ಪಕ್ಷ ಬಿಟ್ಟೋಗಿ ಎಂದು ಹೇಳಿಲ್ಲ, ಹೋದ್ಮೇಲೆ ನಾನೇನು ಮಾಡೋಕಾಗಲ್ಲ: ಹೆಚ್​ಡಿಕೆ

author img

By

Published : Oct 3, 2021, 3:41 PM IST

Updated : Oct 3, 2021, 4:28 PM IST

JDS program

ಪಕ್ಷ ಬಿಟ್ಟು ಹೋಗಿ ಎಂದು ಯಾರಿಗೂ ಹೇಳಿಲ್ಲ, ಹೋದ ಮೇಲೆ ನಾನೇನು ಮಾಡಲು ಆಗಲ್ಲ. ಕೆಲವರು ಪಕ್ಷದ ಕುತ್ತಿಗೆ ಕುಯ್ದು, ಬೆನ್ನಿಗೆ ಚೂರಿ ಹಾಕ್ತಾ ಇದ್ದಾರೆ. ಅಂತಹ ಕ್ಷೇತ್ರದಲ್ಲಿ ಬದಲಿ ನಾಯಕರನ್ನು ಆಯ್ಕೆ ಮಾಡಲೇಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ರಾಮನಗರ: ಜಿಲ್ಲೆಯ ಬಿಡದಿಯಲ್ಲಿ 5ನೇ ದಿನದ ಜೆಡಿಎಸ್ ಕಾರ್ಯಾಗಾರ ಜನತಾ ಪರ್ವ 1.0 - ಮಿಷನ್ 123, ಅಲ್ಪಸಂಖ್ಯಾತರ ಕಾರ್ಯಾಗಾರಕ್ಕೆ ಚಾಲನೆ ಸಿಕ್ಕಿದೆ. ರಾಜ್ಯದ ಪ್ರಮುಖ ಮುಸ್ಲಿಂ ಮುಖಂಡರು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅಲ್ಪಸಂಖ್ಯಾತರ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಅಲ್ಪಸಂಖ್ಯಾತ ಮುಖಂಡರಾದ ಜಫ್ರುಲ್ಲಾ ಖಾನ್, ಫಾರುಖ್ ಖಾನ್ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಭಾಗಿಯಾಗಿದ್ದರು.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ನಾಲ್ಕು ದಿನಗಳ ಮೊದಲ ಕಾರ್ಯಾಗಾರ ಯಶಸ್ವಿಯಾಗಿದೆ. ಇಂದು ಅಲ್ಪ ಸಂಖ್ಯಾತರ ಕಾರ್ಯಾಗಾರ ನಡೆಯುತ್ತಿದ್ದು, ಇಲ್ಲಿ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಘಟನೆಗಳು‌ ಮತ್ತು ಮುಂದಿನ ದಿನಗಳಲ್ಲಿ ಜೆಡಿಎಸ್ ಕಾರ್ಯಕ್ರಮ ಕುರಿತು ಚರ್ಚಿಸಲಾಯಿತು. ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ಬಗ್ಗೆ ನಡೆಸಿದ ಅಪಪ್ರಚಾರದ ಬಗ್ಗೆಯೂ ಈ ಕಾರ್ಯಾಗಾರದಲ್ಲಿ ಚರ್ಚೆ ಮಾಡಲಾಯಿತು ಎಂದರು.‌

ಎಲ್ಲ ಸಮಾಜದವರಿಗೂ ಜೆಡಿಎಸ್ ಗೌರವ ನೀಡುತ್ತಿದ್ದು, ಈ ಸಮಾಜಕ್ಕೆ ನಾವು ಹಲವಾರು ಕೊಡುಗೆ ನೀಡಿದ್ದೇವೆ. ಮುಂದಿನ ಅಭ್ಯರ್ಥಿಗಳಿಗೆ ಕೆಲಸ ಮಾಡಲು ಸೂಚನೆ ನೀಡಲಾಗುವುದು. ಅಲ್ಪಸಂಖ್ಯಾತರು ಯಾವ ರೀತಿ ಕೆಲಸ ಮಾಡಬೇಕು ಎಂಬುದನ್ನು ತಿಳಿಸಲಾಗುತ್ತದೆ ಎಂದು ಹೇಳಿದರು.

