆ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸುವ ವಿಚಾರವಾಗಿ ಉಪಾಧಿವಂತರು ಹಾಗೂ ದೇವಸ್ಥಾನದ ಸಮಿತಿಯ ಸದಸ್ಯರ ನಡುವೆ ಗಲಾಟೆಯಾಗಿತ್ತು. ಇದರಿಂದ ಭಕ್ತರಿಗೆ ಆತ್ಮಲಿಂಗ ದರ್ಶನಕ್ಕೆ ಅವಕಾಶ ಇಲ್ಲದಂತಾಗಿತ್ತು. ಇದೀಗ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಪೂಜೆ ವಿಚಾರವಾಗಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ರಾಜ್ಯದಲ್ಲಿಯೇ ಶಿವನ ಆತ್ಮಲಿಂಗವಿರುವ ಏಕೈಕ ದೇವಸ್ಥಾನ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ. ಹೀಗಾಗಿ, ಹೊರ ರಾಜ್ಯವಷ್ಟೇ ಅಲ್ಲದೇ ದೇಶ-ವಿದೇಶಗಳ ಪ್ರವಾಸಿಗರೂ ಸಹ ಮಹಾಬಲೇಶ್ವರನ ದರ್ಶನ ಪಡೆಯಲು ಗೋಕರ್ಣಕ್ಕೆ ಆಗಮಿಸುತ್ತಾರೆ.

ಈ ಹಿಂದೆ 2007ರಿಂದ ಶ್ರೀ ರಾಮಚಂದ್ರಾಪುರ ಮಠದ ಆಡಳಿತದಲ್ಲಿದ್ದ ಮಹಾಬಲೇಶ್ವರ ದೇವಸ್ಥಾನವನ್ನ 2021ರ ಮೇ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಅಲ್ಲದೇ ದೇವಸ್ಥಾನದ ಆಡಳಿತ ನಿರ್ವಹಣೆಗೆ ಅರ್ಚಕರು ಸೇರಿ ಸಮಿತಿಯೊಂದನ್ನ ರಚನೆ ಮಾಡಿತ್ತು.

ಆದ್ರೆ, ಕಳೆದ ತಿಂಗಳು ಪೂಜೆ ಸಲ್ಲಿಕೆ ವಿಚಾರವಾಗಿ ಸುಪ್ರೀಂಕೋರ್ಟ್‌ ಆದೇಶದಿಂದ ಗೊಂದಲ ಉಂಟಾಗಿದೆ. ಅನಾದಿ ಕಾಲದಿಂದ ಮಹಾಬಲೇಶ್ವರನಿಗೆ ಪೂಜೆ ಮಾಡಿಕೊಂಡು ಬಂದಿರುವ ಉಪಾಧಿವಂತರು ಹಾಗೂ ಸಮಿತಿಯ ಸದಸ್ಯರ ನಡುವೆ ಗಲಾಟೆ ಉಂಟಾಗಿತ್ತು.

ಪರಿಣಾಮ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಲು ಭಕ್ತರೂ ಸೇರಿ ಯಾರಿಗೂ ಅವಕಾಶ ನೀಡದಂತೆ ಸಮಿತಿ ಸೂಚನೆ ನೀಡಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಸಮಿತಿಯ ಸದಸ್ಯರು ಹಾಗೂ ಉಪಾಧಿವಂತರೊಂದಿಗೆ ಜಿಲ್ಲಾಧಿಕಾರಿಗಳು ಸಭೆಯನ್ನ ಕೈಗೊಂಡು, ಸುಪ್ರೀಂಕೋರ್ಟ್‌ ಆದೇಶದ ಕುರಿತು ಮಾಹಿತಿ ನೀಡಿದ್ದಾರೆ.

