ಪೇಜಾವರ ಶ್ರೀ ಭೇಟಿಯಾದ ಮುತಾಲಿಕ್: ಬಿಜೆಪಿಯ 25 ಹಿಂದೂ ಕಾರ್ಯಕರ್ತರಿಗೆ ಟಿಕೆಟ್‌ಗಾಗಿ ಒತ್ತಾಯ

author img

By

Published : Sep 22, 2022, 7:53 AM IST

Updated : Sep 22, 2022, 8:32 AM IST

pramod muthalik meets pejawar swamiji

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರನ್ನು ಶ್ರೀರಾಮ ಸೇನೆಯ ‌ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಉಡುಪಿ: ಶ್ರೀರಾಮ ಸೇನೆ ‌ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನಿನ್ನೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರನ್ನು ಭೇಟಿ ಮಾಡಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯ 25 ಸ್ಥಾನಗಳನ್ನು ಹಿಂದೂ ಕಾರ್ಯಕರ್ತರಿಗೆ ನೀಡುವಂತೆ ರಾಜ್ಯದ ನಾಯಕರ ಮನವೊಲಿಸಬೇಕೆಂದು ಒತ್ತಾಯಿಸಿದರು.

ಶ್ರೀಗಳ ಭೇಟಿಯ ಬಳಿಕ ಮಾತನಾಡಿದ ಪ್ರಮೋದ್ ಮುತಾಲಿಕ್, ಈ ಬಾರಿಯ ರಾಜ್ಯ ಚುನಾವಣೆಯಲ್ಲಿ 25 ಸ್ಥಾನಗಳನ್ನು ಹಿಂದೂ ಕಾರ್ಯಕರ್ತರಿಗೆ ನೀಡಬೇಕು. ಹಿಂದೂ ಕಾರ್ಯಕರ್ತರು, ಹೋರಾಟಗಾರರು, ಸಂಘಟಕರಿಗೆ ಅವಕಾಶ ನೀಡಬೇಕು. ಕಾರ್ಯಕರ್ತರು ಶಾಸಕರಾಗಿ ಆಯ್ಕೆಯಾದರೆ ಹಿಂದುತ್ವದ ಬಗ್ಗೆ ಧ್ವನಿ ಎತ್ತುತ್ತಾರೆ. ಹಿಂದುತ್ವಕ್ಕೆ ಆದ್ಯತೆ ನೀಡುತ್ತಾರೆ. ಬಿಜೆಪಿಯಲ್ಲಿ ಹಿಂದುತ್ವದ ಕಾಳಜಿಯ ಕೊರತೆ ಇದೆ ಎಂದರು.

ಪೇಜಾವರ ಶ್ರೀಗಳ ಭೇಟಿ ಬಳಿಕ ಮಾತನಾಡಿದ ಪ್ರಮೋದ್ ಮುತಾಲಿಕ್

ಇದನ್ನೂ ಓದಿ: ಕಾಂಗ್ರೆಸ್ ಏನೇ ತಿಪ್ಪರಲಾಗ ಹಾಕಿದರೂ ಮತ್ತೆ ಅಧಿಕಾರಕ್ಕೆ ಬರಲ್ಲ: ಬಿಎಸ್​ವೈ

ಈ ಸಮಸ್ಯೆ ನಿವಾರಿಸಲು ಮುಂದಿನ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಟಿಕೆಟ್ ಕೊಡಲೇಬೇಕು ಎಂಬ ಹಕ್ಕೊತ್ತಾಯ ಮಾಡುತ್ತೇನೆ. ಬಿಜೆಪಿಯಲ್ಲಿ ಟಿಕೆಟ್ ಕೇಳುವುದು ನಮ್ಮ ಹಕ್ಕು. ಬಿಜೆಪಿ ಪಕ್ಷದ ಸಲುವಾಗಿ ನಾವು ಬೆವರು, ರಕ್ತ ಸುರಿಸಿದ್ದೇವೆ. ಕಾರ್ಯಕರ್ತರ ಈ ಬೇಡಿಕೆಯನ್ನು ಪಕ್ಷ ಪೂರೈಸಲೇಬೇಕು. ಈ ಬಗ್ಗೆ ಪೇಜಾವರ ಶ್ರೀಗಳ ಗಮನ ಸೆಳೆದಿದ್ದೇನೆ. ಸಂಬಂಧಪಟ್ಟವರ ಜೊತೆ ಮಾತನಾಡುವುದಾಗಿ ಶ್ರೀಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬಿಜೆಪಿಗೆ ಹೊರತಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ನಿರ್ಧಾರ ಮಾಡಿಲ್ಲ. ಬಿಜೆಪಿಯವರು ಟಿಕೆಟ್ ಕೊಟ್ಟೇ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಇತ್ತೀಚೆಗೆ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಯಿಂದ ರಾಜ್ಯದಲ್ಲಿ ಎಲ್ಲರಿಗೂ ಅಸಮಾಧಾನ ಉಂಟಾಗಿದೆ. ಈ ಅಸಮಾಧಾನವನ್ನು ಸರಿಮಾಡಲು ನಾವು 25 ಮಂದಿಗೆ ಅವಕಾಶ ಕೇಳುತ್ತಿದ್ದೇವೆ. ನಿಮಗೆ ಅಧಿಕಾರ ನಡೆಸಲು ಬೇಕಾದಷ್ಟು ಸೀಟು ಗೆಲ್ಲಿಸಿ ಕೊಡುವ ಸಾಮರ್ಥ್ಯ ಹಿಂದೂ ಕಾರ್ಯಕರ್ತರಿಗೆ ಇದೆ. ಇದೇ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು, ಇಂತಹ ವ್ಯಕ್ತಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಲ್ಲ. ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕೆಲಸ ಮಾಡದವರಿಗೆ ಯಾಕ್ರೀ ಟಿಕೆಟ್ ಕೊಡಬೇಕು, ನನಗೆ ನಂಬರ್ ಬೇಕು, ನಮ್ಮ ಸರ್ಕಾರ ಬರಬೇಕು: ಡಿಕೆಶಿ

