ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸ್ಥಳಾಂತರ ಮಾಡದಂತೆ ಮನವಿ

author img

By

Published : Oct 13, 2021, 5:18 PM IST

kolar people appeals as don't relocate the KGF police office

ಸುಮಾರು 130 ವರ್ಷಗಳ ಹಿಂದೆ ಪೊಲೀಸ್ ವ್ಯವಸ್ಥೆಯನ್ನು ರಾಜ್ಯದಲ್ಲೇ ಮೊದಲು ಕೆಜಿಎಫ್​ನಲ್ಲಿ ಜಾರಿಗೆ ತರಲಾಯಿತು. ಆದ್ರೆ, ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ವಿಲೀನಕ್ಕೆ ಸಿದ್ಧತೆ ಆರಂಭವಾಗಿದೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆ ಪೊಲೀಸ್​ ಸಿಬ್ಬಂದಿ ಅವರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ..

ಕೋಲಾರ : ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ವಿಲೀನಕ್ಕೆ ಸಿದ್ಧತೆ ಆರಂಭವಾಗಿದೆ. ಇದೇ ತಿಂಗಳ ಕೊನೆಯೊಳಗೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆಯಾ ಅನ್ನೋ ಆತಂಕ ಇಲ್ಲಿರುವ ಪೊಲೀಸರನ್ನು ಕಾಡುತ್ತಿದೆ.

ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸ್ಥಳಾಂತರ ಮಾಡದಂತೆ ಮನವಿ..

ಕೆಜಿಎಫ್​ನಲ್ಲಿ ಜಾನ್ ಟೈಲರ್ ಅಂಡ್ ಸನ್ಸ್ ಗಣಿಗಾರಿಕೆ ಆರಂಭವಾದಾಗ ಅಂದು ಬ್ರಿಟಿಷರು ತಮ್ಮ ಸುರಕ್ಷತೆಗಾಗಿ ಸುಮಾರು 130 ವರ್ಷಗಳ ಹಿಂದೆ ಪೊಲೀಸ್ ವ್ಯವಸ್ಥೆಯನ್ನು ರಾಜ್ಯದಲ್ಲೇ ಮೊದಲು ಇಲ್ಲಿ ಜಾರಿಗೆ ತಂದರು. ಇಡೀ ರಾಜ್ಯದಲ್ಲಿಯೇ ಕೆಜಿಎಫ್ ಪೊಲೀಸ್ ವ್ಯವಸ್ಥೆ ಪಾರಂಪರಿಕ ಹಿನ್ನೆಲೆ ಹೊಂದಿದೆ.

ಆದ್ರೆ, ಇಂತಹ ಕಚೇರಿ ಇಂದು ವಿಲೀನಕ್ಕೆ ಸಿದ್ಧವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಗಣಿಗಾರಿಕೆ ನಡೆಸುತ್ತಿದ್ದಾಗ ಸುಮಾರು 35 ಸಾವಿರ ಕಾರ್ಮಿಕರು ಗಣಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಚಿನ್ನದ ಗಣಿಗಳಲ್ಲಿ ಕಳ್ಳತನ ತಡೆಯುವುದು ಮತ್ತು ತಮ್ಮ ಭದ್ರತೆಗಾಗಿ ಬ್ರಿಟಿಷರು ವಿಶೇಷ ಪೊಲೀಸ್ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತಂದಿದ್ದರು ಎನ್ನಲಾಗ್ತಿದೆ.

