ನಮ್ಮ ದೇಶದ ಆಂತರಿಕ ವಿಚಾರ ಬರೆಯಲು ಬಿಬಿಸಿ ಯಾರು?: ಸಚಿವ ಅಶ್ವತ್ಥ ನಾರಾಯಣ್ ಪ್ರಶ್ನೆ

author img

By

Published : Jan 25, 2023, 5:32 PM IST

Updated : Jan 25, 2023, 7:11 PM IST

minister ashwattha narayan

ಡಿಕೆಶಿಯವರು ವಿಧಾನಸೌಧವನ್ನು ಗೋಮೂತ್ರದಿಂದ ಶುದ್ಧ ಮಾಡುವ ಮೊದಲು ಗಂಗಾಜಲದಿಂದ ಸ್ನಾನ ಮಾತ್ರವಲ್ಲ, ತಮ್ಮ ಬುದ್ಧಿಯನ್ನೂ ಸ್ವಚ್ಛ ಮಾಡಿಕೊಳ್ಳಲಿ ಎಂದು ಸಚಿವ ಅಶ್ವತ್ಥ ನಾರಾಯಣ್ ತಿರುಗೇಟು ನೀಡಿದ್ದಾರೆ.

ಸಚಿವ ಅಶ್ವತ್ಥ ನಾರಾಯಣ್ ಸುದ್ದಿಗೋಷ್ಠಿ

ಶಿವಮೊಗ್ಗ: ನಮ್ಮ‌ ದೇಶದ ಆಂತರಿಕ ವಿಚಾರದ ಬಗ್ಗೆ ಕಥೆ ಬರೆಯಲು ಅವನ್ಯಾರು ಎಂದು ಬಿಬಿಸಿ ಕುರಿತು ಖಾರವಾಗಿ ಸಚಿವ ಅಶ್ವತ್ಥ ನಾರಾಯಣ್ ಪ್ರಶ್ನಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಬಿಸಿ ಇಂಡಿಯಾ: ದಿ ಮೋದಿ ಕ್ವೆಶ್ಚನ್ ಕಿರುಚಿತ್ರ ತಯಾರು ಮಾಡಿರುವ ಕುರಿತು ಪ್ರತಿಕ್ರಿಯಿಸಿ, ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ, ನ್ಯಾಯಾಲಯವಿದೆ. ನ್ಯಾಯಾಲಯ ಒಂದು ತೀರ್ಪನ್ನು ನೀಡಿದೆ. ಕಾಂಗ್ರೆಸ್​ನವರೇ ಅಧಿಕಾರದಲ್ಲಿದ್ದಾಗ ಏನು ಮಾಡಿದ್ರು, ಇವರಿಗೆ ನಾಚಿಗೆಯಾಗಬೇಕು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ನವರು ಬಿಬಿಸಿ ಮೊರೆ ಹೋಗುವುದು ನಾಚಿಗೇಡು‌ ಸಂಗತಿ. ನಮ್ಮ‌ ದೇಶದ ಪ್ರಧಾನಮಂತ್ರಿಗಳ ವಿರುದ್ಧದ ಕಿರುಚಿತ್ರವನ್ನು ಕಾಂಗ್ರೆಸ್ ವಿರೋಧಿಸಬೇಕಿತ್ತು. ಆದರೆ ಈ ಧೈರ್ಯವನ್ನು ಕಾಂಗ್ರೆಸ್ ತೋರುತ್ತಿಲ್ಲ ಎಂದು ಕಿಡಿಕಾರಿದರು. ಕುಟುಂಬ ರಾಜಕಾರಣಕ್ಕೆ ನಮ್ಮ ಪಕ್ಷದಲ್ಲಿ ಅವಕಾಶವಿಲ್ಲ. ಆರ್ಥಿಕವಾಗಿ ಚೀನಾಕ್ಕಿಂತ ಭಾರತ ಮುನ್ನಡೆಯಲ್ಲಿದೆ. ನಮ್ಮ ಸುತ್ತಮುತ್ತಲಿನ ದೇಶದ ಆರ್ಥಿಕ‌ ಸ್ಥಿತಿ ಹೇಗಿದೆ, ಹಾಲಿ ಆರ್ಥಿಕ‌ ಸ್ಥಿತಿಯಲ್ಲಿ ನಾವು ಐದನೇ ಸ್ಥಾನದಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಎರಡನೇ ಸ್ಥಾನಕ್ಕೆ ಬರಲಿದ್ದೇವೆ ಎಂದರು.