ಕೋಲಾರದ ಮಾಲೂರಿನಲ್ಲಿ ದಲಿತ ಬಾಲಕನಿಗೆ ಬಹಿಷ್ಕಾರ, ದಂಡ ವಿಚಾರವಾಗಿ ಮಾತನಾಡಿದ ಅವರು, ದಲಿತ ಬಾಲಕನಿಗೆ ಹಿಂಸೆ ನೀಡಿರುವುದು, ದಂಡ ಹಾಕಿರುವುದು ಅಕ್ಷಮ್ಯ ಅಪರಾಧ. ದೇವರಿಗೆ ಮಡಿ ಮೈಲಿಗೆ ಇರೋದಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷವಾದ ಬಳಿಕವೂ ದಲಿತರ ಮೇಲೆ ಈ ರೀತಿ ಕ್ರೌರ್ಯ, ಹಿಂಸೆ ನೀಡುವುದು ಸರಿಯಲ್ಲ. ದಲಿತ ಬಾಲಕನಿಗೆ ದಂಡ ಹಾಕಿದವರ ಮೇಲೆ ಕಠಿಣ ಕ್ರಮ ಕೈಗೊಂಡು ಶಿಕ್ಷಿಸಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ಶ್ರೀರಾಮ ಸೇನೆಯ ಕಾರ್ಯಕರ್ತರು ಆ ಗ್ರಾಮಕ್ಕೆ ಹೋಗಿ ದಂಡ ಹಾಕಿದವರ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಬೆಂಗಳೂರಿಗೆ ತೆರಳಿದ ಬಳಿಕ ನಾನು ಕೂಡ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ದಲಿತ ಬಾಲಕ ದೇವರನ್ನು ಮುಟ್ಟಿದ ಆರೋಪ: ಮೇಲ್ಜಾತಿಯ ಕೆಲವರಿಂದ ಬೆದರಿಕೆ

ಹಿಂದೂಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ನಾನು ಪೇಜಾವರ ಶ್ರೀಗಳೊಂದಿಗೆ ಮಾತನಾಡಿದ್ದೇನೆ. ಹಿಂದೂ ಕಾರ್ಯಕರ್ತರ ಮೇಲೆ ಹಾಕಿರುವ ರೌಡಿಶೀಟ್, ಕೇಸ್​ಗಳು, ಗುಂಡಾ ಕಾಯ್ದೆ ತೆರವು ಮಾಡಿಲ್ಲ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಮೂರು ವರ್ಷ ಕಳೆಯಿತು. ಕಳೆದ 10 ವರ್ಷಗಳಿಂದ ಹಿಂದೂ ಕಾರ್ಯಕರ್ತರು ಕೋರ್ಟ್​ಗೆ ಅಲೆಯುತ್ತಿದ್ದಾರೆ. ಕಾರ್ಯಕರ್ತರ ನೋವನ್ನು ಪೇಜಾವರ ಶ್ರೀಗಳ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಮಲೆನಾಡಿಗೆ ಉಗ್ರರ ನಂಟು, ಬೆಚ್ಚಿಬಿದ್ದ ಜನತೆ: ಬಂಧಿತರಿಂದ ಮಹತ್ವದ ಮಾಹಿತಿ

ಶಿವಮೊಗ್ಗ ಶಂಕಿತ ಉಗ್ರರ ಬಂಧನ ವಿಚಾರವಾಗಿ ಮಾತನಾಡಿದ ಮುತಾಲಿಕ್, ಯಾಸೀನ್ ಭಟ್ಕಳ್ ಶಿವಮೊಗ್ಗಕ್ಕೆ ಬಂದು ಹೋದ ಬಗ್ಗೆ ಆರು ವರ್ಷದ ಹಿಂದೆಯೇ ನಾನು ದಾಖಲೆ ಕೊಟ್ಟಿದ್ದೆ. ಇದೇ ಬಿಜೆಪಿ ಸರ್ಕಾರ ಅದನ್ನು ನಿರ್ಲಕ್ಷ್ಯ ಮಾಡಿತ್ತು. ಇನ್ನೊಮ್ಮೆ ದಾಖಲೆ ಸಹಿತ ನಾನು ಸುದ್ದಿಗೋಷ್ಠಿ ಮಾಡುತ್ತೇನೆ. ಅಂದು ನಾನು ಮಾಡಿದ ಆರೋಪಕ್ಕೂ ಈಗಿನ ಘಟನೆಗೂ ಏನು ಸಂಬಂಧವಿದೆ ಎಂದು ಬಹಿರಂಗಪಡಿಸುತ್ತೇನೆ. ಗೃಹ ಸಚಿವರನ್ನು ಭೇಟಿಯಾಗಿ ಅವರ ನಿರ್ಲಕ್ಷ್ಯದ ಬಗ್ಗೆ ಗಮನ ಸೆಳೆಯುತ್ತೇನೆ ಎಂದರು.

Last Updated :Sep 22, 2022, 8:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.