ಶರಾವತಿ ಮುಳುಗಡೆ ಸಂತ್ರಸ್ತರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ..

author img

By

Published : Oct 1, 2022, 3:49 PM IST

Updated : Oct 1, 2022, 8:50 PM IST

KN_SMG_0

ಶರಾವತಿ ಮುಳುಗಡೆ ಸಂತ್ರಸ್ತರು ಕಳೆದ ಎರಡು ವರ್ಷಗಳಿಂದ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಸರ್ಕಾರ ಎಚ್ಚೆತ್ತಿಲ್ಲ. ಹತ್ತರಿಂದ ಹದಿನೈದು ದಿನದಲ್ಲಿ ಬೇಡಿಕೆ ಈಡೇರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕಿ, ಸಂಸದರು, ಶಾಸಕರ ಮನೆ ಮುಂದೆ ಧರಣಿ ಮಾಡುತ್ತೇವೆ ಎಂದು ಮಲೆನಾಡು ರೈತ ಹೋರಾಟ ಸಮೀತಿ ಅಧ್ಯಕ್ಷ ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟ ಜಮೀನಿನ ದಾಖಲೆಗಳನ್ನು ಬದಲಾವಣೆ ಮಾಡದಿರುವುದನ್ನು ಖಂಡಿಸಿ ಶರಾವತಿ ಮುಳುಗಡೆ ಸಂತ್ರಸ್ತರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ತೀ.ನಾ ಶ್ರೀನಿವಾಸ್, ಅಂದಿನ ಸರ್ಕಾರ ಶರಾವತಿ ನದಿಗೆ ಲಿಂಗನಮಕ್ಕಿ ಆಣೆಕಟ್ಟು ನಿರ್ಮಿಸಿ ವಿದ್ಯುತ್ ಉತ್ಪಾದನೆಗಾಗಿ 1960ರಲ್ಲಿ 1ಲಕ್ಷ ಎಕರೆ ಭೂಮಿಯನ್ನು ಭೂಸ್ವಾದಿನ ಪಡಿಸಿಕೊಳ್ಳಲಾಗಿತ್ತು. ಈ ಯೋಜನೆಗಾಗಿ ಭೂಮಿಯನ್ನು ಕಳೆದುಕೊಂಡ ಕುಟುಂಬಗಳಿಗೆ 1959-60ರಲ್ಲಿ 13,500 ಎಕರೆ ಅರಣ್ಯ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿ ಸುಮಾರು 36 ಕ್ಕೂ ಹೆಚ್ಚು ಸರ್ಕಾರಿ ಆದೇಶಗಳನ್ನು ಹೊರಡಿಸಲಾಗಿದೆ.

ಶರಾವತಿ ಮುಳುಗಡೆ ಸಂತ್ರಸ್ತರಿಂದ ಪ್ರತಿಭಟನೆ

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟ ಭೂಮಿಯಲ್ಲಿ ಸುಮಾರು 25,000 ಕುಟುಂಬಗಳು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಇವರಿಗೆ ಹಕ್ಕು ಪತ್ರ ವಿತರಿಸದೆ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಜಿಲ್ಲೆಯ ಸಂಸದರಿಗೆ, ಶಾಸಕರಿಗೆ ಮುಳುಗಡೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಂಚಲು ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು. ಹಾಗಾಗಿ ಅರ್ಜಿ ವಜಾ ಮಾಡಿರುವುದಾಗಿ ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ ಎಂದರು.

ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡುವ ನಿಯಮ ಪಾಲನೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡುವಲ್ಲಿ ಹೈಕೋರ್ಟ್​ನ ವಿರೋಧವಿಲ್ಲ. ರಾಜ್ಯ ಸರ್ಕಾರ ಕೇಂದ್ರದ ಅನುಮತಿ ಪಡೆದುಕೊಂಡು ಭೂಮಿ ಹಂಚಿಕೆ ಮಾಡಬಹುದು ಎಂದು ತಿಳಿಸಿದೆ ಎಂದರು.

