ಮಂಡ್ಯದಲ್ಲೊಂದು ವಿಚಿತ್ರ ಮಿಸ್ಸಿಂಗ್ ಕೇಸ್: ಕೋಳಿ ರಕ್ತ ಚೆಲ್ಲಿ ಕೊಲೆ ನಾಟಕ.. ಗೋವಾ ಟ್ರಿಪ್ ಮಾಹಿತಿ ಬಹಿರಂಗ

author img

By

Published : Sep 14, 2022, 1:47 PM IST

Mandya Man missing case

ಮನು ಎಂಬ ಯುವಕ ತನ್ನನ್ನು ತಾನು ಅಪಹರಿಸಿ ಕೊಲೆಯಾಗಿದ ರೀತಿ ಬಿಂಬಿಸಿಕೊಂಡಿದ್ದನು. ಸಾಲ ಪಡೆದು ಬೆದರಿಕೆ ಹಾಕಿದ್ದವರಿಗೆ ಬುದ್ದಿ ಕಲಿಸಲು ಮನು ಮಾಡಿದ್ದ ಕಿಡ್ನಾಪ್ ಮತ್ತು ಮರ್ಡರ್ ಪ್ಲಾನ್ 20 ದಿನದ ಬಳಿಕ ಬಯಲಾಗಿದೆ.‌

ಮಂಡ್ಯ: ತನ್ನನ್ನು ಅಪಹರಿಸಿ ಕೊಲೆ ಮಾಡಿದ್ದಾರೆಂದು ಬಿಂಬಿಸಿ ವ್ಯಕ್ತಿಯೋರ್ವ ಗೋವಾ ಪ್ರವಾಸಕ್ಕೆ ಹೋಗಿದ್ದ ವಿಚಿತ್ರ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮನು ಎಂಬ ಯುವಕ ತನ್ನನ್ನು ತಾನು ಅಪಹರಿಸಿ ಕೊಲೆಯಾಗಿದ ರೀತಿ ಬಿಂಬಿಸಿಕೊಂಡಿದ್ದನು. ಸಾಲ ಪಡೆದು ಬೆದರಿಕೆ ಹಾಕಿದ್ದವರಿಗೆ ಬುದ್ಧಿ ಕಲಿಸಲು ಮನು ಮಾಡಿದ್ದ ಕಿಡ್ನಾಪ್ ಮತ್ತು ಮರ್ಡರ್ ಪ್ಲಾನ್ 20 ದಿನದ ಬಳಿಕ ಬಯಲಾಗಿದೆ.‌ ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಗೆ ಆತಂಕ ಮೂಡಿಸಿದ್ದ ಭೂಪನನ್ನು ಮಂಡ್ಯ ಪೊಲೀಸರು ಪತ್ತೆ ಹಚ್ಚಿದ್ದಾರೆ.

ರಾತ್ರೋರಾತ್ರಿ ಎಸ್ಕೇಪ್: ಕಿಡ್ನಾಪ್ ಮತ್ತು ಕೊಲೆ ಡ್ರಾಮ ಮಾಡಿದ್ದ ಮನು ಎಲ್ಲರಿಗೂ ತಾನು ಕೊಲೆಯಾದ ರೀತಿ ನಂಬಿಸಲು ಮನೆಯಲ್ಲಿ ಕೋಳಿ ರಕ್ತ ಚೆಲ್ಲಿ ವಿಗ್ ಎಸೆದಿದ್ದ. ಬಳಿಕ ನಾಲೆಯೊಂದರ ಬಳಿ ಚಪ್ಪಲಿ ಬಿಟ್ಟು ತಾನು ಕೊಲೆಯಾಗಿದ್ದ ರೀತಿ ಸೀನ್ ಕ್ರಿಯೇಟ್ ಮಾಡಿದ್ದ. ಬಳಿಕ ಗೋವಾಗೆ ತೆರಳಿದ್ದ ಆತ ಅಲ್ಲಿ ಎಂಜಾಯ್ ಮಾಡುತ್ತಿದ್ದ. ಇತ್ತ ಆತಂಕಗೊಂಡಿದ್ದ ಮನೆಯವರು ಅರಕೆರೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಸ್​ಪಿ ಯತೀಶ್​​

