ಕೋರ್ಟ್ಗೆ ಶರಣಾಗುವ ಮುನ್ನ ಆರ್ ಡಿ ಪಾಟೀಲ್ ವಿಡಿಯೋ ಬಾಂಬ್: ತನಿಖಾಧಿಕಾರಿ ವಿರುದ್ಧ ಗಂಭೀರ ಆರೋಪ
Updated on: Jan 24, 2023, 5:16 PM IST

ಕೋರ್ಟ್ಗೆ ಶರಣಾಗುವ ಮುನ್ನ ಆರ್ ಡಿ ಪಾಟೀಲ್ ವಿಡಿಯೋ ಬಾಂಬ್: ತನಿಖಾಧಿಕಾರಿ ವಿರುದ್ಧ ಗಂಭೀರ ಆರೋಪ
Updated on: Jan 24, 2023, 5:16 PM IST
ಪಿಎಸ್‌ಐ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಆರ್ ಡಿ ಪಾಟೀಲ್ ತನಿಖಾಧಿಕಾರಿ ವಿರುದ್ಧವೇ ಆರೋಪ ಮಾಡಿರುವ ವಿಡಿಯೋ ಬಾಂಬ್ ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸುತ್ತಿದೆ.
ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಕೋರ್ಟ್ಗೆ ಹಾಜರಾಗಿರುವ ಪ್ರಮುಖ ಆರೋಪಿ ಆರ್ ಡಿ ಪಾಟೀಲ್, ಬಿಡುಗಡೆ ಮಾಡಿರುವ ಮತ್ತೊಂದು ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಸಿಐಡಿ ತನಿಖಾಧಿಕಾರಿ ಶಂಕರ್ಗೌಡ ವಿರುದ್ಧ ಹಣಕ್ಕೆ ಬೇಡಿಕೆ ಇಟ್ಟಿರುವ ಗಂಭೀರ ಆರೋಪ ಮಾಡಿದ್ದಾರೆ.
’’ನಮ್ಮ ಜೊತೆ ಹೊಂದಾಣಿಕೆ ಮಾಡಿಕೋ ನಿನಗೆ ಈ ಕೇಸ್ನಿಂದ ಬಚಾವ್ ಮಾಡುತ್ತೇವೆ. ಈ ಕೇಸ್ನಲ್ಲಿ ನಿನಗೆ ರಿಲಿಫ್ ಕೂಡಾ ನೀಡುತ್ತೇವೆ. ನನಗೆ 3 ಕೋಟಿ ರೂಪಾಯಿ ಕೊಡು ಅಂತಾ ಡಿಮ್ಯಾಂಡ್ ಮಾಡಿದ್ದು, ಅದರಂತೆ ನಾನು ನನ್ನ ಅಳಿಯನ ಮೂಲಕ ಬ್ಯಾಂಕ್ ಆಫ್ ಬರೋಡಾದಲ್ಲಿನ 76 ಲಕ್ಷ ರೂಪಾಯಿ ಹಣವನ್ನು ಸಿಐಡಿ ಅಧಿಕಾರಿಗೆ ತಲುಪಿಸಿದ್ದೇನೆ. ಈಗ ಉಳಿದ ಹಣ ನೀಡಲಾಗದ ಕಾರಣ ನನ್ನ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ‘‘ ಎಂದು ವಿಡಿಯೋದಲ್ಲಿ ಆರ್ ಡಿ ಪಾಟೀಲ್ ಆರೋಪ ಮಾಡಿದ್ದಾರೆ.
’’ಇದಕ್ಕೆ ಸಾಕ್ಷಿಯಾಗಿ ಹಣದ ವಿಚಾರವಾಗಿ ನಡೆದಿರುವ ಮಾತುಕತೆಯ ಆಡಿಯೋ ಕೂಡ ಇದೆ. ನಾನು ಈಗಾಗಲೇ ಲೋಕಾಯುಕ್ತರು, ಎಡಿಜಿಪಿ ಅಲೋಕಕುಮಾರ್, ಸಿಐಡಿ ಮೇಲಧಿಕಾರಿಗಳು, ಕಲಬುರಗಿ ಸಿಟಿ ಪೊಲೀಸ್ ಕಮಿಷನರ್ ಮತ್ತು ಗೃಹ ಮಂತ್ರಿಗಳಿಗೆ ದೂರು ನೀಡಿದ್ದೇನೆ. ಹಣಕ್ಕೆ ಬೇಡಿಕೆ ಇಟ್ಟಿರೋ ಆಡಿಯೋ ಸಂಭಾಷಣೆ ಸಾಕ್ಷಿ ಸಮೇತ ಸಮೇತ ರಿಜಿಸ್ಟರ್ ಪೋಸ್ಟ್ ಮೂಲಕ ದೂರು ಕೊಟ್ಟಿದ್ದೇನೆ. ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದೇನೆ. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಆಡಿಯೋ ಸಮೇತ ದಾಖಲೆ ಸಲ್ಲಿಸಲಾಗುವುದು‘‘ ಎಂದು ಆರೋಪಿ ಆರ್ ಡಿ ಪಾಟೀಲ್ ತಿಳಿಸಿದ್ದಾನೆ.