ಡಿಕೆಶಿ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗಿದೆ: ಅಧಿಕಾರಕ್ಕೆ ಬಂದರೆ ವಿಧಾನಸೌಧವನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಆಗಿದೆ. ಮೊದಲು ಗಂಗಾಜಲದಿಂದ ಸ್ನಾನ ಮಾತ್ರವಲ್ಲ, ತಮ್ಮ ಬುದ್ಧಿಯನ್ನು ಸ್ವಚ್ಛ ಮಾಡಿಕೊಳ್ಳಲಿ. ಭ್ರಷ್ಟಚಾರವನ್ನು ತಂದಿದ್ದೇ ಕಾಂಗ್ರೆಸ್. ಮಧ್ಯವರ್ತಿ ಹಾವಳಿ ತಡೆಯಲು ನಮ್ಮ ಸರ್ಕಾರ ಆನ್​ಲೈನ್ ವ್ಯವಸ್ಥೆ ಮಾಡುತ್ತಿದೆ. ಇದರಿಂದ ಡಿಜಿಟಲೀಕರಣ ಮಾಡಲಾಗುತ್ತಿದೆ.

ಅಧಿಕಾರದಲ್ಲಿ ಪಾರದರ್ಶಕತೆ ತರುವ ಪ್ರಯತ್ನ ಮಾಡಲಾಗಿದೆ. ಅಧಿಕಾರದ ದುರ್ಬಳಕೆ ಮಾಡಿಕೊಳ್ಳದೆ, ಜನರ ಪರವಾದ ಕೆಲಸ ಮಾಡುವುದನ್ನು ಬಿಜೆಪಿ ಮಾಡುತ್ತಿದೆ.‌ ಅಧಿಕಾರವನ್ನು ವಿಕೇಂದ್ರಿಕರಣ ಮಾಡಲು‌ ಪ್ರತಿಪಕ್ಷಗಳಿಂದ ಸಾಧ್ಯವಾಗಲಿಲ್ಲ. ಇದು ಬಿಜೆಪಿಯಿಂದ ಮಾತ್ರ ಸಾಧ್ಯ, ಭಯೋತ್ಪಾದನೆ ಹುಟ್ಟು ಹಾಕಿದ್ದೆ ಕಾಂಗ್ರೆಸ್. ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಾರ್ವಜನಿಕವಾಗಿ ಮಾತಾಡುವವರು ಹುಷಾರಾಗಿರಬೇಕು. ಬಹು ಸಂಖ್ಯೆಯಲ್ಲಿ‌ ಇರುವ ಸಿಎಂ ಸಮುದಾಯಕ್ಕೆ ಅಪಮಾನ ಮಾಡುತ್ತಿದ್ದಾರೆ. ಇದಕ್ಕೆ ಜನ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಗುಡುಗಿದರು.

ಸಮಾಜದಲ್ಲಿ ತುಷ್ಟೀಕರಣ ಮಾಡುವುದನ್ನು‌ ಬಿಡಬೇಕು. ಎಲ್ಲಾ ಧರ್ಮವನ್ನು ಬೆಂಬಲಿಸಿದ್ದು, ಗೌರವಿಸುವುದು ಭಾರತೀಯ ಧರ್ಮ. ಕಾಂಗ್ರೆಸ್​ನವರು ಮತಾಂತರ ತಡೆ, ಗೋಹತ್ಯೆ ನಿಷೇಧವನ್ನು ವಿರೋಧಿಸುತ್ತಾರೆ. ಹಿಜಾಬ್ ನಿಷೇಧವನ್ನು 1995ರಲ್ಲಿ ಮೊದಲು ಜಾರಿಗೆ ತಂದಿದ್ದು ಕಾಂಗ್ರೆಸ್​ನವರು. ಕಾಂಗ್ರೆಸ್​ನವರು ಮೊದಲು ಡಬಲ್ ಸ್ಟಾಂಡರ್ಡ್ ಬಿಡಬೇಕು. ಎಂದರು.

ಪಕ್ಷವನ್ನು ಪರಿಣಾಮಕಾರಿಯಾಗಿ ಸದೃಢವಾಗಿ ಮಾಡಲು ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಾಟ್ಸ್ಯಾಪ್ ಗ್ರೂಪ್, ಪೇಜ್ ಪ್ರಮುಖರ ಸಮಾವೇಶವನ್ನು ಜಿಲ್ಲೆಯಲ್ಲಿ ಮಾಡುವ ಮೂಲಕ ಬಿಜೆಪಿ ಕೆಲಸ ಮಾಡುತ್ತಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿ, ತಿಳಿಸಿ, ಅವರ ವಿಶ್ವಾಸದ ಜೊತೆಗೆ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುವಂತ ಕಾರ್ಯ ಮಾಡಲಾಗುತ್ತಿದೆ. ಮಿಸ್ ಕಾಲ್, ಗೋಡೆ ಬರಹ, ಬೈಕ್ ಮೇಲೆ ಸ್ಪೀಕರ್ ಹಾಕಿ ಪಕ್ಷದ ಕುರಿತು ಅಭಿಯಾನ ನಡೆಸಲಾಗುತ್ತಿದೆ.

