ಹೋಟೆಲ್​ನಲ್ಲಿ ಮದ್ಯ, ಧೂಮಪಾನಕ್ಕೆ ಅವಕಾಶ ನಿರಾಕರಣೆ.. ಸಿಟ್ಟಿಗೆದ್ದು ಗುಂಡು ಹಾರಿಸಿದ ಗುಂಡಪ್ಪ!

author img

By

Published : Nov 29, 2022, 6:06 PM IST

man-fire-in-air-cause-of-prohibit-of-alcohol

ಮದ್ಯ ಮತ್ತು ಧೂಮಪಾನಕ್ಕೆ ಹೋಟೆಲ್​ನಲ್ಲಿ ಅವಕಾಶ ನೀಡಿಲ್ಲವೆಂದು ವ್ಯಕ್ತಿಯೋರ್ವ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ರಾಯಚೂರು: ಹೋಟೆಲ್​ವೊಂದರಲ್ಲಿ ಮದ್ಯ ಮತ್ತು ಧೂಮಪಾನಕ್ಕೆ ಅವಕಾಶ ನೀಡಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯೋರ್ವ ಸಿಟ್ಟಿಗೆದ್ದು ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಸಿಂಧನೂರಿನ ಶ್ರೀಪುರಂ ಜಂಕ್ಷನ್ ಹತ್ತಿರದ ಸಿರಿ ಫ್ಯಾಮಿಲಿ ರೆಸ್ಟೋರೆಂಟ್​ನಲ್ಲಿ ನಡೆದಿದೆ.

ಕಲಬುರಗಿ ಮೂಲದ ಗುಂಡಪ್ಪ ಅಲಿಯಾಸ್ ಹನುಮಂತಪ್ಪ ಜೇಮಶೆಟ್ಟಿ ಎಂಬುವರು ಗಾಳಿಯಲ್ಲಿ ಗುಂಡು ಹಾರಿಸಿರುವ ಆರೋಪಿ. ಹನುಮಂತಪ್ಪ ತನ್ನ ಸಂಬಂಧಿಕರೊಂದಿಗೆ ಕೊಪ್ಪಳದ ಸಿದ್ದಾಪುರದಲ್ಲಿನ ಸಮಾರಂಭವೊಂದಕ್ಕೆ ತೆರಳಿದ್ದರು. ಸಮಾರಂಭ ಮುಗಿಸಿಕೊಂಡು ವಾಪಸಾಗುವ ವೇಳೆ ಸಿಂಧನೂರಿನ ಸಿರಿ ಫ್ಯಾಮಿಲಿ ರೆಸ್ಟೋರೆಂಟ್​ಗೆ ತೆರಳಿದ್ದು, ಮದ್ಯ ಬಾಟಲಿಯನ್ನು ಟೇಬಲ್​ನಲ್ಲಿರಿಸಿ, ಧೂಮಪಾನ ಮಾಡುತ್ತಿದ್ದರು ಎನ್ನಲಾಗ್ತಿದೆ. ಇದನ್ನು ಕಂಡ ಮಾಣಿ ಹನುಮಂತಪ್ಪ ಅವರಿಗೆ ಇದೆಲ್ಲಾ ಹೋಟೆಲ್​ನಲ್ಲಿ ನಿಷೇಧ ಎಂದು ಹೇಳಿದ್ದಾನೆ. ಕೋಪಗೊಂಡ ಹನುಮಂತಪ್ಪ ಮಾಣಿಗೆ ಬೈದಿದ್ದು, ಹೋಟೆಲ್ ಮಾಲೀಕರೊಂದಿಗೂ ಜಗಳವಾಡಿದ್ದಾರಂತೆ. ಬಳಿಕ ರಿವಾಲ್ವಾರಿನಿಂದ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದು, ಕಾರಿನಿಂದ ರಿವಾಲ್ವರ್ ತೆಗೆದು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ ಹೆದರಿದ ಕೆಲವರು ಅಲ್ಲಿಂದ ಓಡಿ ಹೋಗಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಹನುಮಂತಪ್ಪ ಅವರನ್ನು ಬಂಧಿಸಿದ್ದಾರೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ಶಸ್ತ್ರಾಸ್ತ್ರ ಅಧಿನಿಯಮ ಉಲ್ಲಂಘನೆ 286, 504 ಐಪಿಸಿ ಸೇರಿದಂತೆ ಮೊಕದ್ದಮೆ ದಾಖಲಿಸಲಾಗಿದೆ. ಈ ವೇಳೆ ಆರೋಪಿ ಸಹ ಹೋಟೆಲ್ ಮಾಲೀಕರ ವಿರುದ್ಧ ಪ್ರತಿದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕಳಪೆ ಅಂಕ ಗಳಿಸಿದ್ದಾರೆ ಎಂದು ಪೋಷಕರಿಗೆ ದೂರು.. ಗರ್ಭಿಣಿ ಶಿಕ್ಷಕಿಯನ್ನು ಥಳಿಸಿದ ವಿದ್ಯಾರ್ಥಿಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.