ತಪ್ಪಿದ್ದರೆ ಸೂಕ್ತ ಕ್ರಮ: ಪ್ರಕರಣದ ಆರೋಪಿಯ ಆಡಿಯೋ ಬಾಂಬ್ ಕುರಿತಂತೆ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, ’’ಈ ಕುರಿತು ತನಿಖೆ ಬಳಿಕ ತನಿಖಾಧಿಕಾರಿಯ ತಪ್ಪಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’’ ಎಂದು ಹೇಳಿದ್ದಾರೆ.
ಸತ್ಯ ಆಗಿದ್ದರೆ ಒಂದು ಕ್ಷಣವೂ ಬಿಡುವುದಿಲ್ಲ: ಇದೇ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಾ ಬೆಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ್ದು, ’’ಆರೋಪಿ ಏನಿಬೇಕಾದರೂ ಹೇಳಬಹುದು. ವಿಡಿಯೋ ಸತ್ಯ ಆಗಿದ್ದರೆ ತನಿಖಾಧಿಕಾರಿಯನ್ನು ಒಂದು ಕ್ಷಣವೂ ಬಿಡುವುದಿಲ್ಲ. ಸಿಐಡಿ ಅಧಿಕಾರಿ ಇರಬಹುದು, ಐಪಿಎಸ್ ಅಧಿಕಾರಿಯಾಗಿರಬಹುದು ಯಾರನ್ನ ಬಿಡೋದಿಲ್ಲ. ಆರೋಪಿಯ ಹೇಳಿಕೆ ಎಷ್ಟು ಮಹತ್ವ ಇದೆ ಎಂದು ನೋಡಬೇಕಾಗುತ್ತದೆ. ವಿಡಿಯೋ ಇದ್ದರೆ ಅದನ್ನ ಗಂಭೀರವಾಗಿ ತೆಗೆದುಕೊಳ್ಳಲು ಹೇಳುತ್ತೇನೆ, ಯಾರಿಗೂ ಕ್ಷಮೆ ಇಲ್ಲ. ಆರೋಪಿ ಆರ್.ಡಿ ಪಾಟೀಲ್ನ ಈ ಹೇಳಿಕೆ ಬಗ್ಗೆ ತನಿಖೆ ಆಗಲಿದೆ’’ ಎಂದು ತಿಳಿಸಿದರು.
ಸಿಐಡಿ ಅಧಿಕಾರಿಗಳು ಆರ್ ಡಿ ಪಾಟೀಲ್ ಮನೆಗೆ ಪರಿಶೀಲನೆಗೆ ಬಂದಾಗ ಆರೋಪಿ, ಪರಾರಿಯಾಗಿದ್ದರು. ಷರತ್ತುಬದ್ಧ ಜಾಮೀನಿನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಆರ್ಡಿ ಪಾಟೀಲ್ ನ್ಯಾಯಾಲಯದ ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನೆಲೆ ಜಾಮೀನನ್ನು ರದ್ದು ಮಾಡುವಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಬಂಧನದ ಭೀತಿ ಎದುರಾದ ಹಿನ್ನೆಲೆ ಆರೋಪಿ ಆರ್ ಡಿ ಪಾಟೀಲ್ ಸ್ವಯಂಪ್ರೇರಿತವಾಗಿ ನಿನ್ನೆ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಇದನ್ನೂ ಓದಿ: ಆರ್.ಡಿ.ಪಾಟೀಲ್ ಆಡಿಯೋ: ತನಿಖಾಧಿಕಾರಿಯ ತಪ್ಪಿದ್ದರೆ ನಿರ್ದಾಕ್ಷಿಣ್ಯ ಕ್ರಮ- ಸಿಎಂ ಬೊಮ್ಮಾಯಿ
