ನೋಡಿವಳಂದಾವ.. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಮಲ್ಲಾಘಟ್ಟ ಕೆರೆ

author img

By

Published : Nov 26, 2021, 11:27 AM IST

Updated : Nov 26, 2021, 11:53 AM IST

Mallaghatta Lake attraction, Mallaghatta Lake tourist attraction, popular tourist attraction of Mallaghatta Lake, ಕೈ ಬೀಸಿ ಕರೆಯುತ್ತಿರುವ ಮಲ್ಲಾಘಟ್ಟ ಕೆರೆ, ಮಲ್ಲಾಘಟ್ಟ ಕೆರೆ ಆಕರ್ಷಣೆ, ಪ್ರವಾಸಿಗರ ಆಕರ್ಷಣೆ ತಾಣಾ ಮಲ್ಲಾಘಟ್ಟ ಕೆರೆ,

ಮಲ್ಲಾಘಟ್ಟಕೆರೆ ಕೋಡಿ ಬಿದ್ದ ಸಂದರ್ಭದಲ್ಲಿ ಸಂಜೆ ಸೂರ್ಯಾಸ್ತಮಯವನ್ನು ನೋಡುವುದು ಎಂದರೆ ಎಲ್ಲಿಲ್ಲದ ಆನಂದ. ಸಂಜೆಯಾಗುತ್ತಿದ್ದಂತೆ ಸೂರ್ಯ ಮುಳುಗುವ ಸಮಯದಲ್ಲಿ ಕೆಂಪು ಬೆಂಕಿಯುಂಡೆಯೋಪಾದಿಯಲ್ಲಿ ನೀರಿನೊಳಕ್ಕೆ ಇಳಿದಂತೆ ಭಾಸವಾಗಿ ಪ್ರವಾಸಿಗರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಈ ಸಂದರ್ಭದಲ್ಲಿ ನೂರಾರು ಜನ ಆ ದೃಶ್ಯವನ್ನು ತಮ್ಮ ಮೊಬೈಲ್‍ಗಳಲ್ಲಿ ಸೆರೆಹಿಡಿಯುತ್ತಾರೆ.

ತುಮಕೂರು: ಜಿಲ್ಲೆಯಲ್ಲಿ ಈ ಬಾರಿ ಭರ್ಜರಿ ಮಳೆಯಾಗಿದೆ. ಇನ್ನೊಂದೆಡೆ ಹೇಮಾವತಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಹೀಗಾಗಿ ಜಿಲ್ಲೆಯ ಬಹುತೇಕ ಎಲ್ಲ ಕೆರೆಗಳು ತುಂಬಿ ತುಳುಕುತ್ತಿವೆ. ಅದರಲ್ಲೂ ತುರುವೇಕೆರೆ ತಾಲೂಕಿನ ಮಲ್ಲಾಘಟ್ಟ ಕೆರೆ ಕೊಡಿ ಜಲಪಾತದ ಸ್ವರೂಪದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ನಿತ್ಯ ನೂರಾರು ಪ್ರವಾಸಿಗರು ಮಲ್ಲಾಘಟ್ಟ ಕೆರೆಗೆ ಭೇಟಿ ನೀಡುತ್ತಿದ್ದು, ಕೆರೆಯಲ್ಲಿ ನಿರ್ಮಾಣವಾಗಿರುವ ಸಣ್ಣಪುಟ್ಟ ಜಲಪಾತಗಳಲ್ಲಿ ಮಿಂದೇಳುತ್ತಿದ್ದಾರೆ. ಪ್ರತಿವರ್ಷ ಈ ಕೆರೆಗೆ ಹೇಮಾವತಿ ಜಲಾಶಯದಿಂದ ನೀರನ್ನು ಹರಿಸಲಾಗುತ್ತದೆ. ಸುತ್ತಮುತ್ತಲ ನೂರಾರು ಎಕರೆ ತೆಂಗಿನ ತೋಟಗಳಿಗೆ ಈ ಕೆರೆಯ ನೀರಿನ ಸಹಾಯದಿಂದ ನಳನಳಿಸುತ್ತವೆ. ಅದೇ ರೀತಿ, ಬೃಹತ್ತಾದ ಕೆರೆ ಕೋಡಿ ಬಿದ್ದ ನಂತರ ಮುಂದಿನ ಐದಾರು ಕೆರೆಗಳಿಗೆ ಹರಿದು ಹೋಗುತ್ತದೆ.

