ಕೊಡಗು ಗಡಿ ಭಾಗದಲ್ಲಿ ಧಾರಾಕಾರ ಮಳೆ: ಗ್ರಾಮಸ್ಥರಿಗೆ ಸಂಕಷ್ಟ

author img

By

Published : Aug 3, 2022, 10:43 AM IST

kodagu

ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ. ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಕೂಡ ಕೊಯನಾಡು ಹಾಗೂ ಸಂಪಾಜೆ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳನ್ನು ವೀಕ್ಷಿಸಿದರು. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಯನಾಡು ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.

ಕೊಡಗು: ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದೆ. ಆದರೆ ಜಿಲ್ಲೆಯ ಗಡಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗ್ರಾಮಸ್ಥರಿಗೆ ಜಲ ಸಂಕಷ್ಟ ಎದುರಾಗಿದೆ. ಸೋಮವಾರ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಪಯಸ್ವಿನಿ ನದಿ ತುಂಬಿ ಹರಿದು ಸಂಪಾಜೆ ಸಮೀಪದ ಕಲ್ಲುಗುಂಡಿ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಕ್ಕಪಕ್ಕದ ಅಂಗಡಿ, ಮುಂಗಟ್ಟು, ಮನೆಗಳಿಗೂ ನೀರು ನುಗ್ಗಿದೆ. ವರ್ತಕರಿಗೆ ಅಪಾರ ನಷ್ಟ ಉಂಟಾಗಿದ್ದು, ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಕಿಂಡಿ ಅಣೆಕಟ್ಟೆಯಿಂದ ಅಪಾಯ: ಇದೇ ವ್ಯಾಪ್ತಿಯ ಕೊಯನಾಡಿನಲ್ಲೂ ಮಳೆಯಿಂದ ಪ್ರವಾಹ ಉಂಟಾಗಿದೆ. ಗ್ರಾಮಸ್ಥರ ವಿರೋಧದ ನಡುವೆಯೂ ಇಲ್ಲಿ ನಿರ್ಮಾಣಗೊಂಡಿರುವ ಕಿಂಡಿ ಅಣೆಕಟ್ಟೆಯಲ್ಲಿ ಮರದ ದಿಮ್ಮಿಗಳು ಕೊಚ್ಚಿ ಬಂದು ನಿಂತ ಪರಿಣಾಮ ಅಪಾಯದ ಮಟ್ಟ ಮೀರಿ ಹರಿದ ನದಿಯ ನೀರು ಸುತ್ತಮುತ್ತಲ ಮನೆಗಳನ್ನು ಆವರಿಸಿದೆ. ಪಕ್ಕದಲ್ಲೇ ಇರುವ ನಿವಾಸಿಗಳು ರಾತ್ರೋರಾತ್ರಿ ಮನೆ ಖಾಲಿ ಮಾಡಿದರು. ಹಲವು ಕುಟುಂಬಗಳನ್ನು ಕೊಯನಾಡಿನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಪ್ರತಿಕ್ರಿಯೆ

ಶಾಸಕರ ಭೇಟಿ: ಪ್ರವಾಹ ಪೀಡಿತ ಕೊಯನಾಡಿಗೆ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಪರಿಶೀಲಿಸಿದರು. ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾಳಜಿ ಕೇಂದ್ರದಲ್ಲಿರುವ ಕುಟುಂಬಗಳಿಗೆ ಧೈರ್ಯ ತುಂಬಿದರು. ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಕೂಡ ಕೊಯನಾಡು ಹಾಗೂ ಸಂಪಾಜೆ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳನ್ನು ವೀಕ್ಷಿಸಿದರು. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಯನಾಡು ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.

ಗ್ರಾಮಸ್ಥರ ಅಸಮಾಧಾನ: 2018ರಲ್ಲಿ ಸುರಿದ ಮಹಾಮಳೆ ಮತ್ತು ಜಲಸ್ಫೋಟದಿಂದ ಗುಡ್ಡಗಳು ಕುಸಿದು ಬಂದು ಜೋಡುಪಾಲ ಹಾಗೂ ಕೊಯನಾಡಿನಲ್ಲಿ ಪಯಸ್ವಿನಿ ನದಿಯ ಮಾರ್ಗವೇ ಬದಲಾಗಿತ್ತು. ಅಲ್ಲದೆ ಮನೆಗಳು ಕೊಚ್ಚಿ ಹೋಗಿ ಸಾವು ನೋವುಗಳು ಸಂಭವಿಸಿತ್ತು. ಈ ಹಿನ್ನೆಲೆ ಕೊಯನಾಡಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡುವುದು ಹೆಚ್ಚು ಅಪಾಯಕಾರಿ ಎಂದು 2021ರಲ್ಲಿ ಕಾಮಗಾರಿ ಆರಂಭದ ಸಂದರ್ಭದಲ್ಲೇ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು.

ಆದರೆ ಸ್ಥಳೀಯರ ಅಭಿಪ್ರಾಯಗಳನ್ನು ಕಡೆಗಣಿಸಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿದ ಪರಿಣಾಮ ಇಂದು ಕೊಯನಾಡು ನದಿ ವ್ಯಾಪ್ತಿಯ ಮನೆಗಳು ಮುಳುಗಡೆಯ ಅಪಾಯ ಎದುರಿಸುತ್ತಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಮ್ಮ ಮನವಿಯನ್ನು ಧಿಕ್ಕರಿಸಿ ಕಿಂಡಿ ಅಣೆಕಟ್ಟು ನಿರ್ಮಿಸಿದ್ದಾರೆ. ಮಳೆಯ ರಭಸಕ್ಕೆ ಕೊಚ್ಚಿ ಬರುತ್ತಿರುವ ಮರದ ದಿಮ್ಮಿಗಳು ಇಲ್ಲಿ ನಿಂತು ಪ್ರವಾಹ ಏರ್ಪಡುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗಾಳಿ, ಮಳೆಯಿಂದ ನಾಲ್ಕು ದಿನದಿಂದ ಬೆಟ್ಟದಲ್ಲಿ ಸಿಲುಕಿದ್ದ ವೃದ್ದೆ ರಕ್ಷಣೆ! ಪೊದೆಯಲ್ಲಿ ಸಿಲುಕಿದ್ದ ಮಹಿಳೆ ಪಾರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.