ರಕ್ತ, ತಲೆ ಕೂದಲು ನಾಲೆ ಬಳಿ ಚಪ್ಪಲಿ ಕಂಡಿದ್ದ ಸ್ಥಳೀಯರು ಮನು ಕೊಲೆಯಾದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಹೀಗಾಗಿ‌ ಪೊಲೀಸರು ಕೂಡ ಕೆಲವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಗೋವಾದಿಂದ ವಾಪಸ್​​ ಆಗಿದ್ದ ಮನು ಬೆಂಗಳೂರಿನ ಪಿಜಿಯೊಂದರಲ್ಲಿ ವಾಸ್ತವ್ಯ ಹೂಡಿದ್ದ.

ನಿರಂತರ ವಿಚಾರಣೆ ಬಳಿಕ ಮನು ಮೊಬೈಲ್ ಲೋಕೇಶನ್ ಪತ್ತೆ ಹಚ್ಚಿದ ಖಾಕಿಗೆ ಆತ ಬೆಂಗಳೂರಿನಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣವೇ ಆತನನ್ನು ಕರೆತಂದು ವಿಚಾರಣೆ ನಡೆಸಿದಾಗ ವೇಳೆ ಸಾಲ ಪಡೆದು ಬೆದರಿಕೆ ಹಾಕಿದ್ದವರಿಗೆ ಬುದ್ಧಿ ಕಲಿಸಲು ಕಿಡ್ನಾಪ್ ಮತ್ತು ಮರ್ಡರ್ ಡ್ರಾಮಾ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಮಹಿಳೆ ಪರವಾಗಿ ಮನುಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿ: ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ಮನು ಸುಪ್ರಿಯಾ ಎಂಬುವರಿಗೆ 8 ಲಕ್ಷ ಸಾಲ ನೀಡಿದ್ದ ಎನ್ನಲಾಗ್ತಿದೆ. ಸಾಲ ನೀಡುವ ವೇಳೆ ಖಾಲಿ ಚೆಕ್ ಹಾಗೂ ಪ್ರನೋಟ್ ಪಡೆದಿದ್ದನಂತೆ. ಇತ್ತೀಚೆಗೆ ಸಾಲ ಹಿಂದಿರುಗಿಸುವಂತೆ ಕೇಳಿದ್ದ ಆತನಿಗೆ ಸುಪ್ರಿಯಾ ಸತಾಯಿಸಿದ್ದರು ಎನ್ನಲಾಗಿದೆ.‌

ಕೆಲ ದಿನಗಳ ಹಿಂದೆ ಸುಪ್ರಿಯಾ ಬಳಿ ಪಡೆದಿದ್ದ ಖಾಲಿ ಚೆಕ್ ವಾಪಸ್ ನೀಡುವಂತೆ ಅಪರಿಚಿತ ವ್ಯಕ್ತಿಯೊಬ್ಬ ಮನುಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಸಲಗ ಸಿನಿಮಾ ರೀತಿ ಮರ್ಡರ್ ಮಾಡುವುದಾಗಿ ಅವಾಜ್ ಹಾಕಿದ್ದಾನೆ. ಹಣ ನಿಧಾನವಾಗಿ ಕೊಡ್ತೀವಿ ನೀನು ಸುಮ್ಮನೆ ಚೆಕ್ ವಾಪಸ್ ನೀಡು ಎಂದು ಹೆದರಿಸಿದ್ದಾನೆ. ಸುಪ್ರಿಯಾ ಹಾಗೂ ಬೆದರಿಕೆ ಹಾಕಿದ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ ಮನು ಈ ಡ್ರಾಮ ನಡೆಸಿದ್ದಾನೆ ಎನ್ನಲಾಗ್ತಿದೆ. ಈ ಸಂಬಂಧ ಸುಪ್ರಿಯಾರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ನಡುರಸ್ತೆಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ: ಬೆಂಗಳೂರಲ್ಲಿ ಐವರು ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.