ಮೈಸೂರು ಜಿಲ್ಲೆಯಲ್ಲಿ ಮುಂದುವರಿದ ಕಾಡು ಪ್ರಾಣಿಗಳ ಹಾವಳಿ : ಸೌದೆ ತರಲು ಹೋದ ಬಾಲಕ ಹುಲಿ ದಾಳಿಗೆ ಬಲಿ

author img

By

Published : Jan 22, 2023, 8:29 PM IST

Updated : Jan 22, 2023, 8:57 PM IST

tiger-killed-a-boy-in-mysore

ಸೌದೆ ತರಲು ಹೋದ ಬಾಲಕನ ಮೇಲೆ ಹುಲಿ ದಾಳಿ - ಗಂಭೀರ ಗಾಯಗೊಂಡ ಬಾಲಕ ಸಾವು - ಮೈಸೂರಿನ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದಲ್ಲಿ ಘಟನೆ

ಮೈಸೂರು : ಸೌದೆ ತರಲು ಕಾಡಿಗೆ ಹೋದ ಬಾಲಕನ ಮೇಲೆ ಹುಲಿ ದಾಳಿ ಮಾಡಿ ಕೊಲೆಗೈದಿರುವ ಘಟನೆ ನಾಗರಹೊಳೆ ಅರಣ್ಯ ವ್ಯಾಪ್ತಿಯ ಎಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಸಮೀಪ ನಡೆದಿದೆ. ಇಲ್ಲಿನ ಬಳ್ಳೆ ಹಾಡಿಯ ಮಂಜು(17) ಮೃತ ದುರ್ದೈವಿ. ಬಳ್ಳೆ ಹಾಡಿ ನಿವಾಸಿಯಾದ ಮಂಜು ಎಂದಿನಂತೆಯೇ ಸೌದೆ ತರಲು ಕಾಡಿಗೆ ತೆರಳಿದ್ದಾನೆ. ಈ ವೇಳೆ ಹುಲಿಯೊಂದು ಏಕಾಏಕಿ ಈತನ ದಾಳಿ ನಡೆಸಿದೆ. ದಾಳಿಯ ತೀವ್ರತೆಯಿಂದ ಯುವಕನ ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ: ಘಟನೆ ಸಂಬಂಧ ಅರಣ್ಯ ಇಲಾಖೆ ವಿರುದ್ಧ ಮೃತನ ಸಂಬಂಧಿಕರು ಪ್ರತಿಭಟನೆ ನಡೆಸಿದರು. ಡಿ.ಬಿ.ಕುಪ್ಪೆ ಅರಣ್ಯ ಇಲಾಖೆಯ ಎದುರು ಡಿ.ಬಿ.ಕುಪ್ಪೆ ಮತ್ತು ಎನ್.ಬೆಳತ್ತೂರು ಗ್ರಾಮ ಪಂಚಾಯತಿಯ ಸದಸ್ಯರಾದ ಶಿವಕುಮಾರ್, ರಮೇಶ್, ಪುಟ್ಟಣ್ಣ, ಸುಬ್ರಮಣ್ಯ ಹಾಗೂ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಮಾಸ್ತಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವಿಷಯ ತಿಳಿದ ಸ್ಥಳಕ್ಕಾಗಮಿಸಿದ ಮೇಟಿಕುಪ್ಪೆ ವಲಯದ ಎಸಿಎಫ್ ರಂಗಸ್ವಾಮಿಯವರು ಪ್ರತಿಭಟನಾಕಾರರ ಮನವೊಲಿಸಿದರು. ಬಳಿಕ ಪ್ರತಿಭಟನೆಯನ್ನು ಕೈಬಿಟ್ಟ ಮೃತನ ಸಂಬಂಧಿಕರು ಮೃತದೇಹದ ಮರಣೋತ್ತರ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟರು.

ಇದೇ ವೇಳೆ ಮಾತನಾಡಿದ ಎಸಿಎಫ್ ರಂಗಸ್ವಾಮಿ, ಬಳ್ಳೆಯ ಹಾಡಿಯ ಸಮೀಪವೇ ಯುವಕ ಸೌದೆಯನ್ನು ಸಂಗ್ರಹಿಸುವಾಗ ಈ ಘಟನೆ ನಡೆದಿದೆ. ಮೃತನ ಕುಟುಂಬಕ್ಕೆ ಸರ್ಕಾರದಿಂದ ಬರುವ 15 ಲಕ್ಷ ರೂ ಪರಿಹಾರಕ್ಕೆ ಒದಗಿಸಿಕೊಡಲಾಗುವುದು. ಈಗ ಪರಿಹಾರದಲ್ಲಿನ 2 ಲಕ್ಷ 50 ಸಾವಿರದ ಪರಿಹಾರದ ಚೆಕ್ ನೀಡಲಾಗಿದೆ ಎಂದು ಹೇಳಿದರು.