ಕೆಜಿಎಫ್ ಎಸ್ಪಿ ಕಚೇರಿ : ಕೆಜಿಎಫ್​ನಲ್ಲಿ ಮೈನಿಂಗ್ ಮತ್ತು ನಾನ್ ಮೈನಿಂಗ್ ಏರಿಯಾ ಎಂಬ ಎರಡು ಪ್ರತ್ಯೇಕ ಪ್ರದೇಶಗಳನ್ನು ಬ್ರಿಟಿಷರು ಮಾಡಿಕೊಂಡಿದ್ದರು. ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶ ಮತ್ತು ಚಿನ್ನದ ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ವಾಸಿಸುವ ಬಂಗಲೆಗಳು ಹಾಗೂ ಕೆಜಿಎಫ್ ಕ್ಲಬ್ ಸೇರಿ ನಂದಿ ದುರ್ಗ, ಮೈಸೂರು ಹಾಲ್ ಮನರಂಜನಾ ಕ್ಲಬ್ ಪ್ರದೇಶಗಳಿಗೆ ಇತರ ನಾಗರಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಅಂದಿಗೆ ಚಿನ್ನದ ಗಣಿಯ ಅಧಿಕಾರಿಯೊಬ್ಬರಿಗೆ ಪೊಲೀಸ್ ಅಧಿಕಾರ ನೀಡಲಾಗಿತ್ತು. ಅದರಂತೆ ಸ್ವಾತಂತ್ರ್ಯ ಬಂದ ಮೇಲೂ ಕೆಜಿಎಫ್ ಎಸ್ಪಿ ಕಚೇರಿ ಮುಂದುವರೆಯಿತು.

ಎಸ್ಪಿಗೆ ಮನವಿ ಸಲ್ಲಿಕೆ : ಎಸ್ಪಿ ಕಚೇರಿ ಅಲ್ಲದೇ ಕೆಜಿಎಫ್​ನಲ್ಲಿ ಪ್ರತ್ಯೇಕ ಡಿಎಆರ್ ಸಿಬ್ಬಂದಿಯನ್ನು ಅಂದೇ ನೇಮಕ ಮಾಡಲಾಯಿತು. ಅವರಿಗಾಗಿ ಪ್ರತ್ಯೇಕ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಈಗಲೂ ಕೆಜಿಎಫ್ ಜಿಲ್ಲೆ ಎಂದು ಕರೆಯಲಾಗುತ್ತದೆ. ಹೀಗಿರುವಾಗ ಪ್ರತ್ಯೇಕವಾಗಿ ನೂತನ ವಿಜಯನಗರಕ್ಕೆ ಇಲ್ಲಿನ ಡಿಎಆರ್ ಹಾಗೂ ಡಿಸಿಆರ್‌ಬಿ ಕಚೇರಿ ಸ್ಥಳಾಂತರಿಸಲು ಸಿದ್ಧತೆ ನಡೆಯುತ್ತಿದೆ. ಪೊಲೀಸ್ ಸಿಬ್ಬಂದಿ, ಕುಟುಂಬಸ್ಥರು ಕಚೇರಿಯನ್ನು ವಿಲೀನ ಮಾಡದಂತೆ ಪ್ರತಿಭಟನೆ ಮಾಡಿ ಎಸ್ಪಿಗೆ ಮನವಿ ಸಲ್ಲಿಸಿದ್ದಾರೆ.

ಸ್ಥಳಾಂತರಕ್ಕೆ ಆದೇಶ : ಕೆಜಿಎಫ್ ಜನರು ಎಸ್ಪಿ ಕಚೇರಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಕೆಜಿಎಫ್ ಎಸ್ಪಿ ಕಚೇರಿ ಆಸ್ಮಿತೆಯ ಸಂಕೇತ. 90ರ ದಶಕದಲ್ಲಿಯೇ ಕೆಜಿಎಫ್ ಎಸ್ಪಿ ಪ್ರತ್ಯೇಕ ಕಚೇರಿ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಒಂದು ತಾಲೂಕಿಗೆ ಪ್ರತ್ಯೇಕ ಪೊಲೀಸ್ ವ್ಯವಸ್ಥೆ ಇರುವ ಕಾರಣ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂದು ಕೋಲಾರ ಎಸ್ಪಿ ಕಚೇರಿಯೊಂದಿಗೆ ವಿಲೀನ ಮಾಡಲು ಮುಂದಾಗಿತ್ತು.

