ನಮ್ಮ ಪಕ್ಷದ ಬಗ್ಗೆ ಮಾತನಾಡಲು ಡಿಕೆಶಿಗೆ ನೈತಿಕತೆಯಿಲ್ಲ: ಕುಮಾರಸ್ವಾಮಿ ತಿರುಗೇಟು

author img

By

Published : Oct 4, 2021, 7:19 PM IST

JDS Workshop in Bidadi

ಬೊಮ್ಮಾಯಿ ಅವರು ಮೋದಿ ಅವರಂತೆ ಡ್ರೆಸ್ ಮಾಡಿಕೊಂಡು ಫೋಟೋ ಶೂಟ್ ಮಾಡಿಸಿಕೊಂಡು ಬಸ್ ನಿಲ್ದಾಣಗಳ ಮೇಲೆ ಜಾಹೀರಾತುಗಳಲ್ಲಿ ಪೋಸು ಕೊಡುತ್ತಿದ್ದಾರೆ. ಇವರು ಏನು ಮಾಡಲು ಹೊರಟಿದ್ದಾರೆ?, ನವ ಕರ್ನಾಟಕ ಏನು ಅನ್ನೋದು ನನಗೇ ಇನ್ನೂ ಅರ್ಥವಾಗಿಲ್ಲ. ಇವರಾದರೂ ನಮಗೆ ಹೇಳಲಿ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.

ರಾಮನಗರ: ಜೆಡಿಎಸ್ ಕೇವಲ ಒಕ್ಕಲಿಗ, ಲಿಂಗಾಯತ ಸಮುದಾಯಕ್ಕೆ ಮಾತ್ರ ಆದ್ಯತೆ ನೀಡುತ್ತದೆ ಎಂದು ಹೇಳಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ರಾಮನಗರ ಜಿಲ್ಲೆ ಬಿಡದಿಯ ತೋಟದಲ್ಲಿ ನಡೆದಿರುವ ಜನತಾ ಪರ್ವ 1.O ಹಾಗೂ ಮಿಷನ್ 123ಯ ಆರನೇ ದಿನದ ಕಾರ್ಯಾಗಾರದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಡಿಕೆಶಿಗೆ ನೇರವಾಗಿ ಕೆಲ ಪ್ರಶ್ನೆಗಳನ್ನು ಕೇಳಿದರು. ನೀವು ಎಷ್ಟು ಸಮುದಾಯಗಳಿಗೆ ಗೌರವ ಕೊಟ್ಟಿದ್ದೀರಿ? ನಿಮ್ಮ ಪಕ್ಷದ ದಲಿತ ಸಮಾಜದ ನಾಯಕರನ್ನು ಚುನಾವಣೆಯಲ್ಲಿ ಸೋಲಿಸಿದವರು ಯಾರು? ಪಟ್ಟಿ ದೊಡ್ಡದಾಗಿದೆ, ಒಮ್ಮೆ ನೋಡಿಕೊಳ್ಳಿ ಎಂದಿದ್ದಾರೆ.

JDS Workshop in Bidadi
ಬಿಡದಿಯಲ್ಲಿ ಜೆಡಿಎಸ್ ಎಸ್​ಸಿಎಸ್​ಟಿ ಕಾರ್ಯಾಗಾರ

ಮುಖ್ಯಮಂತ್ರಿ ಸ್ಥಾನಕ್ಕೆ ಅಡ್ಡಿ ಬರುತ್ತಾರೆಂದು ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಕಾರಣ ಯಾರು?. ಧರ್ಮಸಿಂಗ್ ಅವರ ಸೋಲಿಗೆ ಕಾರಣ ಯಾರು?, ಕೋಲಾರದಲ್ಲಿ ಕೆ.ಹೆಚ್. ಮುನಿಯಪ್ಪ ಅವರನ್ನು ಸೋಲಿಸಿದವರು ಯಾರು?, ಬಿಜೆಪಿಗೆ ಶಕ್ತಿಯೇ ಇಲ್ಲದ ಹಾಗೂ ಕಾರ್ಪೊರೇಟರ್ ಕೂಡ ಆಗಲು ಆಗದಂತಹ ವ್ಯಕ್ತಿಯನ್ನು ಕರೆ ತಂದು ಕೋಲಾರದಲ್ಲಿ ನಿಲ್ಲಿಸಿ ಪ್ರತ್ಯಕ್ಷವಾಗಿ ಬೆಂಬಲ ನೀಡಿದವರು ಯಾರು?, ರಮೇಶ್ ಕುಮಾರ್ ಯಾರ ಪರ ಕೆಲಸ ಮಾಡಿದರು. ಅಲ್ಲಿನ ಬಿಜೆಪಿ ಸಂಸದರ ಆಯ್ಕೆ ಹಿಂದೆ ಯಾರಿದ್ದಾರೆ? ಎಂದು ಕುಮಾರಸ್ವಾಮಿ ಅವರು ಡಿಕೆಶಿಗೆ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ದಲಿತ ನಾಯಕರ ಸೋಲಿಗೆ ಅವರೇ ಕಾರಣವಲ್ಲವೇ?. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಹರಿಹಾಯ್ದರು.