ಇನ್ನು ಕುಟುಂಬಕ್ಕೆ ಮಾಹಿತಿ ನೀಡಿದೆ ಮೃತದೇಹವನ್ನು ಅರಣ್ಯ ಇಲಾಖೆಯವರು ಸ್ಥಳಾಂತರಗೊಳಿಸಿದ್ದರು. ಆದ್ದರಿಂದ ಈ ಕೂಡಲೇ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಗ್ರಾಮಪಂಚಾಯಿತಿ ಸದಸ್ಯ ಶಿವಕುಮಾರ್ ಒತ್ತಾಯಿಸಿದರು.

ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಮೇಲೆ ದಾಳಿ : 2019ರ ಜನವರಿಯಲ್ಲಿ ಡಿ.ಬಿ.ಕುಪ್ಪೆ ಸಮೀಪವೇ ತಿಂಗಳ ಅಂತರದಲ್ಲಿ ಇಬ್ಬರನ್ನು ಹುಲಿ ಬಲಿ ಪಡೆದಿತ್ತು. ಬಹಿರ್ದೆಸೆಗೆ ಹೋಗಿದ್ದ ಹುಲುಮಟ್ಟಲು ಗ್ರಾಮದ ಚಿನ್ನಪ್ಪ ಎಂಬುವವರ ಮೇಲೆ ಹುಲಿ ದಾಳಿ ನಡೆಸಿ ಬಲಿ ಪಡೆದಿತ್ತು.ಕೆಲವೇ ದಿನಗಳ ಬಳಿಕ ಮಧು ಎಂಬುವವರು ಹುಲಿ ದಾಳಿಗೆ ಬಲಿಯಾಗಿದ್ದರು.

ರೈತನ ಮೇಲೆ ದಾಳಿ ಮಾಡಿದ್ದ ಹುಲಿ : ಕಳೆದ ಡಿಸೆಂಬರ್​ ತಿಂಗಳಿನಲ್ಲಿ ಜಮೀನಿನಲ್ಲಿ ಜಾನುವಾರು ಮೇಯಿಸುತ್ತಿದ್ದ ರೈತನ ಮೇಲೆ ಹುಲಿ ದಾಳಿ ನಡೆಸಿದ ಘಟನೆ ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ನಡೆದಿತ್ತು. ಈ ಸಂದರ್ಭ ಅಕ್ಕಪಕ್ಕದಲ್ಲಿದ್ದ ಜಮೀನಿನ ರೈತರು ಜೋರಾಗಿ ಕಿರುಚಿಕೊಂಡಾಗ ಹುಲಿ ಸ್ಥಳದಿಂದ ಪರಾರಿಯಾಗಿತ್ತು. ಘಟನೆಯಲ್ಲಿ ರೈತನ ತಲೆ, ಕೆನ್ನೆಗೆ ಗಂಭೀರ ಗಾಯಗಳಾಗಿದ್ದವು. ಬಳಿಕ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದರು.

ಹುಲಿ ದಾಳಿ ಹಿನ್ನೆಲೆಯಲ್ಲಿ ಕಾಡಂಚಿನ ಪ್ರದೇಶದ ರೈತರು ತಮ್ಮ ಜಮೀನುಗಳಿಗೆ ತೆರಳಲು ಭಯಪಡುತ್ತಿದ್ದಾರೆ. ಹುಲಿಗಳ ದಾಳಿಯಿಂದಾಗಿ ರೈತರು ಬೇಸತ್ತಿದ್ದು, ಇಲಾಖೆಯ ನಿರ್ಲಕ್ಷ್ಯದಿಂದಾಗಿ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಹುಲಿ ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ನಂಜನಗೂಡು: ಜಾನುವಾರು ಮೇಯಿಸುತ್ತಿದ್ದ ರೈತನ ಮೇಲೆ ಹುಲಿ ದಾಳಿ

Last Updated :Jan 22, 2023, 8:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.