ಚಿರತೆ ದಾಳಿಯಲ್ಲಿ ಮೃತಪಟ್ಟ ಬಾಲಕ ಮತ್ತು ವೃದ್ದೆಯ ಮನೆಗೆ ಸಚಿವ ಸೋಮಶೇಖರ್ ಭೇಟಿ ; ಪರಿಹಾರ ಚೆಕ್​ ವಿತರಣೆ

author img

By

Published : Jan 24, 2023, 9:23 PM IST

leopard-attack

ಚಿರತೆ ದಾಳಿಯಲ್ಲಿ ಮೃತಪಟ್ಟ ವೃದ್ಧೆ ಮತ್ತು ಅಪ್ರಾಪ್ತ ಬಾಲಕನ ಮನೆಗೆ ಸಚಿವ ಎಸ್​.ಟಿ ಸೋಮಶೇಖರ್​ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಪರಿಹಾರದ ಚೆಕ್​ನ್ನು ವಿತರಿಸಿದರು.

ಮೈಸೂರು: ಚಿರತೆ ದಾಳಿಗೆ ಬಲಿಯಾದ ವೃದ್ಧೆ ಮತ್ತು ಅಪ್ರಾಪ್ತನ ಬಾಲಕನ ಮನೆಗೆ ಭೇಟಿ ನೀಡಿದ ಸಚಿವ ಎಸ್.ಟಿ.ಸೋಮಶೇಖರ್, ಎರಡು ಕುಟುಂಬಗಳಿಗೂ ಸಾಂತ್ವನ ಹೇಳಿದರು. ತಿ.ನರಸೀಪುರ ತಾಲ್ಲೂಕಿನ ಕನ್ನನಾಯಕನಹಳ್ಳಿ ಗ್ರಾಮದ ಸಿದ್ದಮ್ಮರ ಮನೆಗೆ ಮೊದಲು ಭೇಟಿ ನೀಡಿ ಬಳಿಕ, ಚಿರತೆ ದಾಳಿಯಲ್ಲಿ ಬಲಿಯಾದ ಹೊರಳಹಳ್ಳಿ ಗ್ರಾಮದ ಬಾಲಕ ಜಯಂತ್ ಮನೆಗೆ ಭೇಟಿ ನೀಡಿದ್ದರು. ಬಾಲಕನ ಸಾವು ನೆನೆದು ಎಸ್.ಟಿ.ಸೋಮಶೇಖರ್​ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೇ ಸಿದ್ದಮ್ಮ ಮತ್ತು ಜಯಂತ್ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಚೆಕ್ ವಿತರಣೆ ಮಾಡಿದರು.

ನಮ್ಮ ಮಗನನ್ನ ಬಲಿ ಪಡೆದಿರುವ ಚಿರತೆಯನ್ನು ಮೊದಲು ಕೊಲ್ಲಿ ಎಂದು ಸಚಿವ ಎಸ್ ಟಿ ಸೋಮಶೇಖರ್ ಮುಂದೆ ಜಯಂತ್ ಕುಟುಂಬಸ್ಥರು ಅಳಲು ತೋಡಿಕೊಂಡರು. ಬಳಿಕ ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಸಚಿವರು, ಈ ಕುರಿತು ಮುಖ್ಯಮಂತ್ರಿಗಳು ಉನ್ನತಮಟ್ಟದ ಸಭೆ ಕರೆದಿದ್ದಾರೆ. ಜಿಲ್ಲಾಧಿಕಾರಿಗಳು, ಅರಣ್ಯಾಧಿಕಾರಿಗಳ ಮೀಟಿಂಗ್ ಮಾಡಿ, ಕೆಲವು ತೀರ್ಮಾನಗಳನ್ನ ಸಿಎಂ ಅವರೇ ತೆಗೆದುಕೊಳ್ಳಲಿದ್ದಾರೆ ಎಂದರು.

ಈಗಾಗಲೇ ಜಿಲ್ಲಾಧಿಕಾರಿಗಳು ಕಬ್ಬನ್ನು ಕಟಾವು ಮಾಡಲು ಆದೇಶ ಹೊರಡಿಸಿದ್ದಾರೆ. ಯಾವ ಚಿರತೆ ದಾಳಿ ಮಾಡುತ್ತಿದೆ. ಅದನ್ನ ಶೂಟೌಟ್ ಮಾಡಲು ತಿಳಿಸಿದ್ದಾರೆ. ಗ್ರಾಮಗಳಲ್ಲಿ ವಿದ್ಯಾರ್ಥಿಗಳು ಸಂಚಾರ ನಡೆಸಲು ತೊಂದರೆಯಾಗುತ್ತಿದೆ. ಕೆಲವೊಂದು ಮರಗಳನ್ನ ಕಟಾವು ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ ಎಂದು ತಿಳಿಸಿದರು. ಅರಣ್ಯ ಇಲಾಖೆಯಲ್ಲಿ ಯಾರು ಟಾಪ್ ಮೋಸ್ಟ್ ಅಧಿಕಾರಿಗಳು ಇದ್ದಾರೆ, ಅವರನ್ನೇ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತೆ. ಮತ್ತೆ ಇದೇ ರೀತಿಯ ಘಟನೆಗಳು ಮುಂದುವರೆದರೆ ಅಧಿಕಾರಿಗಳ ತಲೆದಂಡ ಆಗುತ್ತೆ. ಇದು ಪ್ರಾಣಿಗಳಿಗೆ ಸಂಬಂಧಪಟ್ಟ ವಿಚಾರ ಆಗಿರುವ ಕಾರಣ ಅಂತಿಮವಾಗಿ ಸಿಎಂ ಅವರೇ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಹೇಳಿದರು.