ಆ ಹಣ ಎಲ್ಲಿ ಹೋಯಿತು?:

ಮತ್ತೆ ಮಹಾ ಮಳೆಯಿಂದ ಬೆಂಗಳೂರು ತತ್ತರಿಸಿದೆ. ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಜನ ಸಾಯುತ್ತಿದ್ದಾರೆ. ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು 20 ಸಾವಿರ ಕೋಟಿ ಹಣ ಖರ್ಚು ಮಾಡಿದ್ದೇವೆ ಎಂದು ಸದನದಲ್ಲಿ ಸಿಎಂ ಹೇಳಿದ್ದರು. ಆ ಹಣ ಎಲ್ಲಿ ಹೋಯಿತು?, ಎಲ್ಲಿ ಖರ್ಚಾಯಿತು? ಎಂದು ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಒಂದೇ ಮಳೆ ನಗರದಲ್ಲಿ ದೊಡ್ಡ ಅನಾಹುತ ಉಂಟು ಮಾಡಿದೆ. ರಸ್ತೆಗಳ ಮೇಲೆ ನೀರು ನದಿಯಂತೆ ಹರಿದಿದೆ. ನಿರ್ವಹಣೆ ಕಳಪೆಯಾಗಿದೆ. ಹಾಗಾದರೆ ರಸ್ತೆಗಳಿಗೆ ತೆಗೆದಿಟ್ಟ ಹಣ ಎಲ್ಲಿ ಹೋಯಿತು? ಅಷ್ಟು ಹಣವನ್ನು ಯಾವುದಕ್ಕೆ ಬಳಕೆ ಮಾಡಿಕೊಂಡರು. ಅಷ್ಟು ಹಣ ವೆಚ್ಚ ಆಗಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದಿದೆ. ಅದಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯೆ ಕೊಟ್ಟಿದ್ದರು. ಇದಕ್ಕೆ ಜನರಿಗೆ ಉತ್ತರ ಬೇಕಿದೆ ಎಂದು ಅವರು ನೇರವಾಗಿ ಮುಖ್ಯಮಂತ್ರಿಗೆ ಟಾಂಗ್​ ಕೊಟ್ಟರು.

ತನಿಖೆಗೆ ಒತ್ತಾಯ:

ರಾಜರಾಜೇಶ್ವರಿ ನಗರ ಕ್ಷೇತ್ರ ಪ್ರಗತಿಗೆ ಹಲವಾರು ವರ್ಷಗಳಿಂದ ಕೋಟ್ಯಂತರ ರೂಪಾಯಿ ಹಣ ಹರಿದು ಬಂದಿದೆ. ಈ ಹಣ ಎಲ್ಲಿ ಹೋಯಿತು? ನಿರಂತರವಾಗಿ ಈ ಕ್ಷೇತ್ರಕ್ಕೆ ಹರಿದ ಹಣದ ಹೊಳೆ ಎತ್ತ ಹರಿಯಿತು? ಈ ಹಣವೂ ಸೇರಿ ಗುಂಡಿಗಳಿಗೆ ಖರ್ಚಾಗಿದೆ ಎಂದು ಸಿಎಂ ಹೇಳಿದ್ದ 20 ಸಾವಿರ ಕೋಟಿ ಹಣ ಏನಾಯಿತು? ಎಂಬ ಮಾಹಿತಿ ಜನರಿಗೆ ಬೇಡವೇ? ಈ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಿದರು.

ಪ್ರಚಾರ ಪ್ರಿಯ ಸರ್ಕಾರ:

ಜನರು ಕಣ್ಣೆರಿನಲ್ಲಿ ಕೈ ತೊಳೆಯುತ್ತಿದ್ದರೆ, ಸರ್ಕಾರದ ಪ್ರಚಾರದಲ್ಲಿ ಮುಳುಗಿದೆ. ಜಾಹೀರಾತುಗಳ ಮೂಲಕ ಸ್ವ ಪ್ರಶಂಸೆಯಲ್ಲಿ ಮುಳುಗಿದೆ. ಮೋದಿ, ಬೊಮ್ಮಾಯಿ ಇಬ್ಬರೂ ನವ ಭಾರತಕ್ಕಾಗಿ ನವ ಕರ್ನಾಟಕವೆಂದು ಪ್ರಚಾರ ಪಡೆಯುತ್ತಿದ್ದಾರೆ. ಬೊಮ್ಮಾಯಿ ಅವರು ಮೋದಿ ಅವರಂತೆ ಡ್ರೆಸ್ ಮಾಡಿಕೊಂಡು ಫೋಟೋ ಶೂಟ್ ಮಾಡಿಸಿಕೊಂಡು ಬಸ್ ನಿಲ್ದಾಣಗಳ ಮೇಲೆ ಜಾಹೀರಾತುಗಳಲ್ಲಿ ಪೋಸು ಕೊಡುತ್ತಿದ್ದಾರೆ.

