ದೇಶದಲ್ಲಿ ಕಾಂಗ್ರೆಸ್ ಹಾಸ್ಯಾಸ್ಪದ ಪಕ್ಷ: ಸಚಿವ ಈಶ್ವರಪ್ಪ

author img

By

Published : Oct 13, 2021, 4:06 PM IST

Minister Eshwarappa

ಕಾಂಗ್ರೆಸ್ ನಾಯಕರಾದ ವಿ.ಎಸ್‌.ಉಗ್ರಪ್ಪ ಹಾಗೂ ಸಲೀಂ ಅವರು ಡಿ.ಕೆ.ಶಿವಕುಮಾರ್‌ ಕುರಿತಾಗಿ ಮಾತನಾಡಿಕೊಂಡಿರುವ ವಿಚಾರಕ್ಕೆ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಶಿವಮೊಗ್ಗ: ದೇಶದಲ್ಲಿ ಕಾಂಗ್ರೆಸ್ ಹಾಸ್ಯಾಸ್ಪದ ಪಕ್ಷ ಎನ್ನುವುದಕ್ಕೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಾಗೂ ಕೆಪಿಸಿಸಿ ಸಮನ್ವಯಕಾರ ಸಲೀಂ ಮಾತನಾಡಿರುವ ವಿಡಿಯೋನೇ ಸಾಕ್ಷಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಗ್ರಪ್ಪ ಮತ್ತು ಸಲೀಂ ಅವರು ಡಿಕೆ ಶಿವಕುಮಾರ್​​ ಬಗ್ಗೆ ಮಾತನಾಡಿರುವುದನ್ನು ನಾನು ಟಿವಿಯಲ್ಲಿ ನೋಡಿದೆ. ನಾನು ಆ ಪದಗಳನ್ನು ಬಳಸುವ ಮಟ್ಟಕ್ಕೆ ಹೋಗುವುದಿಲ್ಲ. ಇದು ಕಾಂಗ್ರೆಸ್​​ನ ಪರಿಸ್ಥಿತಿ ಎಂದರು.

ಕಾಂಗ್ರೆಸ್ ಎರಡು ಗುಂಪಾಗುತ್ತೆ:

ಡಿಕೆಸಿ ಪಾಲೋವರ್ಸ್​​ಗಳು ಸಿದ್ದರಾಮಯ್ಯ ಬಗ್ಗೆ ಹಾಗೂ ಸಿದ್ದರಾಮಯ್ಯ ಪಾಲೋವರ್ಸ್​​ಗಳು ಡಿಕೆಶಿ ಬಗ್ಗೆ ಇನ್ನೂ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇವುಗಳನ್ನು ಯಾರೋ ಬೇರೆಯವರು ಹೇಳುತ್ತಿಲ್ಲ. ಅವರ ಪಕ್ಷದವರೇ ಹೇಳುತ್ತಿದ್ದಾರೆ. ನಾನು ಈ ಮೊದಲೇ ಹೇಳಿದ್ದೆ, ಮುಂದಿನ ವಿಧಾನಸಭಾ ಚುನಾವಣೆ ಒಳಗೆ ಕಾಂಗ್ರೆಸ್ ಎರಡು ಗುಂಪಾಗುತ್ತದೆ ಎಂದು ಅದಕ್ಕೆ ಮೊದಲ ಬಹಿರಂಗ ಸಾಕ್ಷಿ ಇದು ಎಂದರು.

ಒಳಗಿದ್ದ ಬೆಂಕಿ ಹೊರ ಬಿದ್ದಿದೆ:

ಸಿದ್ದರಾಮಯ್ಯ ವಲಸಿಗರು ಬಂದಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಬೆಲೆ ಬಂದಿದ್ದು ಅಂತಾರೆ, ಇತ್ತ ಡಿಕೆಶಿ ವಸಿಗರು ಡಿಕೆಶಿ ಬಂದಿದ್ದಕ್ಕೆ ಬೆಲೆ ಬಂತು ಅಂತಾರೆ. ಇಷ್ಟು ದಿನ ಒಳಗೊಳಗೆ ಬೆಂಕಿ ಉರಿಯುತ್ತಿತ್ತು. ಈಗ ಹೊರಗೆ ಬಿದ್ದಿದೆ. ಒಬ್ಬ ನಾಯಕರು ಇನ್ನೊಬ್ಬ ನಾಯಕರಿಗೆ ಟೀಕೆ ಮಾಡುವ ಸಮಯದಲ್ಲಿ ಈ ರೀತಿ ಪದ ಬಳಸಬೇಡಿ ಎಂದು ಸೂಚನೆ ನೀಡಿದರು.