ಸುಪ್ರೀಂಕೋರ್ಟ್ ರಚಿಸಿರುವ ಸಮಿತಿಯು ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನ ಕೈಗೊಳ್ಳಬಹುದಾಗಿದೆ. ಸರ್ಕಾರದ ಆದೇಶದಂತೆ ಭಕ್ತರ ದರ್ಶನಕ್ಕೆ ಸೂಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಾತ್ರ ನಿರ್ಧಾರಗಳನ್ನ ಕೈಗೊಳ್ಳಬೇಕು. ಅದನ್ನ ಹೊರತುಪಡಿಸಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸುವ ವಿಚಾರವಾಗಿ ಯಾವುದೇ ನಿರ್ಬಂಧ ಹೇರಲು ಅಧಿಕಾರ ಇಲ್ಲ ಎಂದು ತಿಳಿಸಿದ್ದಾರೆ.

ಇದೇ ವರ್ಷ ಮೇ ತಿಂಗಳಲ್ಲಿ ಮಹಾಬಲೇಶ್ವರ ದೇವಸ್ಥಾನದ ಆಡಳಿತ ವಹಿಸಿಕೊಂಡಿದ್ದ ಸುಪ್ರೀಂಕೋರ್ಟ್ ಈ ಹಿಂದೆ ರಾಮಚಂದ್ರಾಪುರ ಮಠದ ಆಡಳಿತದ ಪೂರ್ವದಲ್ಲಿ 2007ರಲ್ಲಿ ಜಾರಿಯಲ್ಲಿದ್ದ ಪೂಜಾ ವಿಧಾನಗಳನ್ನೇ ಅನುಸರಿಸುವಂತೆ ಸೂಚಿಸಿತ್ತು.

ಅಲ್ಲದೇ ದೇವಸ್ಥಾನದ ಆಡಳಿತ ನಿರ್ವಹಣೆಗೆ ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿಯೊಂದನ್ನ ರಚನೆ ಮಾಡಿತ್ತು. ಈ ಹಿಂದಿನಿಂದ ಅನುವಂಶೀಯವಾಗಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸುತ್ತಿದ್ದ ಉಪಾಧಿವಂತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಆಗಮಿಸಿದ ವೇಳೆ ಸಮಿತಿಯ ಸದಸ್ಯರು ಅವಕಾಶ ನೀಡಲು ನಿರಾಕರಿಸಿದ್ದರು. ಇದರಿಂದ ಮತ್ತೆ ಗಲಾಟೆ ಉಂಟಾಗುವಂತಾಗಿತ್ತು.

ಸದ್ಯ ಭಕ್ತರ ದರ್ಶನಕ್ಕೆ ಯಾವುದೇ ಅಡ್ಡಿಪಡಿಸದಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ವೈಯಕ್ತಿಕ ಪೂಜೆ ಸಲ್ಲಿಕೆ ಅಥವಾ ನಿರಾಕರಣೆ ವಿಚಾರವಾಗಿ ಸುಪ್ರೀಂಕೋರ್ಟ್‌ನಿಂದ ಪ್ರತ್ಯೇಕ ಆದೇಶ ತಂದಲ್ಲಿ ಈ ಸಂಬಂಧ ಪರಿಶೀಲಿಸೋದಾಗಿ ತಿಳಿಸಿದ್ದಾರೆ. ಭಕ್ತರಿಗೆ ಆತ್ಮಲಿಂಗ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ದೇವಸ್ಥಾನ ಸಮಿತಿ ಸಂತಸ ವ್ಯಕ್ತಪಡಿಸಿದೆ.

ದೇವಸ್ಥಾನ ಆಡಳಿತ ಮಂಡಳಿ ಹಾಗೂ ಉಪಾಧಿವಂತರ ನಡುವಿನ ಗಲಾಟೆಯಿಂದಾಗಿ ಆತ್ಮಲಿಂಗ ದರ್ಶನಕ್ಕೆ ಭಕ್ತರಿಗೆ ಎದುರಾಗಿದ್ದ ಅಡ್ಡಿ ನಿವಾರಣೆಯಾದಂತಾಗಿದೆ. ಆತ್ಮಲಿಂಗ ದರ್ಶನಕ್ಕೆಂದೇ ದೂರದೂರುಗಳಿಂದ ಆಗಮಿಸುತ್ತಿದ್ದ ಭಕ್ತರಿಗೆ ಇದು ಸಂತಸ ಮೂಡಿಸಿದ್ದಂತೂ ಸತ್ಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.