ಮನ್ ಕೀ ಬಾತ್ ಕಾರ್ಯಕ್ರಮವನ್ನು ಬೂತ್ ಮಟ್ಟದಲ್ಲಿ ನಡೆಸಲಾಗುತ್ತದೆ‌. ಬೂತ್ ಅಭಿಯಾನಕ್ಕೆ ನಡ್ಡಾ ಅವರು ಚಾಲನೆ ನೀಡಿದ್ದರು. 53 ಸಾವಿರ ಕಡೆ ಬೂತ್ ಅಭಿಯಾನ ನಡೆಸಲಾಗುತ್ತಿದೆ. 10 ಸಾವಿರ ಬೂತ್​ಗಳಲ್ಲಿ ಚಟುವಟಿಕೆ ನಡೆಸಲಾಗುತ್ತದೆ. ನಮ್ಮ ಎಲ್ಲಾ ಜನಪ್ರತಿನಿಧಿಗಳು ಇದರಲ್ಲಿ ತೊಡಗಿಕೊಂಡಿದ್ದಾರೆ‌. ರಸ್ತೆ ರಸ್ತೆಯಲ್ಲಿ ಟೆಂಟ್ ಹಾಕಿ ಸರ್ಕಾರದ ಸಾಧನೆಯನ್ನು ತಿಳಿಸುತ್ತಿದ್ದೇವೆ. ಸಾಮಾಜಿಕ, ರಾಜಕೀಯ ಹಾಗೂ ಅರ್ಥಿಕವಾಗಿ ಸ್ಥಿರವಾಗಿ ನಡೆಸಲಾಗುತ್ತಿದೆ. ವಿಶ್ವದೆಲ್ಲೆಡೆ ಆರ್ಥಿಕ ಹಿನ್ನೆಡೆಯಾದರೆ ಭಾರತದಲ್ಲಿ‌ ಅರ್ಥಿಕ ಮುನ್ನಡೆಯಾಗುತ್ತಿದೆ.

ಕಾನೂನು ಸುವ್ಯಸ್ಥೆ, ಭಯೋತ್ಪಾದನೆ ತಡೆಯುವಂತಹ ಕಾರ್ಯಕ್ರಮಗಳಿಂದಾಗಿ ಜನ ಬಿಜೆಪಿ ಕಡೆ ಇದ್ದಾರೆ. ಬೇರೆ ಪಕ್ಷಗಳು ಕುಟುಂಬ ಆಧಾರಿತ ಪಕ್ಷವಾಗಿವೆ. ನಾಗರಿಕರು ಪಕ್ಷದ ಸದಸ್ಯರಾದರೆ ಪಕ್ಷದ ಅಂಗವಾಗುತ್ತಾರೆ ಎಂದು ಅವರನ್ನು ಸದಸ್ಯರನ್ನಾಗಿ ಮಾಡಲಾಗುತ್ತಿದೆ. ಪಕ್ಷದ ಸದಸ್ಯತ್ವ ಪಡೆಯುವುದು ಹೇಗೆ ಎಂದು ಸಂಕಲ್ಪ ಯಾತ್ರೆ ಮೂಲಕ ಮಾಹಿತಿ ನೀಡಲಾಗುತ್ತಿದೆ. ಪ್ರತಿಪಕ್ಷ ಬಸ್ ಯಾತ್ರೆ ಮಾಡುತ್ತಾ ಹಾಗೇ ಹೋಗ್ತಾ ಇದೆ. ನಾವು ಮನೆ ಮನೆಗೆ ತೆರಳಿ ಜನರ ಕಷ್ಟ ಆಲಿಸಿ ಪರಿಹಾರ ನೀಡುತ್ತಿದ್ದೇವೆ. ನಾವು ಜನರ ಪರವಾಗಿದ್ದೇವೆ ಎಂಬುದನ್ನು ಇದು ತೋರಿಸುತ್ತಿದೆ‌. ಬಿಜೆಪಿ ತನ್ನ ಸಂಖ್ಯೆಯನ್ನು 120 ರಿಂದ 150 ರ ತನಕ ಹೆಚ್ಚಿಸುವ ಜೊತೆ ಮತವನ್ನು ಸಹ ಹೆಚ್ಚಿಸಲಾಗುವುದು ಎಂದರು. ಈ ವೇಳೆ ಎಂಎಲ್​ಸಿ ಡಿ.ಎಸ್. ಅರುಣ್, ಗಿರೀಶ್ ಪಟೇಲ್ ಸೇರಿ ಇತರರಿದ್ದರು.

ಇದನ್ನೂ ಓದಿ: ವಿವಾದಿತ ಬಿಬಿಸಿ ಡಾಕ್ಯುಮೆಂಟರಿ ನಿರ್ಬಂಧಿಸಲು ಯೂಟ್ಯೂಬ್, ಟ್ವಿಟರ್​ಗೆ ಕೇಂದ್ರ ಆದೇಶ

Last Updated :Jan 25, 2023, 7:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.