ನಾಗನಕಲ್ ಗ್ರಾಮದಲ್ಲಿ ದೇವಸ್ಥಾನ ಪ್ರವೇಶಕ್ಕೆ ದಲಿತ ವ್ಯಕ್ತಿಗೆ ನಿರ್ಬಂಧ, ದೂರು ದಾಖಲು

author img

By

Published : Sep 26, 2021, 5:30 PM IST

ಸಾಂದರ್ಭಿಕ ಚಿತ್ರ

ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿರುವ ಘಟನೆ ಕಾರಟಗಿ ತಾಲೂಕಿನ ನಾಗನಕಲ್ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಗಂಗಾವತಿ: ಕಾರಟಗಿ ತಾಲೂಕಿನ ನಾಗನಕಲ್ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರಿಗೆ ಅಲ್ಲಿನ ಮಹಾಲಕ್ಷ್ಮಿ ದೇವಸ್ಥಾನ ಪ್ರವೇಶ ನಿರಾಕರಿಸಿರುವ ಘಟನೆ ಸೆ.16ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ದೂರು ಪ್ರತಿ
ಎಫ್‌ ಐ ಆರ್‌ ಪ್ರತಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಟಗಿ ಪೊಲೀಸರು ಶನಿವಾರ (ಸೆ.25)ದಂದು ದೇಗುಲದ ಅರ್ಚಕ ಸೇರಿದಂತೆ ದೇವಸ್ಥಾನ ನಿರ್ವಹಣೆ ಸಮಿತಿ ಸದಸ್ಯರು ಮತ್ತು ಗ್ರಾಮದ ಒಟ್ಟು 8 ಜನರ ಮೇಲೆ ಸ್ವಯಂಪ್ರೇರಿತ (ಸುಮೋಟೊ) ಪ್ರಕರಣ ದಾಖಲಿಸಿದ್ದಾರೆ.

ದೂರು ಪ್ರತಿ
ದೂರು ಪ್ರತಿ

ಪ್ರಕರಣದ ವಿವರ:

ಕಾರಟಗಿಯ ರಾಜೀವ್​​ಗಾಂಧಿ ನಗರದ ಸಿಂಧೋಳಿ ಸಮುದಾಯಕ್ಕೆ ಸೇರಿದ ಮಿಠಾಯಿ ಮಾರಾಟಗಾರ ಮಾರೆಪ್ಪ ಸೆ.16ರಂದು ಬೆಳಗ್ಗೆ 9 ಗಂಟೆಗೆ ದೇಗುಲಕ್ಕೆ ಪೂಜೆ ಮಾಡಲು ಹೋದಾಗ ಆರೋಪಿಗಳು ಆಕ್ಷೇಪಿಸಿದ್ದಾರೆ. ದೇವಸ್ಥಾನಕ್ಕೆ ಸಿಂಧೋಳಿ ಜನಾಂಗದವರು ಹೋಗಬಾರದು, ಮಲೀನವಾಗುತ್ತದೆ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಅಲ್ಲದೇ ಪಂಚಾಯಿತಿ ಮಾಡಿ ದಂಡ ಕಟ್ಟಬೇಕು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಸವರಾಜ ಬಡಿಗೇರ ಪೂಜಾರಿ, ರೇವಣಸ್ವಾಮಿ ಶೇಖರಯ್ಯಸ್ವಾಮಿ, ಶೇಖರಪ್ಪ ಬಸಣ್ಣ ರ್ಯಾವಣಕಿ, ಶರಣಪ್ಪ ವೀರಭದ್ರಪ್ಪ ಗುಂಜಳ್ಳಿ, ಪ್ರಶಾಂತ ರಾಯಪ್ಪ ತಮ್ಮಣ್ಣವರ್, ಬಸವರಾಜ ಹನುಮಪ್ಪ ತಳವಾರ, ಕಾಡಪ್ಪ ನಾಯಕ್ ಹಾಗೂ ದುರುಗೇಶ ಅಂಬಣ್ಣ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನವೀನ್ ಶಿಂತ್ರೆ, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ತುಗ್ಲೆಪ್ಪ ನಾಯಕ್ ಭೇಟಿ ನೀಡಿ ಸಂತ್ರಸ್ತನಿಂದ ಮಾಹಿತಿ ಕಲೆ ಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.