ಇವರು ಏನು ಮಾಡಲು ಹೊರಟಿದ್ದಾರೆ?, ನವ ಕರ್ನಾಟಕ ಏನು ಅನ್ನೋದು ನನಗೇ ಇನ್ನೂ ಅರ್ಥವಾಗಿಲ್ಲ. ಇವರಾದರೂ ನಮಗೆ ಹೇಳಲಿ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.

JDS Workshop in Bidadi
ಬಿಡದಿಯಲ್ಲಿ ಜೆಡಿಎಸ್ ಎಸ್​ಸಿಎಸ್​ಟಿ ಕಾರ್ಯಾಗಾರ

ಉತ್ತರ ಪ್ರದೇಶ ಘಟನೆ ಅಕ್ಷಮ್ಯ:

ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕೇಂದ್ರದ ಮಂತ್ರಿಯ ಪುತ್ರ ವಾಹನ ಹತ್ತಿಸಿದ್ದಾರೆ. ಇದು ಹೇಯ ಮತ್ತು ಅಕ್ಷಮ್ಯ. ನಂತರ ನಡೆದ ಪ್ರತಿಭಟನೆಯಲ್ಲಿ ಇನ್ನಷ್ಟು ರೈತರು ಸಾವನ್ನಪ್ಪಿದ್ದಾರೆ. ಇದೇನಾ ನವ ಭಾರತ? ಹಿಂದುತ್ವದ ಹೆಸರಿನಲ್ಲಿ ದೇಶವನ್ನು ಒಡೆಯಲು ಹೊರಟಿರುವ ಬಿಜೆಪಿ ನವ ಭಾರತ ಕಟ್ಟುತ್ತಿರುವುದು ಹೀಗೆ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಜನತಾ ಸಂಗಮ ಅ. 16ರಿಂದ ರಾಜ್ಯಾದ್ಯಂತ ಆರಂಭ:

ಜನತಾ ಪರ್ವ 1.0 ಕಾರ್ಯಾಗಾರದ ಎರಡನೇ ಹಂತವಾಗಿ ಜನತಾ ಸಂಗಮ ಅ. 16ರಿಂದ ರಾಜ್ಯಾದ್ಯಂತ ಆರಂಭವಾಗಲಿದೆ. ಇದು ಪ್ರತಿ ತಾಲೂಕಿನಲ್ಲಿ ಎಲ್ಲರ ಜೊತೆಗೂಡಿ ನಡೆಯುವ ಕಾರ್ಯಕ್ರಮ. ಕಾರ್ಯಕರ್ತರನ್ನು ನೇರವಾಗಿ ಭೇಟಿಯಾಗುವ ಹಾಗೂ ತಳಹದಿಯಲ್ಲಿ ಪಕ್ಷ ಬಲಪಡಿಸುವ ಉದ್ದೇಶ ಇದಕ್ಕಿದೆ ಎಂದರು.

ನಾಳೆ ಕ್ರಿಶ್ಚಿಯನ್ ಪ್ರತಿನಿಧಿಗಳ ಕಾರ್ಯಾಗಾರ:

ಇಂದು ಎಸ್​​ಸಿ‌, ಎಸ್​​ಟಿ ವಿಭಾಗದ ಕಾರ್ಯಗಾರ ನಡೆಯಿತು. ಚಿಂತಕ ಪ್ರೊ.ಮುಕುಂದ ರಾಜು ಅವರು ಪ್ರತಿಮೆಗಳನ್ನು ಉದ್ದೇಶಿಸಿ ಮಾತನಾಡಿದರು. ನಿನ್ನೆ ಮುಸ್ಲಿಂ ಬಾಂಧವರ ಜೊತೆ ಕಾರ್ಯಗಾರ ಮಾಡಲಾಗಿತ್ತು. ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಅವರು ಪ್ರಧಾನ ಭಾಷಣ ಮಾಡಿದ್ದರು. ನಾಳೆ ಅಂತಿಮವಾಗಿ ಕ್ರಿಶ್ಚಿಯನ್ ಬಾಂಧವರ ಜೊತೆ ಕಾರ್ಯಗಾರ ಇದೆ ಎಂದು ಹೆಚ್.ಡಿ ಕುಮಾರಸ್ವಾಮಿ ಇದೇ ಮಾಹಿತಿ ನೀಡಿದರು.

ಇದನ್ನೂ ಓದಿ: 'ಮಿಷನ್ 123' ಎನ್ನುವುದು ನಮ್ಮ ಗುರಿ ಮಾತ್ರವಲ್ಲ, ಛಲವೂ ಹೌದು: ಹೆಚ್​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.