ನಕಲಿ ದಾಖಲೆ ಸೃಷ್ಟಿಸಿ 8 ಎಕರೆ ಜಮೀನು ಲಪಟಾಯಿಸಲು ಯತ್ನ: 10 ಮಂದಿ ಬಂಧನ ​

author img

By

Published : Sep 23, 2022, 11:21 AM IST

arrest

ಮುಳುಬಾಗಿಲು ತಾಲೂಕಿನ ದಾರೇನಹಳ್ಳಿ ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ 8 ಎಕರೆ ಜಮೀನು ಲಪಟಾಯಿಸಲು ಯತ್ನಿಸಿದ್ದ ಹತ್ತು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಲಾರ: ನಕಲಿ ದಾಖಲೆ ಸೃಷ್ಟಿಸಿ 8 ಎಕರೆ 38 ಗುಂಟೆ ಜಮೀನನ್ನು ಲಪಟಾಯಿಸಲು ಮುಂದಾಗಿದ್ದ ಹತ್ತು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೋಲಾರ ಜಿಲ್ಲಾ ವರಿಷ್ಠಾಧಿಕಾರಿ ಡಿ.ದೇವರಾಜ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಳುಬಾಗಿಲು ತಾಲೂಕಿನ ದಾರೇನಹಳ್ಳಿ ಗ್ರಾಮದ ಸರ್ವೇ ನಂ. 36/1 ರಲ್ಲಿ 1 ಎಕರೆ 28 ಗುಂಟೆ, 36/2 ರಲ್ಲಿ 6 ಎಕರೆ 1 ಗುಂಟೆ, 33/2 ರಲ್ಲಿ 1 ಎಕರೆ 9 ಗುಂಟೆ ಸೇರಿದಂತೆ ಒಟ್ಟು 8 ಎಕರೆ 38 ಗುಂಟೆ ಜಮೀನು ದೆಹಲಿ ಮೂಲದವರಾದ ಧರ್ಮನಾಥ ಕುನ್ವರ್ ಹೆಸರಲ್ಲಿದೆ. ಅವರು ಮೃತಪಟ್ಟಿದ್ದು, ಅವರ ಮಗ ಮುಕೇಶ್ ಕುನ್ವರ್ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮುಳಬಾಗಿಲು ತಹಶೀಲ್ದಾರ್ ಕಚೇರಿಯಲ್ಲಿ ಖಾತೆ ಮಾಡಿಸಿಕೊಳ್ಳಲು ಮುಕೇಶ್ ಸಬರ್ ವಾಲ್ ಎಂಬ ಆರೋಪಿ ಮತ್ತು ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ ಕೃಷ್ಣಾರೆಡ್ಡಿ ಸೇರಿ ಇತರರು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಪಿಎಸ್​​ಐ ಒಬ್ಬರಿಂದ ವಂಚನೆ.. ವಿಜಯಪುರ ಯುವಕನ ಆರೋಪ

ತಮ್ಮ ಜಮೀನಿನಲ್ಲಿ ಮರಗಳನ್ನು ಕಡಿದು ಹಾಕಿರುವವರ ವಿರುದ್ಧ ಕ್ರಮಕೈಗೊಳ್ಳಲು ಆ. 8 ರಂದು ಜಮೀನಿನ ಮೂಲ ವಾರಸುದಾರರಾದ ಧರ್ಮನಾಥ ಕನ್ವರ್ ಹಾಗೂ ಬ್ರಿಜ್ ಕಿಶೋರಿ ದೇವಿ ಮುಳಬಾಗಿಲು ಗ್ರಾಮಾಂತರ ಠಾಣೆಗೆ ನೀಡಿದ ದೂರಿನ ಮೇರೆಗೆ ವಿಶೇಷ ತಂಡ ರಚಿಸಿ, ತನಿಖೆಯನ್ನು ಕೈಗೊಂಡು ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿತ್ತು. ಜಮೀನಿನ ನಿಜವಾದ ಮಾಲೀಕರಾದ ಧರ್ಮನಾಥ ಕುನ್ವರ್ ಮತ್ತು ಬ್ರಿಜ್ ಕಿಶೋರಿ ದೇವಿ ಅವರ ನಕಲಿ ಮರಣ ಪ್ರಮಾಣ ಪತ್ರ ಮತ್ತು ಇವರ ಮಗ ಮುಕೇಶ್ ಕುನ್ವರ್ ಅವರ ಆಧಾರ್ ಕಾರ್ಡ್, ಪಾನ್ ಕಾರ್ಡ್​​ಗಳಿಗೆ ಆರೋಪಿ ಮುಕೇಶ್ ಸಬರ್ ಅವರ ಫೋಟೋ ಹಾಕಿ ತಾನೇ ಧರ್ಮನಾಥ ಕುನ್ವರ್ ಅವರ ಮಗ ಎಂದು ಬಿಂಬಿಸುವಂತೆ ನಕಲಿ ಆಧಾರ್, ಪಾನ್ ಕಾರ್ಡ್ ಮತ್ತು ಇತರೆ ದಾಖಲಾತಿ ಸೃಷ್ಟಿ ಮಾಡಿ ಸದರಿ ಜಮೀನನ್ನು ಲಪಟಾಯಿಸಲು ಮುಂದಾಗಿದ್ದರು.

ಇದನ್ನೂ ಓದಿ: ಮೈಸೂರು: ಚೀಟಿ ವ್ಯವಹಾರದಲ್ಲಿ ವಂಚನೆ, ರಸ್ತೆಯಲ್ಲಿ ಕುಳಿತು ಗೋಳಾಡಿದ ಮಹಿಳೆ

ದೆಹಲಿಯ ಹೋಟೆಲ್​ವೊಂದರಲ್ಲಿ ಕೆಲಸ ಮಾಡುವ ಆರೋಪಿ ಮುಖೇಶ್ ಸಬರ್ ವಾಲ್, ಸ್ಥಳೀಯ ಆರೋಪಿಗಳಾದ ಕೃಷ್ಣಾರೆಡ್ಡಿ, ರಮೇಶ್ ರೆಡ್ಡಿ, ಸಲಿಂ, ಮುರಳಿ ಕೃಷ್ಣ, ಮಂಜುನಾಥ, ಶ್ರೀನಿವಾಸ ರೆಡ್ಡಿ, ಶಿವಕುಮಾರ, ವೆಂಕಟೇಶಪ್ಪ, ನಾರಾಯಣಪ್ಪ ಮತ್ತು ಮಂಜುನಾಥ ಇವರು ಮೋಸದಿಂದ ಅಶೋಕ್ ಕುಮಾರ್ ಎಂಬುವರಿಗೆ ನೋಂದಣಿ ಇಲ್ಲದ ಕ್ರಯದ ಕರಾರು ಮಾಡಿಕೊಟ್ಟು 49 ಲಕ್ಷ ನಗದು ಹಣ ಹಾಗೂ 28 ಲಕ್ಷದ ಎರಡು ಚೆಕ್ಕುಗಳನ್ನು ಪಡೆದುಕೊಂಡು ಮೋಸ ಮಾಡಿ, ಜಮೀನಿನಲ್ಲಿರುವ ಮರಗಳನ್ನು ಕಟಾವು ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.