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಮಲ್ಲಾಘಟ್ಟ ಕೆರೆ

ತುಮಕೂರು ತಾಲೂಕು ಗುಬ್ಬಿ, ಚೆನ್ನರಾಯಪಟ್ಟಣ, ತಿಪಟೂರು ಸೇರಿದಂತೆ ಸುತ್ತಮುತ್ತಲ ತಾಲೂಕಿನಿಂದ ಈ ಮಲ್ಲಾಘಟ್ಟ ಕೆರೆ ನೀರಿನಲ್ಲಿ ಆಟವಾಡಲು ಪ್ರವಾಸಿಗರು ಆಗಮಿಸುತ್ತಾರೆ. ಇನ್ನು ಕೆರೆಯ ಸಮೀಪ ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿ ಯಾವುದೇ ರೀತಿಯ ಅನಾಹುತಗಳು ಆಗದಂತೆ ಮುಂಜಾಗ್ರತ ಕ್ರಮ ವಹಿಸುತ್ತಾರೆ.

ಕೆರೆ ಇತಿಹಾಸ: ಮಲ್ಲಾಘಟ್ಟ ಕೆರೆ ಸುಮಾರು 250 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, ಒಂದು ಬಾರಿ ಕೆರೆ ತುಂಬಿತು ಎಂದರೆ ಸುಮಾರು 580 ಎಂಸಿಎಫ್‍ಟಿ ನೀರು ಸಂಗ್ರಹವಾಗುತ್ತದೆ. ಇತ್ತೀಚೆಗಷ್ಟೇ ಕೋಡಿ ಕಾಮಗಾರಿ ನವೀಕರಿಸಲಾಗಿದೆ. ಈ ಕೆರೆಯ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಗಂಗಾಧರೇಶ್ವರ ದೇವಾಲಯಗಳಿವೆ.

ದಕ್ಷಿಣ ಭಾಗದ ಕೋಡಿಯಲ್ಲಿರುವ ಶ್ರೀ ಗಂಗಾಧರೇಶ್ವರ ಸ್ವಾಮಿಯ ದೇವಾಲಯ ಹಲವಾರು ವರ್ಷಗಳ ಹಿಂದೆ ಅಡಿಪಾಯವಿಲ್ಲದೇ ಬಂಡೆಯ ಮೇಲೆಯೇ ಕಟ್ಟಲಾಗಿತ್ತು. ದೇವರ ಗರ್ಭಗುಡಿಯ ಮುಖ್ಯ ದ್ವಾರದ ಬಲಭಾಗದ ಗೋಡೆಯಲ್ಲಿ ಕಿರುಬೆರಳಿನಾಕಾರದ ಕಿಂಡಿಯಿದ್ದು, ಗರ್ಭಗುಡಿಯ ಹಿಂಭಾಗದ ಗೋಡೆಯಲ್ಲೂ ಸಮಾನಾಂತರವಾಗಿ ಮತ್ತೊಂದು ಕಿಂಡಿಯಿದೆ. ಮುಂದಿನ ಕಿಂಡಿಯಿಂದ ನೋಡಿದರೆ ಸುಮಾರು 8 ಕಿ.ಮೀ. ಅಂತರದಲ್ಲಿ ಬೆಟ್ಟದ ಮೇಲಿರುವ ಶ್ರೀ ಕಂಚೀರಾಯಸ್ವಾಮಿ ದೇವಾಲಯದ ಶಿಖರ ಕಾಣುತ್ತಿತ್ತಂತೆ.

ಇಂದು ಮರಗಿಡಗಳು ದೊಡ್ಡವಾಗಿ ಬೆಳೆದಿರುವುದರಿಂದ ಕೇವಲ ಕೆಲವೇ ದೂರದಲ್ಲಿರುವ ಮಂಟಪ ಮಾತ್ರ ಇಂದು ಕಾಣುತ್ತಿದೆ. ಇಲ್ಲಿ ಪ್ರತಿ ದಿನ ಗಂಗಾಧರೇಶ್ವರನಿಗೆ ಪೂಜೆ ನಡೆಯುತ್ತಿದೆ. ತಾಲೂಕಿನಾದ್ಯಂತ ನೂರಾರು ಜನ ಭಕ್ತರು ನಿತ್ಯ ಈ ಕ್ಷೇತ್ರಕ್ಕೆ ಭೇಟಿ ನೀಡಿ ಈ ಕೆರೆಯಲ್ಲಿ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವರು. ತಾಲೂಕಿನ ವಿವಿಧ ಗ್ರಾಮಗಳ ದೇವರುಗಳ ಮಡಿವಂತಿಕೆಗೆ ಭಂಗಬಂದ ಸಂದರ್ಭದಲ್ಲಿ ದೇವರ ವಿಗ್ರಹ ಹಾಗೂ ದೇವರುಗಳ ವಸ್ತ್ರಗಳನ್ನು ಸ್ವಚ್ಛಗೊಳಿಸಿ ಪುಣ್ಯೇವು ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಪ್ರತಿದಿನ ಇಲ್ಲಿ ನಡೆಯುತ್ತಿರುತ್ತವೆ.

Last Updated :Nov 26, 2021, 11:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.