25 ವರ್ಷಗಳಲ್ಲಿ ಉಡುಪಿ ಜಿಲ್ಲೆ ವೇಗವಾಗಿ ಅಭಿವೃದ್ಧಿ ಸಾಧಿಸಿದೆ: ರಾಜ್ಯಪಾಲ ಥಾವರ್​​ ಚಂದ್​ ಗೆಹ್ಲೋಟ್​

author img

By

Published : Aug 26, 2022, 10:45 AM IST

Silver Jubilee Celebrations in Udupi

ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲೆ ರಜತ ಮಹೋತ್ಸವ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್​​ ಚಂದ್​ ಗೆಹ್ಲೋಟ್​ ಉದ್ಘಾಟಿಸಿದರು.

ಉಡುಪಿ: ಜಿಲ್ಲೆಗೆ ಇದು ನನ್ನ 2ನೇ ಭೇಟಿಯಾಗಿದೆ. ಇಲ್ಲಿಗೆ ನಾನು ಪದೇ ಪದೆ ಭೇಟಿ ನೀಡಲು ಇಚ್ಛಿಸುತ್ತೇನೆ. ಏಕೆಂದರೆ ಇದು ದೇವತೆಗಳ ನಾಡು. ಅಸ್ತಿತ್ವಕ್ಕೆ ಬಂದ 25 ವರ್ಷಗಳಲ್ಲಿ ಉಡುಪಿ ಜಿಲ್ಲೆ ಅತ್ಯಂತ ವೇಗದ ಅಭಿವೃದ್ಧಿ ಸಾಧಿಸಿದೆ. ಇಲ್ಲಿನ ಮೂಲಸೌಕರ್ಯಗಳು ವೇಗವಾಗಿ ಬೆಳೆದಿದೆ. ಇದಕ್ಕೆ ಇಲ್ಲಿಗೆ ಬಂದ ಎಲ್ಲ ಪ್ರಾಮಾಣಿಕ ಅಧಿಕಾರಿಗಳು, ಜನಪ್ರತಿನಿಧಿಗಳ ಕೊಡುಗೆ ಇದೆ ಎಂದು ರಾಜ್ಯಪಾಲ ಥಾವರ್​​ ಚಂದ್​ ಗೆಹ್ಲೋಟ್​ ಹೇಳಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಭೌಗೋಳಿಕವಾಗಿ ಬೇರ್ಪಟ್ಟು ಹೊಸ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ಉಡುಪಿ ಜಿಲ್ಲೆಗೆ 25 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲೆ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉಡುಪಿ ಜಿಲ್ಲೆಯ ರಜತ ಮಹೋತ್ಸವ ಕಾರ್ಯಕ್ರಮ

ಉಡುಪಿಯಲ್ಲಿ ಮಹಿಳಾ ಪ್ರಾಬಲ್ಯ: ಮಲ್ಪೆಯಲ್ಲಿರುವ ಸರ್ವಋತು ಮೀನುಗಾರಿಕಾ ಬಂದರು ಪ್ರದೇಶಕ್ಕೆ ನಾನಿಂದು ಭೇಟಿ ನೀಡಿದ್ದೇನೆ. ಸುಮಾರು 2 ಲಕ್ಷ ಮೀನುಗಾರರಿಗೆ ಇದು ಉದ್ಯೋಗ ನೀಡಿದೆ. ಮಲ್ಪೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವಂತೆ ಸಲಹೆ ನೀಡಿದ ರಾಜ್ಯಪಾಲರು ಇದಕ್ಕೆ ಯಾವುದೇ ಸಹಕಾರ ಅಪೇಕ್ಷಿಸಿದರೆ ನಿಮ್ಮೊಂದಿಗೆ ಸಹಕರಿಸಲು ಸಿದ್ಧನಿದ್ದೇನೆ ಎಂದರು. ಉಡುಪಿ ಜಿಲ್ಲೆಯಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಅಧಿಕವಿದೆ. ದೇಶದ ಯಾವುದೇ ರಾಜ್ಯ ಹಾಗೂ ಜಿಲ್ಲೆಗಿಂತ ಅಧಿಕವಾಗಿರುವ ಈ ಪರಂಪರೆ ಮುಂದುವರಿದುಕೊಂಡು ಹೋಗಲು ಜಿಲ್ಲೆಯ ಎಲ್ಲ ಜನತೆ ಸಹಕರಿಸಬೇಕು ಎಂದರು.

ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿ, ಅಂದಿನ ಜನರ ಬಹುಕಾಲದ ಕನಸು ನನಸು ಮಾಡಿದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರಸ್ತುತ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹಾಗೂ 1997ಲ್ಲಿ ಶಾಸಕರಾಗಿದ್ದ ರಾಜ್ಯದ ಮಾಜಿ ಮುಖಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಅವರು ಸಭೆ ಉದ್ದೇಶಿಸಿ ಮಾತನಾಡಿದರು.

ಜಿಲ್ಲೆ ಅಸ್ತಿತ್ವಕ್ಕೆ ಬಂದಾಗ ಡಿಸಿ ಆಗಿದ್ದ ಗೋಪಾಲನ್​ ಉಪಸ್ಥಿತಿ: 25 ವರ್ಷಗಳ ಹಿಂದೆ ಜಿಲ್ಲೆ ಅಸ್ತಿತ್ವಕ್ಕೆ ಬಂದಾಗ ಪ್ರಥಮ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಗೋಪಾಲನ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇವರೊಂದಿಗೆ ದಾನಿಗಳಾದ ಮಾಹೆ ವಿವಿ ಕುಲಪತಿ ಲೆ.ಜ.(ಡಾ.) ವೆಂಕಟೇಶ್, ಉದ್ಯಮಿ ಜಿ.ಶಂಕರ್, ನಿಟ್ಟೆ ವಿವಿಯ ಎನ್.ವಿಶಾಲ್ ಹೆಗ್ಡೆ ಅವರನ್ನು ರಜತೋತ್ಸವ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾಪು ಶಾಸಕ ಲಾಲಾಜಿ ಮೆಂಡನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಉಪಸ್ಥಿತರಿದ್ದರು.

ವೈಭವದ ಮೆರವಣಿಗೆ: ಉಡುಪಿ ಜಿಲ್ಲೆ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ನಗರದ ಬೋರ್ಡ್ ಹೈಸ್ಕೂಲ್‌ನಿಂದ ಅಜ್ಜರ ಕಾಡು ಕ್ರೀಡಾಂಗಣದವರೆಗೆ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಚಾಲನೆ ನೀಡಿದರು. ಒಳಕಾಡು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಹುಲಿ ಕುಣಿತದ ಮೂಲಕ ಮೆರವಣಿಗೆಗೆ ಆರಂಭಗೊಂಡಿತು. ಅಲ್ಲಿಂದ ಹೊರಟ ಮೆರವಣಿಗೆ ಕೆಎಂ ಮಾರ್ಗ, ಜೋಡುಕಟ್ಟೆ ಮಾರ್ಗವಾಗಿ ಅಜ್ಜರಕಾಡು ತಲುಪಿತು.

ಇದನ್ನು ಓದಿ:ಕೊಡಗಿನಲ್ಲಿ ಆರದ ಮೊಟ್ಟೆ ಕಾವು..ಮಡಿಕೇರಿಯಲ್ಲಿ ಪೊಲೀಸರಿಂದ ಪಥಸಂಚಲನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.