ಮಾಜಿ ಶಾಸಕ ಡಾ. ಎಂ ಪಿ ಕರ್ಕಿ ವಿಧಿವಶ : ಸಿಎಂ ಸೇರಿ ಗಣ್ಯರಿಂದ ಸಂತಾಪ

author img

By

Published : Oct 18, 2021, 10:11 PM IST

ಡಾ. ಎಂ.ಪಿ.ಕರ್ಕಿ

ಉತ್ತರ ಕನ್ನಡ ಜಿಲ್ಲೆ ಹಾಗೂ ರಾಜ್ಯದಲ್ಲಿ ಜನಸಂಘ ಮತ್ತು ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಕರ್ಕಿಯವರ ಪಾತ್ರ ಮಹತ್ವದ್ದಾಗಿತ್ತು. ಶಿಕ್ಷಣ ಕ್ಷೇತ್ರ ಹಾಗೂ ಸಾಮಾಜಿಕ ಸೇವೆಯಲ್ಲಿ ಇವರು ಮಾಡಿರುವ ಸೇವೆ ಅನುಕರಣೀಯ..

ಕಾರವಾರ(ಉತ್ತರ ಕನ್ನಡ) : ಹೊನ್ನಾವರ ಕ್ಷೇತ್ರದಲ್ಲಿ 2 ಬಾರಿ ಶಾಸಕರಾಗಿ ಎಸ್​​ಡಿಎಂ ಕಾಲೇಜಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಮಾಜಿ ಶಾಸಕ ಡಾ. ಎಂ ಪಿ ಕರ್ಕಿ(87) ಇಹಲೋಕ ತ್ಯಜಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೆ ವೈದ್ಯಕೀಯ, ರಾಜಕೀಯ, ಶೈಕ್ಷಣಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿ ಸರಳತೆಗೆ ಪ್ರತಿರೂಪವಾಗಿದ್ದರು.

ಜನಸಂಘದ ಕಾಲದಿಂದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಾಗಿ ಪಕ್ಷದ ಅತ್ಯಂತ ಕಷ್ಟ ಕಾಲದಲ್ಲಿ 18 ವರ್ಷಗಳ ಕಾಲ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಒಮ್ಮೆ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

1983 ಹಾಗೂ 1994ರಲ್ಲಿ ಎರಡು ಬಾರಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಇವರು ಶಾಸಕರಾಗಿದ್ದ ವೇಳೆ ಕೈಗೊಂಡ ಕೆಲವು ಯೋಜನೆಗಳು ಇಂದಿಗೂ ಅವರ ಹೆಸರನ್ನು ನೆನಪಿಸುವಂತೆ ಮಾಡಿವೆ. ಶಿಕ್ಷಣ ಕ್ಷೇತ್ರದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ 40 ವರ್ಷಗಳವರೆಗೆ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ, ಪುತ್ರಿ, ಪುತ್ರ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಸಂತಾಪ ಸೂಚಿಸಿದ ಸಿಎಂ ಬೊಮ್ಮಾಯಿ, ಕಟೀಲು

ಉತ್ತರ ಕನ್ನಡ ಜಿಲ್ಲೆ ಹಾಗೂ ರಾಜ್ಯದಲ್ಲಿ ಜನಸಂಘ ಮತ್ತು ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಕರ್ಕಿಯವರ ಪಾತ್ರ ಮಹತ್ವದ್ದಾಗಿತ್ತು. ಶಿಕ್ಷಣ ಕ್ಷೇತ್ರ ಹಾಗೂ ಸಾಮಾಜಿಕ ಸೇವೆಯಲ್ಲಿ ಇವರು ಮಾಡಿರುವ ಸೇವೆ ಅನುಕರಣೀಯ. ಕರ್ಕಿ ಅವರ ನಿಧನದಿಂದ ಸಂಘ ಪರಿವಾರ ಒಬ್ಬ ಹಿರಿಯ ನಾಯಕನನ್ನು ಕಳೆದುಕೊಂಡಂತಾಗಿದೆ.

ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬದವರಿಗೆ ಕರುಣಿಸಲಿ ಎಂದು ಆ ದೇವರಲ್ಲಿ ಕೋರುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವರಾದ ಈಶ್ವರಪ್ಪ, ಅಶ್ವತ್ಥ್ ನಾರಾಯಣ್, ಗೋವಿಂದ ಕಾರಜೋಳ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.