ನಮ್ಮ ಕಾರ್ಯಕರ್ತರನ್ನು ನಡು ನೀರಿನಲ್ಲಿ ಬಿಟ್ಟು ಹೋದರು:

ಕೆಲವರು ನಮ್ಮ ಪಕ್ಷದ ಶಕ್ತಿ ಬಳಸಿಕೊಂಡು, ನಮ್ಮ ಕಾರ್ಯಕರ್ತರನ್ನು ನಡು ನೀರಿನಲ್ಲಿ ಬಿಟ್ಟು ಹೋದರು. ಇವರಿಂದಲೇ ಪಕ್ಷದ ಸಂಘಟನೆ ಹಿಂದೆ ಉಳಿದಿದ್ದು. ನಿನ್ನೆಯೂ ಒಬ್ಬ ಶಾಸಕರು ಹೇಳ್ತಾ ಇದ್ರು, ನಾನು ಪಕ್ಷ ಬಿಟ್ಟು ಹೋಗಲ್ಲ ನಾಯಕರೇ ಗೊಂದಲ ಸೃಷ್ಟಿ ಮಾಡ್ತಾ ಇರೋದು ಅಂತ. ಪಕ್ಷದ ಒಳ ಒಳಗೇ ಸಂಚು ರೂಪಿಸಿಕೊಂಡು ನನ್ನ ಮೇಲೆ ಗೂಬೆ ಕೂರಿಸುತ್ತಾರೆ. ಕಾರ್ಯಕರ್ತರ ಮುಂದೆ ಹೀಗೆ ಮಾತಾಡ್ತಾರೆ. ಅಧಿಕಾರದ ರುಚಿ ಕಂಡು ನಡು ನೀರಲ್ಲಿ ಕಾರ್ಯಕರ್ತರನ್ನು ಬಿಟ್ಟು ಹೋಗ್ತಾರೆ ಎಂದು ಹೆಚ್​ಡಿಕೆ ಕಿಡಿಕಾರಿದರು.

ಇದಲ್ಲದೇ ನಾಯಕರಿಂದ ಪಕ್ಷ ಅಲ್ಲ, ಕಾರ್ಯಕರ್ತರಿಂದ ಪಕ್ಷ ಅನ್ನೋದು ಗೊತ್ತಾಗುತ್ತದೆ. ಪಕ್ಷ ಬಿಟ್ಟು ಹೋಗಿ ಎಂದು ಹೇಳಿಲ್ಲ, ಹೋದ ಮೇಲೆ ನಾನೇನು ಮಾಡಲು ಆಗಲ್ಲ. ಕೆಲವರು ಪಕ್ಷದ ಕುತ್ತಿಗೆ ಕುಯ್ದು, ಬೆನ್ನಿಗೆ ಚೂರಿ ಹಾಕ್ತಾ ಇದ್ದಾರೆ. ಅಂತಹ ಕ್ಷೇತ್ರದಲ್ಲಿ ಬದಲಿ ನಾಯಕರನ್ನು ಆಯ್ಕೆ ಮಾಡಲೇಬೇಕು ಎಂದರು.

ಸಮಸ್ಯೆ ಇದ್ರೆ ಬಗೆಹರಿಸೋಣ:

ಮೂರ್ನಾಲ್ಕು ಕ್ಷೇತ್ರದಲ್ಲಿ ಹೀಗೆ ಆಗಿದ್ದು, ನಮ್ಮಿಂದ ಯಾವುದೇ ಶಾಸಕರಿಗೆ ಅಪಪ್ರಚಾರ ಆಗಿಲ್ಲ. ಇದಲ್ಲದೇ ನೀವೆ ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಿ. ಬಾಗಿಲು ತೆಗೆದಿದೆ, ಯಾವಾಗ ಬೇಕಾದ್ರೂ ಬನ್ನಿ. ಚರ್ಚೆಗೆ ಅವಕಾಶ ಇದೆ. ನಾಲ್ಕು ಗೋಡೆ ಮಧ್ಯೆ ಬಂದು ಚರ್ಚೆ ಮಾಡೋದು ಬಿಟ್ಟು ಮಾಧ್ಯಮಗಳ ಮುಂದೆ ಹೋದ್ರೆ ಹೇಗೆ? ಯಾವಾಗ ಬೇಕಾದ್ರೂ ಬನ್ನಿ, ಸಮಸ್ಯೆ ಇದ್ರೆ ಬಗೆಹರಿಸೋಣ ಎಂದು ಹೆಚ್​ಡಿಕೆ ಕರೆ ನೀಡಿದರು.

