ತುಮಕೂರು ಜಿಲ್ಲೆಯಲ್ಲಿ ಹುಲಿ ಮೃತದೇಹ ಪತ್ತೆ: ಸಾವಿನ ಸುತ್ತ ಅನುಮಾನಗಳ ಹುತ್ತ

author img

By

Published : Feb 14, 2023, 12:05 PM IST

Updated : Feb 14, 2023, 3:02 PM IST

Tiger dead body

ವಾರದ ಹಿಂದೆಯೇ ಜಿಲ್ಲೆಯಲ್ಲಿ ಹುಲಿ ಓಡಾಟದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭ್ಯವಾಗಿತ್ತು. ಇದೀಗ ಹುಲಿಯೊಂದರ ಮೃತದೇಹ ಪತ್ತೆಯಾಗಿದೆ.

ತುಮಕೂರು: ಸುಮಾರು ನಾಲ್ಕು ವರ್ಷದ ಹುಲಿ ಮೃತದೇಹ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅಂಕಸಂದ್ರ ಮೀಸಲು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಸಿಮೆಂಟ್ ಪೈಪ್ ಒಳಗೆ ಹುಲಿಯ ಮೃತದೇಹ ಕಂಡುಬಂದಿದ್ದು, ಇದರ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹುಲಿ ಇರುವಿಕೆಯ ಹಾಗೂ ಸಂಚಾರದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭ್ಯವಾಗಿದೆ. ಈವರೆಗೂ ಜಿಲ್ಲೆಯಲ್ಲಿ ಎಲ್ಲಿಯೂ ಹುಲಿ ಪತ್ತೆಯಾಗಿರಲಿಲ್ಲ. ಕಳೆದ ಒಂದು ವಾರದಿಂದ ಸುಮಾರು ನಾಲ್ಕು ವರ್ಷದ ಹುಲಿ ಓಡಾಡುತ್ತಿದೆ ಎಂಬ ಮಾಹಿತಿ ಅರಣ್ಯ ಇಲಾಖೆಗೂ ಲಭ್ಯವಾಗಿತ್ತು. ಅಲ್ಲದೇ ಈ ಬಗ್ಗೆ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಪರಿಶೀಲನೆ ನಡೆಸಿದ್ದರು.

ಇದೀಗ ಹುಲಿಯ ಮೃತದೇಹ ಪತ್ತೆಯಾಗಿದ್ದು, ಭದ್ರಾ ಅಭಯಾರಣ್ಯದಿಂದ ವೈದ್ಯರು ಸ್ಥಳಕ್ಕೆ ಬಂದು ಶವ ಪರೀಕ್ಷೆ ನಡೆಸಲಿದ್ದಾರೆ. ನಂತರವಷ್ಟೇ ಹುಲಿ ಸಾವಿನ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.

ಮಡಿಕೇರಿಯಲ್ಲಿ ಇಬ್ಬರನ್ನು ಬಲಿ ಪಡೆದ ಹುಲಿ: ಕೊಡಗು ಜಿಲ್ಲೆಯಲ್ಲಿ ಕೇವಲ 24 ಗಂಟೆಗಳಲ್ಲಿ ಹುಲಿಯೊಂದು ತಾತ ಹಾಗೂ ಮೊಮ್ಮಗನನ್ನು ಬಲಿ ಪಡೆದಿರುವ ಘಟನೆ ಒಂದು ದಿನದ ಹಿಂದೆಯಷ್ಟೆ ನಡೆದಿತ್ತು. ಕುಟ್ಟ ಗ್ರಾಮದ ಪಲ್ಲೇರಿಯಲ್ಲಿ ಕಾಫಿ ತೋಟದ ಮನೆಯ ಮುಂದೆ ಆಟವಾಡುತ್ತಿದ್ದ ಚೇತನ್​ ಎನ್ನುವ 12 ವರ್ಷದ ಬಾಲಕನ ಮೇಲೆ ಹುಲಿ ದಾಳಿ ಮಾಡಿ, ಬಾಲಕನನ್ನು ಕೊಂದು ಹಾಕಿತ್ತು. ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹುಲಿ ದಾಳಿಯಿಂದ ಸಾವನ್ನಪ್ಪಿದ್ದ ಮೊಮ್ಮಗನ ಶವವನ್ನು ನೋಡಲು ಬಂದ ತಾತನ ಮೇಲೆಯೂ ಹುಲಿ ದಾಳಿ ಮಾಡಿ, ಕೊಂದು ಹಾಕಿತ್ತು.

ರಾಜು ಎಂಬವರು ಸಾವನ್ನಪ್ಪಿರುವ ಮೊಮ್ಮಗನನ್ನು ನೋಡಲು ನಿನ್ನೆ ಮುಂಜಾನೆ ಮನೆಯಿಂದ ಹೊರಬಂದ ವೇಳೆ ಹುಲಿ ದಾಳಿ ಮಾಡಿ ಎಳೆದೊಯ್ದಿತ್ತು. ತಲೆ ಭಾಗಕ್ಕೆ ಹುಲಿ ಕಚ್ಚಿದ್ದ ಕಾರಣ ರಾಜು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಮನುಷ್ಯರ ಮೇಲೆ ದಾಳಿ ಮಾಡಿದ್ದು, ಜಿಲ್ಲೆಯಲ್ಲಿ ಭಯದ ವಾತಾವರಣವನ್ನು ನಿರ್ಮಿಸಿದೆ. ಇಬ್ಬರನ್ನು ಬಲಿ ಪಡೆದಿರುವ ನರಭಕ್ಷಕ ಹುಲಿಯ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು, ಕಾರ್ಯಾಚರಣೆ ವೇಳೆಯೂ ಹುಲಿ ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಭಯ ಹುಟ್ಟುಹಾಕಿದೆ.

ಚಾಮರಾಜನಗರದಲ್ಲಿ ಹುಲಿ ಕಳೇಬರ ಪತ್ತೆ: ಇತ್ತೀಚೆಗೆ ಚಾಮರಾಜನಗರದಲ್ಲಿ ಕೆರೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿಯ ಕಳೇಬರ ಪತ್ತೆಯಾಗಿತ್ತು. ರೈತರೊಬ್ಬರು ತಮ್ಮ ಜಾನುವಾರುಗಳಿಗೆ ಕೆರೆಯಲ್ಲಿ ನೀರು ಕುಡಿಸಲು ಹೋಗಿದ್ದಾಗ ಹುಲಿ ಮೃತದೇಹ ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಅರಣ್ಯ ಇಲಾಖೆಗೆ ಮಾಹಹಿತಿ ನೀಡಿದ್ದರು. ಹುಲಿ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿರದ ಕಾರಣ, ಹುಲಿ ಸಾವಿನ ಸುತ್ತ ಅನುಮಾಗಳು ಹುಟ್ಟಿಕೊಂಡಿದ್ದವು.

ಇದನ್ನೂ ಓದಿ: 24 ಗಂಟೆಯೊಳಗೆ ಇಬ್ಬರನ್ನು ಬಲಿ ಪಡೆದ ಹುಲಿ.. ಬೆಚ್ಚಿಬಿದ್ದ ಮಡಿಕೇರಿ ಜನ

Last Updated :Feb 14, 2023, 3:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.