ಇನ್ನು, 11 ವರ್ಷದ ಬಾಲಕ ಜಯಂತ್ ಇತ್ತೀಚೆಗೆ ಬಯಲು ಶೌಚಕ್ಕಾಗಿ ರಾತ್ರಿ ಮನೆಯಿಂದ ಹೊರ ಹೋಗಿದ್ದ. ಈ ವೇಳೆ ಚಿರತೆ ದಾಳಿ ಮಾಡಿ ಎಳೆದೊಯ್ದಿತ್ತು. ಅಲ್ಲದೇ ಕೆಲವು ದಿನಗಳ ಹಿಂದಷ್ಟೇ ತಿ.ನರಸೀಪುರ ತಾಲೂಕಿನ ಕನ್ನನಾಯಕನಹಳ್ಳಿಯಲ್ಲಿ ಚಿರತೆ ದಾಳಿಗೆ ವೃದ್ಧೆ ಬಲಿಯಾಗಿದ್ದರು. ಸಿದ್ದಮ್ಮ ಎಂಬ ವೃದ್ಧೆ ಮನೆಯಾಚೆ ಸೌದೆ ತರಲೆಂದು ಹೊರಗೆ ಬಂದಿದ್ದ ವೇಳೆ ಅವರ ಮೇಲೆ ಚಿರತೆ ದಾಳಿ ಮಾಡಿ ಎಳೆದೊಯ್ದಿ ಬಲಿ ಪಡೆದಿತ್ತು. ಈ ಇಬ್ಬರನ್ನು ಬಲೆ ಪಡೆದಿದ್ದು ಒಂದೇ ಚಿರತೆ ಎಂದು ಶಂಕಿಸಲಾಗಿತ್ತು.

ಇದನ್ನೂ ಓದಿ: ಹೆಚ್ಚಿದ ಚಿರತೆ ದಾಳಿ.. 15 ದಿನದೊಳಗೆ ಕಬ್ಬು ಕಟಾವಿಗೆ ರೈತರಿಗೆ ಮೈಸೂರು ಡಿಸಿ ಸೂಚನೆ

ಮೂರು ತಿಂಗಳ ಅವಧಿಯಲ್ಲಿಯೇ ನಾಲ್ವರು ಬಲಿ: ಅ.31ರಂದು ಕಾರ್ತಿಕ ಸೋಮವಾರ ಪೂಜೆಗೆಂದು ಹೋಗಿದ್ದ ಮಂಜುನಾಥ್ ಎಂಬ ವಿದ್ಯಾರ್ಥಿಯನ್ನು ಮಲ್ಲಿಕಾರ್ಜುನಸ್ವಾಮಿ ಬೆಟ್ಟದಲ್ಲಿ ಚಿರತೆ ಬಲಿ ಪಡೆದಿತ್ತು. ಇದಾದ ಬಳಿಕ ಡಿ.1ರಂದು ಎಸ್.ಕೆಬ್ಬೆಹುಂಡಿ ಗ್ರಾಮದ ವಿದ್ಯಾರ್ಥಿನಿ ಮೇಘನಾ ಎಂಬ ವಿದ್ಯಾರ್ಥಿಯನ್ನು ಚಿರತೆ ಕೊಂದು ಹಾಕಿತ್ತು. ಅಲ್ಲದೇ, ಜ.20ರಂದು ಕನ್ನನಾಯಕಹಳ್ಳಿ ಗ್ರಾಮದ ಸಿದ್ದಮ್ಮ(60) ಎಂಬ ವೃದ್ಧೆಯನ್ನು ಬಲಿ ಪಡೆದಿದ್ದ ಚಿರತೆ, ಶನಿವಾರ ಹೊರಳಹಳ್ಳಿ ಗ್ರಾಮದಲ್ಲಿ ಜಯಂತ್ ಎಂಬ ಅಪ್ರಾಪ್ತನ ಬಲಿ ಪಡೆಯುವ ಮೂಲಕ, ಅಟ್ಟಹಾಸ ಮೆರೆದಿದೆ.

15 ದಿನದೊಳಗೆ ಕಬ್ಬು ಕಟಾವು ಮಾಡಿ: ತಿ.ನರಸೀಪುರ ಮತ್ತು ತಾಲ್ಲೂಕಿಗೆ ಹೊಂದಿಕೊಂಡಂತಿರುವ ನಂಜನಗೂಡು ತಾಲೂಕಿನ ಗಡಿ ಪ್ರದೇಶದಲ್ಲಿ ಮುಂದಿನ 15 ಪಕ್ವಗೊಂಡಿರುವ ಕಬ್ಬು ಕಟಾವು ಕಾರ್ಯವನ್ನು ಪೂರ್ಣಗೊಳಿಸುವ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ, ಶನಿವಾರ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಈಗಾಗಲೇ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಮೈಸೂರು: ಚಿರತೆ ದಾಳಿಗೆ ಬಾಲಕ ಬಲಿ, ಗ್ರಾಮದ ಸಮೀಪ ಶವ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.