ನಮ್ಮ ಪಕ್ಷ ನಿರಾಶಕ್ತಿಯಾಗಿತ್ತೆಂದು ಕಾಂಗ್ರೆಸ್ ಅಂದುಕೊಂಡಿದೆ:

ಇದಲ್ಲದೇ ನಮ್ಮ ಪಕ್ಷ ನಿರಾಶಕ್ತಿಯಾಗಿತ್ತು ಅಂತ ಕಾಂಗ್ರೆಸ್ ಅಂದುಕೊಂಡಿದೆ. ಆದರೆ ಆಗಲ್ಲ, ನಾವು ಸಮಯಕ್ಕಾಗಿ ಕಾಯುತ್ತಿದ್ವಿ ಅಷ್ಟೇ. ಜನ ಕಷ್ಟದಲ್ಲಿ ಇದ್ದರು, ಹಾಗಾಗಿ ಈಗ ಸಂಘಟನೆ ಶುರುವಾಗಿದೆ ಎಂದು ತಿಳಿಸಿದರು.

ಕೊಲೆಗಡುಕ ಸರ್ಕಾರ:

ನೆಲಮಂಗಲದ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ನಿಜಕ್ಕೂ ಹೃದಯ ವಿದ್ರಾವಕವಾಗಿದೆ‌. ಸರ್ಕಾರಿ ನೌಕರರು ತೀರಿ ಹೋದಾಗ ಅನುಕಂಪದ ಆಧಾರದ ಮೇಲೆ ಕೆಲಸ ನೀಡಬೇಕು. ಆದರೆ ಆ ಹೆಣ್ಣು ಮಗಳ ಪತಿ ತೀರಿಕೊಂಡ ನಂತರ ಆಕೆಗೆ ಕೆಲಸವನ್ನು ಕೊಟ್ಟಿಲ್ಲ. ಈ ಸರ್ಕಾರಕ್ಕೆ ಯಾವ ಗಮನವೂ ಇರಲಿಲ್ಲ. ಇದು ಕೊಲೆಗಡುಕ ಸರ್ಕಾರ ಅಂದರೆ ತಪ್ಪಾಗಲ್ಲ. ಆ ಹೆಣ್ಣು ಮಗಳು ಎಷ್ಟು ಕಷ್ಟ ಅನುಭವಿಸಿರಬೇಕು ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಶಾಸಕರ ಸಮಸ್ಯೆಗಳನ್ನು ಬಗೆಹರಿಸಲು ನಾನು ಸಿದ್ಧನಿದ್ದೇನೆ. ಆದರೆ, ಮೂರ್ನಾಲ್ಕು ಮಂದಿ ಪಕ್ಷ ತೊರೆಯುವ ಮಾತನ್ನಾಡಿದ್ದಾರೆ. ಪಕ್ಷ ತ್ಯಜಿಸುವ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳನ್ನ ಹುಡುಕಿದ್ದೇವೆ ಎಂದರು.

ಇದನ್ನೂ ಓದಿ: ಕಿಮ್ಸ್ ಮತ್ತೊಂದು ಸಾಧನೆ.. ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ..

ಹಾಗೆಯೇ ಕಾಂಗ್ರೆಸ್​ನಿಂದಲೂ ಸಣ್ಣಪುಟ್ಟ ಜಾತಿಗಳ ಕಾರ್ಯಾಗಾರ ಆಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷ ನಿಷ್ಕ್ರಿಯರಾಗಿಬಿಟ್ಟಿದೆ ಅಂದುಕೊಂಡಿದ್ದರು. ಈಗ ಜೆಡಿಎಸ್ ಬಗ್ಗೆ ಕಾಂಗ್ರೆಸ್ ನಾಯಕರಿಗೆ ನಡುಕ ಉಂಟಾಗಿರುವಂತಿದೆ. ಅದೇ ಕಾರಣಕ್ಕೆ ನಮ್ಮಂತೆಯೇ ಕಾರ್ಯಾಗಾರ ಆಯೋಜಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಹೆಚ್​ಡಿಕೆ ಲೇವಡಿ ಮಾಡಿದರು.

Last Updated :Oct 3, 2021, 4:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.