ನಾನು ಮುಳುಗಡೆ ಸಂತ್ರಸ್ಥ ಎಂದು ಹೇಳಿಕೊಳ್ಳುವ ಸಾಗರ ಶಾಸಕ ಹರತಾಳು ಹಾಲಪ್ಪ ಸಹ ಮುಖ್ಯಮಂತ್ರಿಗಳಿಗೆ ಈ ವಿಚಾರದಲ್ಲಿ ಒತ್ತಾಯ ಮಾಡುತ್ತಿಲ್ಲ. ಜನಪ್ರತಿನಿಧಿಗಳು ಚುನಾವಣೆಯಲ್ಲಿ ನಿಲ್ಲಲು ಮತ್ತು ಗೆಲ್ಲಲು ಗಂಟು ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಆರೋಪಿಸಿದ ಅವರು, ಮುಳುಗಡೆ ಸಂತ್ರಸ್ತರ ಹಾಗೂ ರೈತರ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದರು.

ಶರಾವತಿ ಮುಳುಗಡೆ ಸಂತ್ರಸ್ತರು ಕಳೆದ ಎರಡು ವರ್ಷಗಳಿಂದ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಸರ್ಕಾರ ಎಚ್ಚೆತ್ತಿಲ್ಲ. ಹತ್ತರಿಂದ ಹದಿನೈದು ದಿನದಲ್ಲಿ ಬೇಡಿಕೆ ಈಡೇರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕುತ್ತೇವೆ. ಸಂಸದರು, ಶಾಸಕರ ಮನೆ ಮುಂದೆ ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದರು. ಯಡಿಯೂರಪ್ಪ ಡಿಸಿಎಂ, ಸಿಎಂ ಆಗಿದ್ದವರು, ಅವರ ಮಗ ಮೂರು ಬಾರಿ ಸಂಸದರಾಗಿದ್ದಾರೆ. ಈಗ ಮುಳುಗಡೆ ಸಂತ್ರಸ್ಥರನ್ನು ಕಡೆಗಣಿಸುತ್ತಿದ್ದಾರೆ. ನಾನು ಸಾಯುವರೆಗೂ ಬಗರ್ ಹುಕುಂ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದಿದ್ದಾರೆ.

ಸುಮಾರು 70 ವರ್ಷಗಳಿಂದ ರೈತರು ಬಗರ್ ಹುಕುಂ ಜಮೀನು ಸಾಗುವಳಿ ಮಾಡುತ್ತ ಬಂದಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವಿದೆ. ಕೃಷಿ ಭೂಮಿಯನ್ನು ಬಂಡವಾಳ ಶಾಹಿಗಳು ತೆಗೆದುಕೊಳ್ಳಬಹುದೆಂದು ಕಾನೂನು ತಿದ್ದುಪಡಿ ಮಾಡಿ ಜಾರಿಗೆ ತರುತ್ತೀರಿ, ರೈತ ವಿರೋಧಿ ಕಾನೂನುಗಳನ್ನು ಚರ್ಚಿಸದೇ ಜಾರಿ ಮಾಡುತ್ತೀರಿ.

ಒಂದು ವರ್ಷದ ರೈತ ಹೋರಾಟದಲ್ಲಿ ಸಾವಿರಾರು ಜನ ರೈತರು ಸತ್ತ ನಂತರ ಕಾನೂನು ವಾಪಸ್ ತೆಗೆದುಕೊಳ್ಳುತ್ತೀರಿ, ಬಗರ್ ಹುಕುಂ ಸಮಸ್ಯೆ ಬಗೆಹರಿಸಲು ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು. ಸಂಸದರು, ಶಾಸಕರ ವೇತನ ಹೆಚ್ಚಿಸಲು ಚರ್ಚೆ ಮಾಡದೇ ತೀರ್ಮಾನ ಮಾಡುತ್ತೀರಿ, ಆದರೆ ಶರಾವತಿ ಮುಳುಗಡೆಯವರ ಬಗ್ಗೆ ಕಾನೂನು ತಿದ್ದುಪಡಿ ಮಾಡಲು ಏಕೆ ಹಿಂದೇಟು ಹಾಕುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: 40 ಪರ್ಸೆಂಟ್​ ಸರ್ಕಾರ ಎಂದು ಹೇಳಿದ್ದು ಗುತ್ತಿಗೆದಾರರು.. ಸಂಸದ ಪ್ರಜ್ವಲ್ ರೇವಣ್ಣ ಸ್ಪಷ್ಟನೆ

Last Updated :Oct 1, 2022, 8:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.