EXCLUSIVE: ಸಿದ್ದಗಂಗಾ ಮಠಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ ಕೇಂದ್ರ ಸರ್ಕಾರ
Updated on: Aug 27, 2022, 3:04 PM IST

EXCLUSIVE: ಸಿದ್ದಗಂಗಾ ಮಠಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ ಕೇಂದ್ರ ಸರ್ಕಾರ
Updated on: Aug 27, 2022, 3:04 PM IST
Medical college TO Siddaganga Matha: ತುಮಕೂರಿನ ಸಿದ್ದಗಂಗಾ ಮಠಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಸಿದ್ದಗಂಗಾ ಮಠ ಸಹ ಮೆಡಿಕಲ್ ಕಾಲೇಜು ಹೊಂದಿದ ಪ್ರತಿಷ್ಠಿತ ಮಠಗಳ ಸಾಲಿಗೆ ಸೇರಿದೆ.
ಬೆಂಗಳೂರು: ನಾಡಿನ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ತುಮಕೂರಿನ ಸಿದ್ದಗಂಗಾ ಮಠಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗವು 'ಸಿದ್ದಗಂಗಾ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗೆ ಮೊದಲ ವರ್ಷದ ಎಂಬಿಬಿಎಸ್ ತರಗತಿಗಳನ್ನು ಈ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಅನುಮತಿ ನೀಡಿದೆ.
ತುಮಕೂರಿನ ಸಿದ್ದಗಂಗಾ ಮಠವು ಮೆಡಿಕಲ್ ಕಾಲೇಜು ಪ್ರಾರಂಭಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಮತ್ತು ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿದ ನಂತರ ಎನ್.ಎಂ.ಸಿ (ರಾಷ್ಟ್ರೀಯ ವೈದ್ಯಕೀಯ ಆಯೋಗ) ಪ್ರಥಮ ಬ್ಯಾಚ್ನಲ್ಲಿ 150 ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಿ ಸಿದ್ದಗಂಗಾ ಮಠದ ಆಡಳಿತ ಮಂಡಳಿಗೆ ಪತ್ರ ಬರೆದಿದೆ.
ವೈದ್ಯಕೀಯ ಕಾಲೇಜು ಹೊಂದುವ ಮೂಲಕ ಸಿದ್ದಗಂಗಾ ಮಠ ಸಹ ಮೆಡಿಕಲ್ ಕಾಲೇಜು ಹೊಂದಿದ ಪ್ರತಿಷ್ಠಿತ ಮಠಗಳ ಸಾಲಿಗೆ ಸೇರಿದೆ. ಮೈಸೂರಿನ ಜೆಎಸ್ಎಸ್, ಸಿರಿಗೆರೆಯ ತರಳಬಾಳು, ಆದಿಚುಂಚನಗಿರಿ ಮತ್ತು ಚಿತ್ರದುರ್ಗದ ಬೃಹನ್ಮಠಗಳು ಈಗಾಗಲೇ ವೈದ್ಯಕೀಯ ಕಾಲೇಜುಗಳನ್ನು ನಡೆಸುತ್ತಿವೆ.
ಕಳೆದ ವರ್ಷ ರಾಜ್ಯ ಸರ್ಕಾರವು ಸಿದ್ದಗಂಗಾ ಮಠಕ್ಕೆ ಮೆಡಿಕಲ್ ಕಾಲೇಜ್ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ನಿರಪೇಕ್ಷಣಾ ಪತ್ರ ನೀಡಿತ್ತು. ಸಿದ್ದಗಂಗಾ ಮಠಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿದ್ದರಿಂದ ತುಮಕೂರು ಜಿಲ್ಲೆಗೆ ಒಟ್ಟು 3 ಮೆಡಿಕಲ್ ಕಾಲೇಜು ಸಿಕ್ಕಂತಾಗಿದೆ. ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ಸಂಸ್ಥೆಗೆ ಸೇರಿದ 2 ಮೆಡಿಕಲ್ ಕಾಲೇಜುಗಳು ಈಗಾಗಲೇ ಕಾರ್ಯಾರಂಭ ಮಾಡುತ್ತಿವೆ.
ಸಿದ್ದಗಂಗಾ ಮಠದಿಂದ ಮೆಡಿಕಲ್ ಕಾಲೇಜು ಆರಂಭಿಸಲು ಹಿರಿಯ ಶ್ರೀಗಳಾದ ಡಾ. ಶಿವಕುಮಾರ ಸ್ವಾಮೀಜಿಯವರು ಅಷ್ಟೊಂದು ಒಲವು ತೋರಿಸಿರಲಿಲ್ಲ. ಸಾವಿರಾರು ಬಡ ಮಕ್ಕಳಿಗೆ ಪ್ರಾಥಮಿಕ, ಪ್ರೌಢ ಶಿಕ್ಷಣ, ಕಾಲೇಜು, ಡಿಪ್ಲೋಮಾ ಮತ್ತು ಇಂಜನಿಯರಿಂಗ್ ಶಿಕ್ಷಣ ನೀಡುವುದರ ಬಗ್ಗೆ ಅವರು ಹೆಚ್ಚು ಒಲವು ಹೊಂದಿದ್ದರು. ಆದ್ದರಿಂದ ಮೆಡಿಕಲ್ ಕಾಲೇಜಿನತ್ತ ಹೆಚ್ಚು ಒಲವು ತೋರಿಸಿರಲಿಲ್ಲ. ಆದ್ರೆ ಪ್ರಸ್ತುತ ಕಾಲಮಾನದಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಅವಶ್ಯಕತೆ ಇರುವುದನ್ನು ಮನಗಂಡ ಈಗಿನ ಸಿದ್ದಗಂಗಾ ಶ್ರೀಗಳು ಮೆಡಿಕಲ್ ಕಾಲೇಜು ಪ್ರಾರಂಭಿಸಲು ಆಸಕ್ತಿ ವಹಿಸಿದ್ದರು. ಮಠದ ಅನುಯಾಯಿಗಳಾದ ಅನಿಲ್ ಕುಮಾರ್ ಅವರು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳ ಜೊತೆ ಮಠದ ಪರವಾಗಿ ವ್ಯವಹರಿಸಿ ಮೆಡಿಕಲ್ ಕಾಲೇಜು ಮಂಜೂರಾತಿ ದೊರೆಯಲು ಶ್ರಮವಹಿಸಿದ್ದಾರೆ.
(ಇದನ್ನೂ ಓದಿ:ಅನ್ನ-ಅಕ್ಷರ-ಅರಿವೆಂಬ ತ್ರಿವಿಧ ದಾಸೋಹದ ಸಂಕಲ್ಪ: ರಾಜ್ಯದ 2ನೇ ಸಿದ್ಧಗಂಗೆ ಕೊಪ್ಪಳದ ಗವಿಮಠ)