ಹೆಚ್​ಡಿಕೆ ಬಗ್ಗೆ ವ್ಯಂಗ್ಯ:

ಇನ್ನೂ ಕುಮಾರಸ್ವಾಮಿ ಅವರು ನಮ್ಮದೊಂದು ಪಕ್ಷ ಇದೆ ಎಂದು ತೋರಿಸಿಕೊಳ್ಳಲು ಕೆಲವೊಂದು ಹೇಳಿಕೆಗಳನ್ನು ನೀಡುತ್ತಾರೆ. ಅವರಿಗೆ ಈಗ ಅನಾಥ ಪ್ರಜ್ಞೆ ಕಾಡುತ್ತಿದೆ. ನಮ್ಮ ಜೊತೆ ಯಾವ ಪಕ್ಷದವರಿಲ್ಲ, ಜನಗಳು ನಮ್ಮ ಜೊತೆ ಇಲ್ಲ ಎನ್ನುವ ಭಾವನೆ ಕಾಡುತ್ತಿದೆ. ಹಾಗಾಗಿ ಆಗಾಗ ಹೇಳಿಕೆಗಳನ್ನು ನೀಡುತ್ತಿರುತ್ತಾರೆ ಎಂದು ಹೆಚ್​ಡಿಕೆ ಬಗ್ಗೆ ವ್ಯಂಗ್ಯವಾಡಿದರು.

ಸಿದ್ದರಾಮಯ್ಯಗೆ ಟಾಂಗ್​:

ಸಿದ್ದರಾಮಯ್ಯ ಯಡಿಯೂರಪ್ಪ ಜೊತೆ ಕೈ ಜೊಡಿಸಿದ್ದಕ್ಕೆ ಬಿಜೆಪಿ ಪಕ್ಷ ಇದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದಕ್ಕೆ ಯಾವುದಾದರೂ ದಾಖಲೆ ಇದ್ದರೆ ತೋರಿಸಬೇಕು. ಹೊಂಡ ಗುತ್ತಿಗೆ ಮಾತನಾಡಬಾರದು. ದಾಖಲೆ ಇದ್ದರೆ ತೋರಿಸಬೇಕು. ಕುಮಾರಸ್ವಾಮಿ ಅವರು ಹುಚ್ಚು, ಹುಚ್ಚಾಗಿ ಹೇಳಿಕೆ ನೀಡೋದನ್ನ ಬಿಡಬೇಕು. ಇದು ಅವರಿಗೆ ಗೌರವ ತರಲ್ಲ ಎಂದರು.

ದೇಶದಲ್ಲಿ ಕಾಂಗ್ರೆಸ್ ಮೂಲೆ ಗುಂಪಾಗಿರುವ ರೀತಿ ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಕೂಡ ಕಾಂಗ್ರೆಸ್ ಮೂಲೆ ಗುಂಪಾಗಲಿದೆ. ಆ ಸಂದರ್ಭದಲ್ಲಿ ವಿಧಿ ಇಲ್ಲದೇ ನೀವು ಸನ್ಯಾಸತ್ವ ಸ್ವೀಕರಿಸುತ್ತೀರಿ ಎಂದು ಸಿದ್ದರಾಮಯ್ಯಗೆ ಇದೇ ವೇಳೆ ಟಾಂಗ್ ನೀಡಿದರು.

ಚರ್ಚೆಗೆ ನಾ ಸಿದ್ಧ:

ಸಿದ್ದರಾಮಯ್ಯ ಎಸ್ಟಿ ಮೀಸಲಾತಿ ಕುರಿತು ಈಶ್ವರಪ್ಪ ಅವರನ್ನು ಒಂದೇ ವೇದಿಕೆಯಲ್ಲಿ ಚರ್ಚೆಗೆ ಆಹ್ವಾನಿಸಿರುವ ಕುರಿತು ಮಾತನಾಡಿ, ಇತ್ತೀಚೆಗೆ ಸಿದ್ದರಾಮಯ್ಯ ನಾನು ಏನನ್ನೂ ನೋಡಿಲ್ಲ , ಹೀಗಿರುವಾಗ ಒಂದೇ ವೇದಿಕೆಗೆ ಆಹ್ವಾನಿಸಿದ್ದರೆ ಅದಕ್ಕೆ ನಾನು ಸಿದ್ಧ ಎಂದರು.

ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಡಿಕೆಶಿ ಕುರಿತ ಉಗ್ರಪ್ಪ-ಸಲೀಂ ಸಂಭಾಷಣೆಯ ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.