ಆದ್ರೆ, ರಾಜಕೀಯ ಒತ್ತಡದಿಂದಾಗಿ ಸರ್ಕಾರದ ಆಜ್ಞೆ ಅನುಷ್ಠಾನವಾಗಲಿಲ್ಲ. ಈಗ ರಾಜ್ಯದಲ್ಲಿ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಉದಯವಾಗಿದೆ. ಅಲ್ಲಿ ನೂತನವಾಗಿ ಎಸ್ಪಿ ಕಚೇರಿಯನ್ನು ಆರಂಭಿಸಲಾಗಿದೆ. ಹೊಸದಾಗಿ ಹುದ್ದೆಗಳನ್ನು ಸೃಷ್ಟಿಸುವ ಬದಲು ಕೆಜಿಎಫ್ ಎಸ್ಪಿ ಕಚೇರಿ ಸಿಬ್ಬಂದಿಯನ್ನು ಸ್ಥಳಾಂತರ ಮಾಡಲು ಆರ್ಥಿಕ ಇಲಾಖೆ ಕಳೆದ ಆಗಸ್ಟ್ 19 ರಂದು ಆದೇಶ ಹೊರಡಿಸಿದೆ ಎನ್ನಲಾಗ್ತಿದೆ.

ಕೆಜಿಎಫ್ ಪೊಲೀಸ್ ಇಲಾಖೆ : ಕೆಜಿಎಫ್ ಪೊಲೀಸ್ ಇಲಾಖೆ ಎರಡು ತಾಲೂಕಿಗೆ ಮಾತ್ರ ಸೀಮಿತವಾಗಿದೆ. 12 ಪೊಲೀಸ್ ಠಾಣೆ, 14 ಸಿಪಿಐ ಸೇರಿ 900 ಮಂದಿ ಸಿಬ್ಬಂದಿ ಇಲ್ಲಿದ್ದಾರೆ. ಎಸ್ಪಿ ಕಚೇರಿಯ 240 ಮಂದಿ ಆಡಳಿತಾತ್ಮಕ ಸಿಬ್ಬಂದಿ ಮತ್ತು 248 ಡಿಎಆರ್ ಸಿಬ್ಬಂದಿಯನ್ನು ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿದೆ. ಎಸ್ಪಿ ಕಚೇರಿ ರದ್ದು ಆದ ನಂತರ ಡಿವೈಎಸ್ಪಿ ಉಪ ವಿಭಾಗ ಕೆಜಿಎಫ್‌ನಲ್ಲಿ ಮುಂದುವರೆಯಲಿದೆ. ಹಾಲಿ ಐಪಿಎಸ್ ದರ್ಜೆಯ ಇಲಕ್ಕಿಯಾ ಕರುಣಾಗರನ್ ಕೆಜಿಎಫ್ ಎಸ್ಪಿ ಕಚೇರಿಯ ಕೊನೆಯ ಎಸ್ಪಿಯಾಗಲಿದ್ದಾರೆ.

ಇದನ್ನೂ ಓದಿ: ಡೀಲಿಂಗ್​​ ಸಂಭಾಷಣೆ ಡಿಕೆಶಿಯನ್ನು ಮುಗಿಸಲು ಸಿದ್ದರಾಮಯ್ಯ ಮಾಡಿರುವ ತಂತ್ರ: ಕಟೀಲ್​

ಕೆಜಿಎಫ್ ಎಸ್ಪಿ ಕಚೇರಿಯನ್ನು ರದ್ದುಪಡಿಸುವ ವಿಚಾರ ಕೆಜಿಎಫ್ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಎರಡು ತಿಂಗಳ ಹಿಂದೆಯೇ ಬಂದ್ ಆಚರಿಸಿ ವಿವಿಧ ರಾಜಕೀಯ ಸಂಘಟನೆಗಳು ಸರ್ಕಾರದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಆದ್ರೆ, ವಿಜಯನಗರ ಜಿಲ್ಲೆ ಉದಯವಾಗುತ್ತಿದ್ದಂತೆ ಕೆಜಿಎಫ್ ಎಸ್ಪಿ ಕಚೇರಿ ರದ್ದು ಮಾಡುವ ಪ್ರಕ್ರಿಯೆ ಮತ್ತೆ ಜೀವ ಪಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.