ಚಿಂಚೋಳಿಯ ಹಲವೆಡೆ ಭೂಕಂಪನ: ಜೀವಭಯದಲ್ಲಿ ಗ್ರಾಮ ತೊರೆಯುತ್ತಿರುವ ಜನ

author img

By

Published : Oct 14, 2021, 11:40 AM IST

gadikeshwar-earthquake-villagers-leaving-village

ಚಿಂಚೋಳಿ ತಾಲೂಕಿನಲ್ಲಿ ಭೂಕಂಪನವಾಗುತ್ತಿರುವ ಹಿನ್ನೆಲೆಯಲ್ಲಿ ಗಡಿಕೇಶ್ವರ​​​​ ಗ್ರಾಮದ ಶೇ 75ರಷ್ಟು ಜನರು ಊರು ತೊರೆದು ಪಟ್ಟಣ ಹಾಗೂ ನೆಂಟರಿಷ್ಟರ ಮನೆ ಸೇರುತ್ತಿದ್ದಾರೆ. ಇದೆಲ್ಲದರ ಮಧ್ಯೆ ಗ್ರಾಮಸ್ಥರ ಆತಂಕ ದೂರ ಮಾಡಲು ಬೆಂಗಳೂರಿನಿಂದ ವಿಜ್ಞಾನಿಗಳ ತಂಡವನ್ನು ಗ್ರಾಮಕ್ಕೆ ಕಳುಹಿಸಲು ಸರ್ಕಾರ ಮುಂದಾಗಿದೆ‌‌.

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಹಲವೆಡೆ ಮತ್ತೆ ಭೂಕಂಪನವಾಗಿದೆ. ನಿರಂತರವಾಗಿ ಭೂಮಿ ನಡುಗುತ್ತಿರುವ ಹಿನ್ನೆಲೆಯಲ್ಲಿ ಗಡಿಕೇಶ್ವರ ಗ್ರಾಮಸ್ಥರು ಎರಡನೇ ದಿನವೂ ಗಂಟುಮೂಟೆ ಕಟ್ಟಿಕೊಂಡು ಗ್ರಾಮ ತೊರೆಯೋಕೆ ಮುಂದಾಗಿದ್ದಾರೆ.

ಆದ್ರೆ ಕೆಲವು ಕೃಷಿಕ ಕುಟುಂಬಗಳು, ಜಾನುವಾರುಗಳನ್ನು ತೆಗೆದುಕೊಂಡು ನಾವು ಎಲ್ಲಿಗೆ ಹೋಗೋದು?, ನಮಗೆ ಇಲ್ಲೇ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳಲು ಮುಂದಾಗಿದ್ದಾರೆ.

ನಿನ್ನೆ ಶೇ 50ರಷ್ಟು ಕುಟುಂಬಗಳು ಗ್ರಾಮ ತೊರೆದಿವೆ. ಇಂದು ಕೂಡ ಸುಮಾರು ಶೇ 25ರಷ್ಟು ಕುಟುಂಬಗಳು ಊರು ಬಿಡುತ್ತಿದ್ದಾರೆ. ಈಗಾಗಲೇ ಒಟ್ಟು 75 ಪ್ರತಿಶತದಷ್ಟು ಜನರು ಗ್ರಾಮ ಬಿಟ್ಟಿದ್ದಾರೆ. ಕೆಲವರು ಗಂಟುಮೂಟೆ ಕಟ್ಟಿಕೊಂಡು ಸಂಬಂಧಿಕರ ಮನೆಗೆ ತೆರಳಿದರೆ, ಇನ್ನೂ ಕೆಲವರು ಪಟ್ಟಣ ಸೇರಿಕೊಂಡು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಆದರೆ, ಗ್ರಾಮದಲ್ಲಿರುವ ದೊಡ್ಡದೊಡ್ಡ ಕೃಷಿಕ ಕುಟುಂಬಗಳು ಮಾತ್ರ ಜಾನುವಾರುಗಳು ಕಟ್ಟಿಕೊಂಡು ಗ್ರಾಮ ಬಿಡೋದಕ್ಕೆ ಆಗಲ್ಲ. ನಮಗೆ ತಾತ್ಕಾಲಿಕ ಶೆಡ್ ಹಾಗೂ ಕಾಳಜಿ ಕೇಂದ್ರ ನಿರ್ಮಿಸಿಕೊಡಿ ಎಂದು ಆಗ್ರಹಿಸುತ್ತಿದ್ದಾರೆ.

ವಿಜ್ಞಾನಿಗಳ ಭೇಟಿ: ಇದೆಲ್ಲದರ ಮಧ್ಯೆ ಗ್ರಾಮಸ್ಥರ ಆತಂಕ ದೂರ ಮಾಡಲು ಬೆಂಗಳೂರಿನಿಂದ ವಿಜ್ಞಾನಿಗಳ ತಂಡವನ್ನು ಗ್ರಾಮಕ್ಕೆ ಕಳುಹಿಸಲು ಸರ್ಕಾರ ಮುಂದಾಗಿದೆ‌‌. ಆದರೆ ಗ್ರಾಮಸ್ಥರು ಮಾತ್ರ ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.