ಮಹಾರಾಷ್ಟ್ರದಲ್ಲಿ ಬಿಜೆಪಿ ಆಪರೇಷನ್ ಕಮಲ, ಪಕ್ಷಾಂತರ ಕಾಯ್ದೆ ಬಲಪಡಿಸಲಿ: ಸಿದ್ದರಾಮಯ್ಯ

author img

By

Published : Jun 23, 2022, 4:05 PM IST

ಬಿಜೆಪಿ ಭ್ರಷ್ಟಾಚಾರದ ಹಣದಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂದ ಸಿದ್ದರಾಮಯ್ಯ

ಮಹಾರಾಷ್ಟ್ರದಲ್ಲಿ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಸಿದ್ದರಾಮಯ್ಯ ಟೀಕಿಸಿದರು.

ಮೈಸೂರು: ಭ್ರಷ್ಟಾಚಾರದ ಹಣದಲ್ಲಿ ಆಪರೇಷನ್‌ ಕಮಲ ನಡೆಸುತ್ತಿರುವ ಬಿಜೆಪಿ, ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸಲು ಮುಂದಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಕರ್ನಾಟಕದಲ್ಲಿ ಶುರುವಾದ ಈ ಚಾಳಿಯನ್ನು ಬಿಜೆಪಿಯವರು ದೇಶಕ್ಕೆ ಹಬ್ಬಿಸುತ್ತಿದ್ದಾರೆ. ಇದನ್ನು ತಡೆಗಟ್ಟಲು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಬೇಕು. ಒಂದು ಪಕ್ಷದಿಂದ ಆಯ್ಕೆ ಆದವರು ಬೇರೆ ಪಕ್ಷಕ್ಕೆ ಹೋಗದಂತೆ ತಡೆಯಬೇಕು. ಹಾಗೆ ಹೋದರೆ 10 ವರ್ಷಗಳ ಕಾಲ ಆತ ಚುನಾವಣೆಗೆ ನಿಲ್ಲದಂತೆ ಆದೇಶ ಮಾಡಬೇಕು. ಪ್ರಜಾಪ್ರಭುತ್ವದ ಉಳಿವಿಗಾಗಿ ಇದು ಅವಶ್ಯಕ ಎಂದು ತಿಳಿಸಿದರು.

ಆಪರೇಷನ್ ಕಮಲ ಹುಟ್ಟು ಹಾಕಿದ್ದು ಬಿಜೆಪಿ. 2008ರಲ್ಲಿ ಯಡಿಯೂರಪ್ಪ ಮೊದಲು ಆಪರೇಷನ್ ಕಮಲ ಮಾಡಿದರು. ಎಲ್ಲೂ ಅವರಿಗೆ ಬಹುಮತ ಬಂದಿಲ್ಲ. ಎಲ್ಲಾ ಕಡೆ ಹಣಕೊಟ್ಟು ಶಾಸಕರನ್ನು ಖರೀದಿಸಿ ಸರ್ಕಾರ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲೂ ಬಿಜೆಪಿ ಭ್ರಷ್ಟಾಚಾರದ ಹಣದಿಂದ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂದು ಹರಿಹಾಯ್ದರು.

ಭಾಗವತ್ ಸ್ಥಾನಕ್ಕೆ ಮಹಿಳೆಯನ್ನು ಆಯ್ಕೆ ಮಾಡಲಿ: ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಮಹಿಳೆಯನ್ನು ಆಯ್ಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದು ಸಾಮಾಜಿಕ ನ್ಯಾಯ ಅಲ್ಲ, ವಿಶೇಷತೆ ಏನೂ ಅಲ್ಲ. ಈ ರೀತಿ ಇದ್ದರೆ ಆರ್​ಎಸ್​​ಎಸ್ ಮೋಹನ್ ಭಾಗವತ್ ಸ್ಥಾನಕ್ಕೆ ಮಹಿಳೆಯನ್ನು ಆಯ್ಕೆ ಮಾಡಲಿ. ಅವರು ಈಗಾಗಲೇ ರಾಜ್ಯಪಾಲೆ ಆಗಿದ್ದಾರೆ, ಜೊತೆಗೆ ಹಲವಾರು ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಇವರ ಆಯ್ಕೆಯಲ್ಲಿ ವಿಶೇಷತೆ ಏನೂ ಇಲ್ಲ. ಈಕೆ ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡುವುದಿಲ್ಲ. ರಾಮನಾಥ್ ಕೋವಿಂದ್ ರೀತಿಯಲ್ಲಿ ಏನು ಮಾಡದೇ ನಾಮಕವಾಸ್ಥೆಯ ರಾಷ್ಟ್ರಪತಿಯಾಗಿ ಇರುತ್ತಾರೆ ಅಷ್ಟೇ ಎಂದು ಹೇಳಿದರು.

ಇದನ್ನೂ ಓದಿ: ಸಿಡಿದೆದ್ದ ಶಿಂಧೆಗೆ 37 ಶಾಸಕರ ಬಲ.. ಏಕನಾಥ್​ ನಡೆ ಕಾನೂನುಬದ್ಧವೇ?

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.