ಲಂಚ ಪಡೆದ ಆರೋಪ: ಪ್ರಭಾರ ಪಿಡಿಒಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

author img

By

Published : Sep 5, 2020, 11:16 AM IST

Court

3 ಸಾವಿರ ರೂ. ಲಂಚ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದ ರಿಬ್ಬನಪಲ್ಲಿ ಗ್ರಾಮ ಪಂಚಾಯತ್ ಪ್ರಭಾರ ಪಿಡಿಒಗೆ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ, ಲಂಚ ಪ್ರತಿಬಂಧಕ ಕಾಯ್ದೆಯಡಿ 3 ವರ್ಷ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಫಲಾನುಭವಿಗಳಿಗೆ ಕೂಲಿ ಹಣ ಪಾವತಿಸಲು ಲಂಚ ಪಡೆದ ಆರೋಪದಡಿ ಗ್ರಾಪಂ ಪ್ರಭಾರ ಪಿಡಿಒಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಸೇಡಂ ತಾಲೂಕಿನ ಬಟಗೇರಾ (ಬಿ) ಗ್ರಾಮ ಪಂಚಾಯತ್ ಕಾರ್ಯದರ್ಶಿ ಹಾಗೂ ರಿಬ್ಬನಪಲ್ಲಿ ಗ್ರಾಮ ಪಂಚಾಯತ್ ಪ್ರಭಾರ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಜಗನ್ನಾಥ, 2013ರಲ್ಲಿ ನಾಡೇಪಲ್ಲಿ ತಾಂಡಾದ ನರಸ್ಯಾನಾಯಕ ರಾಠೋಡ ಹಾಗೂ ಅವರ ಕುಟುಂಬದವರ ಉದ್ಯೋಗ ಖಾತ್ರಿ ಕೂಲಿ ಹಣದ ಬಿಲ್ ಪಾಸ್ ಮಾಡಿ ಖಾತೆಗೆ ಹಣ ಹಾಕಿದ್ದರು. ಆದರೆ ಈ ಮಾಹಿತಿಯನ್ನು ಬಚ್ಚಿಟ್ಟು ಬಿಲ್ ಪಾಸ್ ಮಾಡಬೇಕಾದರೆ 3 ಸಾವಿರ ಲಂಚ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರಂತೆ.

ಕೂಲಿ ಕಾರ್ಮಿಕ ನರಸ್ಯಾನಾಯಕ ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಶಾಂತಿನಾ 2,500 ರೂ. ಲಂಚ ಪಡೆಯುವ ವೇಳೆ ದಾಳಿ ನಡೆಸಿ ಬಂಧಿಸಿದ್ದರು. ಇದೀಗ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್.ಜೆ.ಸತೀಶ ಸಿಂಗ್, ಆರೋಪಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ, ಲಂಚ ಪ್ರತಿಬಂಧಕ ಕಾಯ್ದೆಯಡಿ 3 ವರ್ಷ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.